ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಮುಂಬೈ ವಿರುದ್ಧ ಬೆಂಗಾಲ್‌ ಹುಲಿಗಳಿಗೆ ಪುಟಿದೇಳುವ ಉತ್ಸಾಹ

Last Updated 30 ನವೆಂಬರ್ 2020, 13:13 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್: ಚೊಚ್ಚಲ ಪಂದ್ಯದಲ್ಲೇ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಮಂಗಳವಾರ ಸೆಣಸಲಿದೆ. ಮೊದಲ ಪಂದ್ಯದಲ್ಲಿ ಸೋಲುಂಡರೂ ಚೇತರಿಸಿಕೊಂಡು ಎರಡನೇ ಪಂದ್ಯವನ್ನು ಗೆದ್ದುಕೊಂಡಿರುವ ಮುಂಬೈ ತಂಡ ಜಯದ ಓಟವನ್ನು ಮುಂದುವರಿಸಲು ಪ್ರಯತ್ನಿಸಲಿದೆ.

ಮುಂಬೈ ಸಿಟಿ ಮೊದಲ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ 0–1 ಅಂತರದಲ್ಲಿ ಸೋತಿತ್ತು. ಆದರೆ ಎರಡನೇ ಪಂದ್ಯದಲ್ಲಿ ಆತಿಥೇಯ ಎಫ್‌ಸಿ ಗೋವಾ ವಿರುದ್ಧ 1–0 ಅಂತರದಲ್ಲಿ ಗೆದ್ದು ಸಂಭ್ರಮಿಸಿತ್ತು. ಇದೇ ಮೊದಲ ಬಾರಿ ಐಎಸ್‌ಎಲ್‌ನಲ್ಲಿ ಆಡಲು ಅವಕಾಶ ಪಡೆದುಕೊಂಡಿರುವ ಕೋಲ್ಕತ್ತದ ದೈತ್ಯ ತಂಡವೆಂದೇ ಹೆಸರು ಗಳಿಸಿರುವ ಈಸ್ಟ್ ಬೆಂಗಾಲ್ ತಂಡ ಕೋಲ್ಕತ್ತ ಡರ್ಬಿ ಎಂದು ಬಣ್ಣಿಸಲಾದ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ಗೆ 0–2 ಅಂತರದಲ್ಲಿ ಮಣಿದಿತ್ತು. ಆದರೆ ಪುಟಿದೆದ್ದು ಎದುರಾಳಿಗೆ ಕಠಿಣ ಸ್ಪರ್ಧೆ ಒಡ್ಡುವ ಸಾಧ್ಯತೆ ಇರುವುದರಿಂದ ಮಂಗಳವಾರದ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡುಬರುವ ನಿರೀಕ್ಷೆ ಇದೆ.

ಈ ಎರಡೂ ತಂಡಗಳ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವುದು ಹಿಂದಿನ ಪಂದ್ಯಗಳಲ್ಲಿ ಸಾಬೀತಾಗಿತ್ತು. ಸರ್ಜಿಯೊ ಲಾಬೆರಾ ಅವರ ಮುಂಬೈ ಸಿಟಿ ಎಫ್‌ಸಿ ಸರಾಸರಿ 511 ಪಾಸ್‌ಗಳನ್ನು ನಡೆಸಿದೆ. ರಾಬಿ ಫೌಲರ್ ಅವರ ಎಸ್‌ಸಿ ಈಸ್ಟ್ ಬೆಂಗಾಲ್ ಸರಾಸರಿ 476 ಪಾಸ್‌ಗಳೊಂದಿಗೆ ಎದುರಾಳಿಯನ್ನು ಕಾಡಿದೆ. ಹೀಗಾಗಿ ಮಂಗಳವಾರದ ಪಂದ್ಯದಲ್ಲಿ ಉಭಯ ತಂಡಗಳು ಅನುಸರಿಸುವ ತಂತ್ರ ಏನಾಗಿರಬಹುದು ಎಂಬುದು ಕುತೂಹಲ ಕೆರಳಿಸಿರುವ ಪ್ರಶ್ನೆ.

