ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾ ಲಿಗಾ ಫುಟ್‌ಬಾಲ್‌ ಟೂರ್ನಿ: ರಿಯಲ್ ಮ್ಯಾಡ್ರಿಡ್‌ ಮುಡಿಗೆ ಕಿರೀಟ

ದಾಖಲೆಯ 34ನೇ ಪ್ರಶಸ್ತಿ ಗೆದ್ದ ರಾಮೊಸ್‌ ಬಳಗ
Last Updated 17 ಜುಲೈ 2020, 6:27 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ರಿಯಲ್‌ ಮ್ಯಾಡ್ರಿಡ್‌ ತಂಡ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯಲ್ಲಿ ಮತ್ತೊಮ್ಮೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ.

ಗುರುವಾರ ರಾತ್ರಿ ನಡೆದ ಹಣಾಹಣಿಯಲ್ಲಿ 2–1 ಗೋಲುಗಳಿಂದ ವಿಲ್ಲಾರಿಯಲ್ ತಂಡವನ್ನು ಸೋಲಿಸಿದ ಸರ್ಜಿಯೊ ರಾಮೊಸ್‌ ಸಾರಥ್ಯದ ಮ್ಯಾಡ್ರಿಡ್,‌ ಮೂರು ವರ್ಷಗಳ ಬಳಿಕ ಪ್ರಶಸ್ತಿಗೆ ಮುತ್ತಿಕ್ಕಿತು.

ಲೀಗ್‌ನಲ್ಲಿ ಮ್ಯಾಡ್ರಿಡ್‌ ಗೆದ್ದ ದಾಖಲೆಯ 34ನೇ ಟ್ರೋಫಿ ಇದಾಗಿದೆ. 2017ರ ನಂತರ ರಾಮೊಸ್‌ ಪಡೆಗೆ ಪ್ರಶಸ್ತಿ ಜಯಿಸಲು ಆಗಿರಲಿಲ್ಲ.

ಈ ಬಾರಿಯ ಲೀಗ್‌ನಲ್ಲಿ ಮ್ಯಾಡ್ರಿಡ್‌ ತಂಡ ಇನ್ನೊಂದು ಪಂದ್ಯ ಆಡಬೇಕಿದೆ. 37ರ ಪೈಕಿ 26 ಪಂದ್ಯಗಳಲ್ಲಿ ಗೆದ್ದಿರುವ ರಾಮೊಸ್‌ ಬಳಗದ ಖಾತೆಯಲ್ಲಿ ಒಟ್ಟು 86 ಪಾಯಿಂಟ್ಸ್‌ ಇವೆ. ಹಿಂದಿನ ಎರಡು ಆವೃತ್ತಿಗಳಲ್ಲೂ ಚಾಂಪಿಯನ್‌ ಆಗಿದ್ದ ಎಫ್‌ಸಿ ಬಾರ್ಸಿಲೋನಾ ತಂಡವು 79 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ತನ್ನ ಅಂತಿಮ ಲೀಗ್‌ ಹಣಾಹಣಿಯಲ್ಲಿ ಜಯಿಸಿದರೂ ಬಾರ್ಸಿಲೋನಾ ತಂಡವು ಮ್ಯಾಡ್ರಿಡ್‌ ತಂಡವನ್ನು ಹಿಂದಿಕ್ಕಲು ಆಗುವುದಿಲ್ಲ.

ಫುಟ್‌ಬಾಲ್‌ ಚಟುವಟಿಕೆಗಳು ಪುನರಾರಂಭವಾದ ಬಳಿಕ ಆಡಿದ ಒಂಬತ್ತು ಪಂದ್ಯಗಳಲ್ಲೂ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿದ್ದ ರಿಯಲ್‌ ಮ್ಯಾಡ್ರಿಡ್‌ ತಂಡವು ಅಲ್ಫ್ರೆಡೊ ಡಿ ಸ್ಟೆಫಾನೊ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಮೋಡಿ ಮಾಡಿತು.

ಆರಂಭದ 25 ನಿಮಿಷಗಳಲ್ಲಿ ಉಭಯ ತಂಡಗಳು ಸಮಬಲದಿಂದ ಸೆಣಸಿದವು. ನಂತರ ಮ್ಯಾಡ್ರಿಡ್‌ ಆಟ ರಂಗೇರಿತು.

29ನೇ ನಿಮಿಷದಲ್ಲಿ ಕರೀಂ ಬೆಂಜೆಮಾ ಕಾಲ್ಚಳಕ ತೋರಿದರು.ಮಿಡ್‌ಫೀಲ್ಡ್‌ ವಿಭಾಗದಿಂದ ಕ್ಯಾಸೆಮಿರೊ ಒದ್ದ ಚೆಂಡಿನ ಮೇಲೆ ಚುರುಕಾಗಿ ನಿ‌ಯಂತ್ರಣ ಸಾಧಿಸಿದ ಲೂಕಾ ಮೊಡ್ರಿಕ್‌ ಅದನ್ನು ಬೆಂಜೆಮಾ ಅವರತ್ತ ತಳ್ಳಿದರು. ತಮ್ಮತ್ತ ಸಾಗಿ ಬಂದ ಚೆಂಡನ್ನು ಬೆಂಜೆಮಾ ಆಕರ್ಷಕ ರೀತಿಯಲ್ಲಿ ಗುರಿ ಮುಟ್ಟಿಸಿದರು.

ನಂತರ ಎರಡು ತಂಡಗಳೂ ಜಿದ್ದಾಜಿದ್ದಿನ ಪೈಪೋಟಿಗೆ ಇಳಿದವು. ಆದರೆ ಯಾರಿಗೂ ಗೋಲು ಬಾರಿಸಲು ಆಗಲಿಲ್ಲ.

1–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಗಿದ್ದ ರಿಯಲ್‌ ಮ್ಯಾಡ್ರಿಡ್‌ ತಂಡವು ದ್ವಿತೀಯಾರ್ಧದಲ್ಲೂ ಎದುರಾಳಿ ತಂಡದಿಂದ ತೀವ್ರ ಪೈಪೋಟಿ ಎದುರಿಸಿತು. 77ನೇ ನಿಮಿಷದಲ್ಲಿ ತಂಡಕ್ಕೆ ಪೆನಾಲ್ಟಿ ಲಭಿಸಿತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಬೆಂಜೆಮಾ ಯಶಸ್ವಿಯಾದರು.

ಇಷ್ಟಾದರೂ ವಿಲ್ಲಾರಿಯಲ್‌ ಎದೆಗುಂದಲಿಲ್ಲ. ಈ ತಂಡದ ಪ್ರಯತ್ನಕ್ಕೆ 83ನೇ ನಿಮಿಷದಲ್ಲಿ ಯಶಸ್ಸು ಲಭಿಸಿತು. ವಿಸೆಂಟ್‌ ಇಬೊರಾ ಗೋಲು ಬಾರಿಸಿ ಹಿನ್ನಡೆ ತಗ್ಗಿಸಲಷ್ಟೇ ಶಕ್ತರಾದರು.

ಕ್ರಿಸ್ಟಿಯಾನೊ ರೊನಾಲ್ಡೊ ಅವರು 2017ರಲ್ಲಿ ತಂಡ ತೊರೆದಿದ್ದರು. ಅವರ ನಿರ್ಗಮನದ ನಂತರ ರಿಯಲ್‌ ಮ್ಯಾಡ್ರಿಡ್‌ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ.ಈ ಸಾಧನೆಯಲ್ಲಿ ಕೋಚ್‌ ಜಿನೆದಿನ್‌ ಜಿದಾನೆ ಅವರ ಪಾತ್ರ ಮಹತ್ವದ್ದಾಗಿದೆ.

‘ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲೊಂದು. ಪ್ರೇಕ್ಷಕರ ಸಮ್ಮುಖದಲ್ಲಿ ಸಂಭ್ರಮಿಸಬೇಕೆಂಬ ನಮ್ಮ ಆಸೆ ಈ ಬಾರಿ ಈಡೇರಲಿಲ್ಲ’ ಎಂದು ಜಿದಾನೆ ಹೇಳಿದ್ದಾರೆ.

2018ರಲ್ಲಿ ಮ್ಯಾಡ್ರಿಡ್‌ ತಂಡದ ಕೋಚ್‌ ಹುದ್ದೆ ತೊರೆದಿದ್ದ ಜಿದಾನೆ ಬಳಿಕ ಮತ್ತೆ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಬಾರ್ಸಿಲೋನಾಗೆ ಆಘಾತ: ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಎಫ್‌ಸಿ ಬಾರ್ಸಿಲೋನಾ 1–2 ಗೋಲುಗಳಿಂದ ಒಸಾಸುನಾ ಎದುರು ಆಘಾತ ಕಂಡಿತು. ಹೀಗಾಗಿ ಲಯೊನೆಲ್‌ ಮೆಸ್ಸಿ ಬಳಗದ ‘ಹ್ಯಾಟ್ರಿಕ್‌’ ಪ್ರಶಸ್ತಿಯ ಕನಸು ಕಮರಿ ಹೋಯಿತು.

ಪಾಯಿಂಟ್ಸ್‌ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದ ಒಸಾಸುನಾ 15ನೇ ನಿಮಿಷದಲ್ಲೇ ಖಾತೆ ತೆರೆಯಿತು. ಜೋಸ್‌ ಅರ್ನೇಜ್‌ ಕಾಲ್ಚಳಕ ತೋರಿದರು.

ದ್ವಿತೀಯಾರ್ಧದಲ್ಲಿ ಮೆಸ್ಸಿ (62ನೇ ನಿಮಿಷ) ಗೋಲು ಹೊಡೆದರು. ಹೀಗಾಗಿ ನಿಗದಿತ ಅವಧಿಯ ಆಟ ಮುಗಿದಾಗ (90 ನಿಮಿಷ) ಉಭಯ ತಂಡಗಳು 1–1 ಸಮಬಲ ಸಾಧಿಸಿದ್ದವು. ಹೆಚ್ಚುವರಿ ಅವಧಿಯಲ್ಲಿ ಒಸಾಸುನಾ ತಂಡದ ರಾಬರ್ಟೊ ಟೊರೆಸ್‌(90+4ನೇ ನಿಮಿಷ) ಗೋಲು ಗಳಿಸಿ ಬಾರ್ಸಿಲೋನಾ ತಂಡದ ಗೆಲುವಿನ ಆಸೆಗೆ ತಣ್ಣೀರು ಸುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT