ಮಂಗಳವಾರ, ಏಪ್ರಿಲ್ 20, 2021
32 °C

ಐಎಸ್‌ಎಲ್‌: ಸಡನ್ ಡೆತ್‌ನಲ್ಲಿ ಫೈನಲ್ ಪ್ರವೇಶಿಸಿದ ಮುಂಬೈ ಸಿಟಿ ಎಫ್‌ಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್: ರೋಚಕ ಹಣಾಹಣಿಯ ಕೊನೆಯಲ್ಲಿ ಆತಿಥೇಯ ಎಫ್‌ಸಿ ಗೋವಾವನ್ನು ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಮಣಿಸಿದ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿತು.

ಜಿಎಂಸಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಮೊದಲ ಸೆಮಿಫೈನಲ್‌ನ ಎರಡನೇ ಲೆಗ್ ಪಂದ್ಯದ ನಿಗದಿತ ಅವಧಿಯಲ್ಲಿ ಗೋಲು ದಾಖಲಾಗಲಿಲ್ಲ. ಹೀಗಾಗಿ ಅರ್ಧ ತಾಸು ಹೆಚ್ಚುವರಿ ಅವಧಿಯನ್ನು ನೀಡಲಾಯಿತು. ಈ ವೇಳೆಯಲ್ಲೂ ಚೆಂಡನ್ನು ಗುರಿ ಸೇರಿಸಲು ಉಭಯ ತಂಡಗಳು ವಿಫಲವಾದವು. ಹೀಗಾಗಿ ಫಲಿತಾಂಶ ನಿರ್ಣಯಿಸಲು  ಶೂಟ್‌ಔಟ್ ಮೊರೆಹೋಗಲಾಯಿತು. ಮೊದಲ 5 ಅವಕಾಶದಲ್ಲಿ ಉಭಯ ತಂಡಗಳು ತಲಾ ಎರಡು ಗೋಲು ಹೊಡೆದು ಸಮಬಲ ಸಾಧಿಸಿದವು. ಮತ್ತೆ ಐದು ಅವಕಾಶ ನೀಡಲಾಯಿತು. ಮುಂಬೈ 6–5ರಲ್ಲಿ ಗೆದ್ದು ಮೊದಲ ಬಾರಿ ಫೈನಲ್‌ಗೆ ಲಗ್ಗೆ ಇರಿಸಿತು.

ಒಟ್ಟು 18 ಸ್ಪಾಟ್ ಕಿಕ್‌ಗಳನ್ನು ಕಂಡ ಕೊನೆಯಲ್ಲಿ ಎರಡೂ ತಂಡಗಳು ಗೋಲ್‌ಕೀಪರ್‌ಗಳನ್ನು ಬದಲಿಸಿದ್ದವು. ಎಫ್‌ಸಿ ಗೋವಾದ ಎಡು ಬೇಡಿಯಾ ಮತ್ತು ಬ್ರೆಂಡನ್ ಫರ್ನಾಂಡಿಸ್ ಮೊದಲ ಎರಡು ಅವಕಾಶಗಳನ್ನು ಕೈಚೆಲ್ಲಿದರು. ಮುಂಬೈನ ಮೊದಲ ಅವಕಾಶದಲ್ಲಿ ಬಾರ್ತೊಲೊಮೆ ಒಗ್ಬೆಚೆ ಚೆಂಡನ್ನು ಗುರಿ ಮುಟ್ಟಿಸಿದರು. ಆದರೆ ಹರ್ನನ್ ಸಂಟಾನ ಅವರ ಕಿಕ್‌ ಗೋಲ್‌ಕೀಪರ್ ನವೀನ್ ಕುಮಾರ್ ವಿಫಲಗೊಳಿಸಿದರು. ಗೋವಾದ ಮೂರನೇ ಅವಕಾಶದಲ್ಲಿ ಇಗರ್ ಆಂಗುಲೊ ಗೋಲು ಗಳಿಸಿದರು. ಆದರೆ ಮುಂಬೈ ಎಫ್‌ಸಿ ಪರ ಹೂಗೊ ಬೌಮೋಸ್ ತೆಗೆದ ಕಿಕ್‌ ನವೀನ್ ಕುಮಾರ್ ತಡೆದರು. ಗೋವಾದ ನಾಲ್ಕನೇ ಅವಕಾಶದಲ್ಲಿ ಇವಾನ್ ಗೊಂಜಾಲೆಸ್ ಗೋಲು ದಾಖಲಿಸಿದರು. ಮುಂಬೈ ಪರ ರೇನಿಯರ್ ಫರ್ನಾಂಡಿಸ್ ಯಶಸ್ಸು ಕಂಡರು. ಐದನೇ ಅವಕಾಶದಲ್ಲಿ ಗೋವಾದ ಜೇಮ್ಸ್ ಡೊನಾಚಿ ಚೆಂಡನ್ನು ಹೊರಗೆ ಒದ್ದರು. ಅಹಮ್ಮದ್ ಜೊಹೊ ಅವರ ಕಿಕ್‌ಗೆ ನವೀನ್ ತಡೆಯೊಡ್ಡಿದರು. 

ಸಡನ್ ಡೆತ್‌ನಲ್ಲಿ ಇಶಾನ್ ಪಂಡಿತ, ಜಾರ್ಜ್ ಒರ್ಟಿಜ್ ಮತ್ತು ಆದಿಲ್ ಖಾನ್ ಗೋವಾ ಪರ ಯಶಸ್ಸು ಕಂಡರು. ಅಮೇಯ್ ರಾಣಾವಡೆ, ಮೊರ್ತಜಾ ಫಾಲ್ ಮತ್ತು ಮಂದಾರ್ ರಾವ್ ದೇಸಾಯಿ ಮುಂಬೈಗಾಗಿ ಗೋಲು ಗಳಿಸಿದರು. ನಾಲ್ಕನೇ ಅವಕಾಶದಲ್ಲಿ ಗೋವಾದ ಗ್ಲ್ಯಾನ್ ಮಾರ್ಟಿನ್ಸ್‌ ಒದ್ದ ಚೆಂಡು ಹೊರಗೆ ಸಾಗಿತು. ರಾವ್ಲಿನ್ ಬೋರ್ಜೆಸ್‌ ಚೆಂಡನ್ನು ಗುರಿ ಮುಟ್ಟಿಸುತ್ತಿದ್ದಂತೆ ಮುಂಬೈ ಪಾಳಯದಲ್ಲಿ ಸಂಭ್ರಮದ ಅಲೆ ಎದ್ದಿತು.

ಮೊದಲ ಲೆಗ್‌ನ ಪಂದ್ಯವನ್ನು ಉಭಯ ತಂಡಗಳು 2–2ರಲ್ಲಿ ಡ್ರಾ ಮಾಡಿಕೊಂಡಿದ್ದವು. ಆದ್ದರಿಂದ ಈ ಲೆಗ್‌ನಲ್ಲಿ ಯಾವುದಾದರೊಂದು ತಂಡಕ್ಕೆ ಗೆಲುವು ಅನಿವಾರ್ಯವಾಗಿತ್ತು. ಸತತ 14 ಪಂದ್ಯಗಳಲ್ಲಿ ಸೋಲರಿಯದೇ ಮುನ್ನುಗ್ಗಿದ್ದ ಗೋವಾ ಮತ್ತು ಎಎಫ್‌ಸಿ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿರುವ ಮುಂಬೈ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದವು. ಆದರೆ ಎರಡೂ ತಂಡಗಳು ರಕ್ಷಣೆಯಲ್ಲೂ ಪ್ರಾಬಲ್ಯ ಮೆರೆದ ಕಾರಣ ನಿಗದಿತ ಅವಧಿಯಲ್ಲಿ ಗೋಲು ಮೂಡಿಬರಲಿಲ್ಲ.

ತಂಡಗಳು ಜಿದ್ದಾಜಿದ್ದಿಯಿಂದ ಆಡಿದ ಕಾರಣ ಪ್ರತಿ ಕ್ಷಣವೂ ಪಂದ್ಯ ರೋಚಕವಾಯಿತು. 18ನೇ ನಿಮಿಷದಲ್ಲಿ ಗೋವಾಗೆ ಕಾರ್ನರ್ ಕಿಕ್ ಅವಕಾಶ ಲಭಿಸಿತ್ತು. ಆಲ್ಬರ್ಟೊ ನೊಗುವೆರಾ ಅವರ ಶ್ರಮವನ್ನು ಮುಂಬೈ ಗೋಲ್‌ಕೀಪರ್ ಅಮರಿಂದರ್ ಸಿಂಗ್ ವಿಫಲಗೊಳಿಸಿದರು. 24ನೇ ನಿಮಿಷದಲ್ಲಿ ಮುಂಬೈಗೂ ಕಾರ್ನರ್ ಕಿಕ್ ಅವಕಾಶ ಲಭಿಸಿತು. ಆದರೆ ರೆಡೀಮ್ ತ್ಲಾಂಗ್ ಅವರ ಚಾಣಾಕ್ಷ ಆಟದಿಂದಾಗಿ ಗೋವಾ ನಿಟ್ಟುಸಿರು ಬಿಟ್ಟಿತು.

37ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್ ಅವಕಾಶವನ್ನೂ ಮುಂಬೈ ಸಿಟಿ ಕೈಚೆಲ್ಲಿಕೊಂಡಿತು. ಗೋಲಿಲ್ಲದೆ ವಿರಾಮಕ್ಕೆ ತೆರಳಿದ ತಂಡಗಳು ದ್ವಿತೀಯಾರ್ಧದಲ್ಲಿ ಇನ್ನಷ್ಟು ಪೈಪೋಟಿ ನೀಡಿದರು. ಆದರೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಕೊನೆಯ ನಿಮಿಷದಲ್ಲಿ ಗೆಲುವಿನ ಗೋಲು ಗಳಿಸಲು ಗೋವಾಗೆ ಅತ್ಯಮೋಘ ಅವಕಾಶ ದೊರಕಿತ್ತು. ಆದರೆ ಜೇಮ್ಸ್ ಡೊನಾಚಿ ಅವರಿಗೆ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.