ಎರಡು ಪಂದ್ಯಗಳಲ್ಲಿ ಕೇವಲ ಒಂದು ಗೋಲು ಗಳಿಸಿರುವುದು ಮುಂಬೈ ತಂಡವನ್ನು ಕಾಡುತ್ತಿರುವ ಆತಂಕ. ಆ್ಯಡಂ ಲೀ ಫಾಂಡ್ರೆ ಮತ್ತು ಹ್ಯೂಗೊ ಬೌಮೋಸ್ ಮೇಲೆ ಭರವಸೆ ಇರಿಸಿಕೊಂಡು ಕಣಕ್ಕೆ ಇಳಿಯಲಿರುವ ತಂಡದಲ್ಲಿ ಅಂತಿಮ 11ರಲ್ಲಿ ಬಾರ್ತೊಲೊಮೆ ಇಗ್ಬೆಚೆಗೆ ಸ್ಥಾನ ಸಿಗುವುದೋ ಇಲ್ಲವೋ ಎಂಬ ಸಂದೇಹವೂ ಫುಟ್‌ಬಾಲ್ ಪ್ರಿಯರನ್ನು ಕಾಡುತ್ತಿದೆ. ಆ್ಯಂಟೊನಿ ಪಿಲ್ಕಿಂಗ್ಟನ್ ಮತ್ತು ಮ್ಯಾಟಿ ಸ್ಟೇಯ್ನ್ ಮ್ಯಾನ್ ಅವರ ಮೇಲೆ ಈಸ್ಟ್ ಬೆಂಗಾಲ್ ಭರವಸೆ ಇರಿಸಿದೆ.

ಶತಕದ ಗಡಿಯಲ್ಲಿ ಮಂದಾರ್‌

ಮಂಗಳವಾರದ ಪಂದ್ಯದಲ್ಲಿ ಕಣಕ್ಕೆ ಇಳಿದರೆ ಐಎಸ್‌ಎಲ್‌ನಲ್ಲಿ 100 ಪಂದ್ಯಗಳನ್ನು ಆಡಿದ ಶ್ರೇಯಸ್ಸು ಮುಂಬೈ ಸಿಟಿ ಎಫ್‌ಸಿಯ ಮಂದಾರ್ ರಾವ್ ದೇಸಾಯಿ ಪಾಲಾಗಲಿದೆ. ಈ ಮೈಲುಗಲ್ಲು ದಾಟಿದ ಮೊದಲ ಆಟಗಾರನೂ ಆವರಾಗಲಿದ್ದಾರೆ. ಲೆನಿ ರಾಡ್ರಿಗಸ್ 89 ಮತ್ತು ಸೌವಿಕ್ ಚಕ್ರವರ್ತಿ 81 ಪಂದ್ಯಗಳನ್ನು ಆಡಿದ್ದಾರೆ. ‘ಎಷ್ಟು ಸಾಧ್ಯವಿದೆಯೋ ಅಷ್ಟು ಪಂದ್ಯಗಳನ್ನು ಆಡಲು ಪ್ರತಿಯೊಬ್ಬ ಆಟಗಾರನೂ ಬಯಸುತ್ತಾನೆ. 100 ‍ಪಂದ್ಯಗಳ ಸನಿಹದಲ್ಲಿರುವುದು ಸಂತೋಷದ ವಿಷಯ. ಈ ಸಂಭ್ರಮವನ್ನು ಎಲ್ಲ ಸಹ ಆಟಗಾರರಿಗೆ ಮತ್ತು ಈ ವರೆಗೆ ನಾನು ಆಡಿರುವ ತಂಡಗಳಲ್ಲಿ ಇದ್ದ ಕೋಚ್‌ಗಳಿಗೆ ಅರ್ಪಿಸುತ್ತೇನೆ’ ಎಂದು ಈ ಹಿಂದೆ ಗೋವಾ ಪರ ಆಡಿದ್ದ ಮಂದಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT