ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ ಸರ್ಕಾರ ದಲಿತ, ಆದಿವಾಸಿ ವಿರೋಧಿ’

Last Updated 3 ಮೇ 2018, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ರಕ್ಷಿಸಬೇಕಾದ ಕಾಯ್ದೆ ದುರ್ಬಲವಾಗಲು ಬಿಜೆಪಿಯ ದಲಿತ ವಿರೋಧಿ ಮತ್ತು ಆದಿವಾಸಿ ವಿರೋಧಿ ಮನಃಸ್ಥಿತಿ ಕಾರಣ’ ಎಂದು ಕೇಂದ್ರದ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ದೂರಿದರು.

‘ದಲಿತರು, ಆದಿವಾಸಿಗಳ ಕಡೆಗಣನೆ ಪ್ರಜಾಪ್ರಭುತ್ವದ ತತ್ವಗಳಿಗೆ ಮಾರಕ. ‌ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲೆ ನಿತ್ಯ ದೌರ್ಜನ್ಯಗಳು ನಡೆಯುತ್ತಿವೆ. ಇದಕ್ಕೆ ಕರ್ನಾಟಕದ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಹೇಳಿದರು.

‘1989ರಲ್ಲಿ ಜಾರಿಗೆ ಬಂದ ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ಯನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸಿರುವುದು ಪೂರ್ವಗ್ರಹಪೀಡಿತ ಮನೋಭಾವ. ಮೋದಿ ಸರ್ಕಾರದ ಈ ನಡೆ ಖಂಡನೀಯ’ ಎಂದರು.

‘ಪರಿಶಿಷ್ಟರ ಜನಸಂಖ್ಯೆಗೆ ತಕ್ಕಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದೆ. ಈ ಹಣವನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ವಿಶೇಷ ಕಾನೂನು ರೂಪಿಸಿದೆ. ಹೈದರಾಬಾದ್-ಕರ್ನಾಟಕ ಪ್ರದೇಶದ ಆರು ಹಿಂದುಳಿದ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಗಮನದಲ್ಲಿಟ್ಟು ಈ ಭಾಗಕ್ಕೆ ಯುಪಿಎ ಸರ್ಕಾರ 371(ಜೆ) ವಿಶೇಷ ಸ್ಥಾನಮಾನ ನೀಡಿತ್ತು’ ಎಂದು ನೆನಪಿಸಿದರು.

‘ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರು ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದವರನ್ನು ‘ಬೊಗಳುವ ನಾಯಿಗಳು’ ಎಂದು ಕರೆದು ಅವಮಾನಿಸಿದ್ದರು. ಕೆಲದಿನಗಳ ಹಿಂದೆ ಇದೇ ಹೆಗಡೆ, ಸಂವಿಧಾನವನ್ನೇ ಬದಲಿಸುವ ಮಾತುಗಳನ್ನೂ ಆಡಿದ್ದರು. ಕೆಲವು ತಿಂಗಳ ಕೇಂದ್ರ ಸಚಿವ ವಿ.ಕೆ. ಸಿಂಗ್ ದಲಿತರ ಮಕ್ಕಳನ್ನು ನಾಯಿಗಳಿಗೆ ಹೋಲಿಸಿದ್ದರು’ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ 2013ರಲ್ಲಿ ದಲಿತರಿಗೆ 92,928 ಕೇಂದ್ರ ಸರ್ಕಾರಿ ಉದ್ಯೋಗಗಳಿದ್ದವು. ಆದರೆ, ಬಿಜೆಪಿ ಸರ್ಕಾರ ಈ ಉದ್ಯೋಗಗಳ ಸಂಖ್ಯೆಯನ್ನು ಕೇವಲ 8,436ಕ್ಕೆ ಇಳಿ
ಸಿತು. ಇನ್ನೊಂದೆಡೆ, 2016ರ ಡಿ. 31ರ ಅಂಕಿಅಂಶಗಳ ಪ್ರಕಾರ, ಪರಿಶಿಷ್ಟ ಜಾತಿ
ಯವರಿಗೆ ಸಿಗಬೇಕಾದ 28,713 ಬ್ಯಾಕ್ ಲಾಗ್ ಹುದ್ದೆಗಳು ಖಾಲಿ ಬಿದ್ದಿದ್ದವು. 2016 ಮತ್ತು 2017ರ ಅಂಕಿಅಂಶಗಳು ಇನ್ನೂ ಹೊರಬಂದಿಲ್ಲ’ ಎಂದರು.

‘ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕಿತ್ತು’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿಂಧೆ, ‘ದಲಿತನಾದ ನನ್ನನ್ನು ಪಕ್ಷ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮಾಡಿದೆ. ಸೂಕ್ತ ಸಮಯದಲ್ಲಿ ದಲಿತ ಮುಖಂಡರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡುತ್ತಿದೆ. ಮೋದಿ ಸುಳ್ಳು ಹೇಳುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT