ಗುರುವಾರ , ಆಗಸ್ಟ್ 5, 2021
23 °C
ಗ್ರೆನಾಡ ಎದುರು ಗೆಲುವು

ಲಾ ಲಿಗಾ ಫುಟ್‌ಬಾಲ್‌ ಟೂರ್ನಿ: ಪ್ರಶಸ್ತಿ ಸನಿಹ ರಿಯಲ್‌ ಮ್ಯಾಡ್ರಿಡ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್‌: ಫುಟ್‌ಬಾಲ್‌ ಚಟುವಟಿಕೆಗಳು ಪುನರಾರಂಭವಾದ ಬಳಿಕ ಸತತ ಒಂಬತ್ತನೇ ಗೆಲುವು ದಾಖಲಿಸಿದ ರಿಯಲ್‌ ಮ್ಯಾಡ್ರಿಡ್‌ ತಂಡವು ಲಾ ಲಿಗಾ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಳ್ಳುವತ್ತ ದಾಪುಗಾಲಿಟ್ಟಿದೆ.

ಗುರುವಾರ ನಡೆಯುವ ವಿಲ್ಲಾರಿಯಲ್‌ ಎದುರಿನ ಹೋರಾಟದಲ್ಲಿ ಜಯಿಸಿದರೆ ರಿಯಲ್‌ ಮ್ಯಾಡ್ರಿಡ್‌ ತಂಡದ ಪ್ರಶಸ್ತಿಯ ಕನಸು ಸಾಕಾರಗೊಳ್ಳಲಿದೆ. ಅಂತಿಮ ಎರಡು ಲೀಗ್‌ ಹೋರಾಟಗಳಲ್ಲಿ ಡ್ರಾ ಮಾಡಿಕೊಂಡರೂ ತಂಡಕ್ಕೆ ಟ್ರೋಫಿ ಒಲಿಯಲಿದೆ. 

118 ವರ್ಷಗಳ ಇತಿಹಾಸ ಹೊಂದಿರುವ ಮ್ಯಾಡ್ರಿಡ್‌ ಕ್ಲಬ್‌, ಲೀಗ್‌ನಲ್ಲಿ ಈಗಾಗಲೇ 33 ಪ್ರಶಸ್ತಿಗಳನ್ನು ಜಯಿಸಿ ದಾಖಲೆ ಬರೆದಿದೆ. ಆದರೆ 2017ರ ನಂತರ ತಂಡಕ್ಕೆ ಟ್ರೋಫಿ ಗೆಲ್ಲಲು ಆಗಿಲ್ಲ. ಹಿಂದಿನ ಎರಡು ಬಾರಿಯೂ ಚಾಂಪಿಯನ್‌ ಆಗಿರುವ ಎಫ್‌ಸಿ ಬಾರ್ಸಿಲೋನಾ ತಂಡ ಈ ಬಾರಿಯ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಸೋಮವಾರ ತಡರಾತ್ರಿ ನಡೆದ ಪೈಪೋಟಿಯಲ್ಲಿ ರಿಯಲ್‌ ಮ್ಯಾಡ್ರಿಡ್‌ 2–1 ಗೋಲುಗಳಿಂದ ಗ್ರೆನಾಡ ತಂಡವನ್ನು ಪರಾಭವಗೊಳಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸರ್ಜಿಯೊ ರಾಮೊಸ್‌ ಸಾರಥ್ಯದ ಮ್ಯಾಡ್ರಿಡ್‌ ತಂಡ ಹತ್ತನೇ ನಿಮಿಷದಲ್ಲಿ ಖಾತೆ ತೆರೆಯಿತು. ಫರ್ಲಾಂಡ್‌ ಮೆಂಡಿ ಕಾಲ್ಚಳಕ ತೋರಿದರು. ಹೋದ ವರ್ಷದ ಜೂನ್‌ನಲ್ಲಿ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದ 25 ವರ್ಷ ವಯಸ್ಸಿನ ಮೆಂಡಿ, ರಿಯಲ್‌ ಮ್ಯಾಡ್ರಿಡ್‌ ಪರ ಗಳಿಸಿದ ಮೊದಲ ಗೋಲು ಇದಾಗಿದೆ. ಅವರು ಈಗಾಗಲೇ 23 ಪಂದ್ಯಗಳನ್ನು ಆಡಿದ್ದಾರೆ.

ಬಳಿಕ ಮ್ಯಾಡ್ರಿಡ್‌ ತಂಡ ಎದುರಾಳಿ ತಂಡದ ರಕ್ಷಣಾ ಕೋಟೆಯ ಮೇಲೆ ಸತತವಾಗಿ ದಾಳಿ ನಡೆಸಲು ಮುಂದಾಯಿತು. ತಂಡದ ಈ ತಂತ್ರಕ್ಕೆ 16ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು.

ಕಾರ್ನರ್‌ ಭಾಗದಿಂದ ಕರೀಂ ಬೆಂಜೆಮಾ ಒದ್ದ ಚೆಂಡು ಮಿಂಚಿನ ಗತಿಯಲ್ಲಿ ಸಾಗಿ ಎದುರಾಳಿ ತಂಡದ ಗೋಲು ಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಮ್ಯಾಡ್ರಿಡ್‌ ಪಾಳಯದಲ್ಲಿ ಸಂಭ್ರಮ ಮೇಳೈಸಿತು. ಫ್ರಾನ್ಸ್‌ನ 32 ವರ್ಷ ವಯಸ್ಸಿನ ಆಟಗಾರ ಬೆಂಜೆಮಾ, ಲೀಗ್‌ನಲ್ಲಿ ದಾಖಲಿಸಿದ 19ನೇ ಗೋಲು ಇದಾಗಿದೆ. 

2–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಮ್ಯಾಡ್ರಿಡ್‌ ತಂಡವು ದ್ವಿತೀಯಾರ್ಧದಲ್ಲಿ ಗ್ರೆನಾಡ ತಂಡದಿಂದ ಪ್ರಬಲ ಪೈಪೋಟಿ ಎದುರಿಸಿತು. ಪಾಯಿಂಟ್ಸ್‌ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಗ್ರೆನಾಡ ತಂಡವು 50ನೇ ನಿಮಿಷದಲ್ಲಿ ಮ್ಯಾಡ್ರಿಡ್‌ ತಂಡದ ಬಲಿಷ್ಠ ರಕ್ಷಣಾ ವ್ಯೂಹ ಭೇದಿಸುವಲ್ಲಿ ಯಶಸ್ವಿಯಾಯಿತು. ಡಾರ್ವಿನ್‌ ಮಾಚಿಸ್‌ ಚೆಂಡನ್ನು ಗುರಿ ಮುಟ್ಟಿಸಿದರು.

ನಿಗದಿತ ಅವಧಿಯ ಆಟ ಮುಗಿಯಲು ಐದು ನಿಮಿಷಗಳು ಬಾಕಿ ಇದ್ದಾಗ ಗ್ರೆನಾಡ ತಂಡಕ್ಕೆ ಸಮಬಲದ ಗೋಲು ಗಳಿಸುವ ಉತ್ತಮ ಅವಕಾಶ ಲಭ್ಯವಾಗಿತ್ತು. ಈ ತಂಡದ ಆಟಗಾರ ಒದ್ದ ಚೆಂಡನ್ನು ಮ್ಯಾಡ್ರಿಡ್‌ ತಂಡದ ಗೋಲ್‌ಕೀಪರ್‌ ಥಿಬೊಟ್‌ ಕರ್ಟೊಯಿಸ್‌ ಆಕರ್ಷಕ ರೀತಿಯಲ್ಲಿ ತಡೆದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು