ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತಾರ್‌ಗೆ ಮತ್ತೆ ನಿರಾಸೆ

ಸೆನೆಗಲ್‌ಗೆ 3–1 ಗೋಲುಗಳ ಗೆಲುವು
Last Updated 25 ನವೆಂಬರ್ 2022, 16:23 IST
ಅಕ್ಷರ ಗಾತ್ರ

ದೋಹಾ: ಅತಿಥೇಯ ಕತಾರ್ ತಂಡ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದಲ್ಲೇ ಹೊರಬೀಳುವುದು ಬಹುತೇಕ ಖಚಿತವಾಗಿದೆ.

ಅಲ್‌ ತುಮಾಮಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಸೆನೆಗಲ್‌ 3–1 ಗೋಲುಗಳಿಂದ ಕತಾರ್‌ ವಿರುದ್ಧ ಗೆದ್ದಿತು. ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್‌ ಎದುರು ಸೋತಿದ್ದ ಸೆನೆಗಲ್‌ ಈ ಗೆಲುವಿನ ಮೂಲಕ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಂಡಿದೆ.

ಬೊಲಾಯೆ ದಿಯಾ (41ನೇ ನಿ.), ಫಮರ ದಿಯೆದಿಯೊ (48ನೇ ನಿ.) ಮತ್ತು ಚೀಕ್‌ ಡೆಂಗ್‌ (84ನೇ ನಿ.) ಅವರು ಸೆನೆಗಲ್‌ ಪರ ಗೋಲು ಗಳಿಸಿದರು. ಕತಾರ್‌ ತಂಡದ ಏಕೈಕ ಗೋಲನ್ನು ಮೊಹಮ್ಮದ್‌ ಮುಂತರಿ 78ನೇ ನಿಮಿಷದಲ್ಲಿ ತಂದಿತ್ತರು.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ 0–2 ರಲ್ಲಿ ಈಕ್ವೆಡಾರ್‌ ಎದುರು ಸೋತಿದ್ದ ಕತಾರ್‌, ಈ ಪಂದ್ಯದಲ್ಲೂ ಪ್ರಭಾವಿ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.

ಮೊದಲ ಅವಧಿಯ ಆರಂಭದಿಂದಲೇ ಸೆನೆಗಲ್‌ ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ಡಿಫೆಂಡರ್‌ಗಳ ಮೇಲೆ ಒತ್ತಡ ಹೇರಿತು. ಕತಾರ್‌ ತಂಡದ ಡಿಫೆಂಡರ್‌ ಬೌಲೆಮ್‌ ಕುವಾಕಿ ಮಾಡಿದ ಎಡವಟ್ಟು, ಸೆನೆಗಲ್‌ಗೆ ಗೋಲಿನ ಖಾತೆ ತೆರೆಯಲು ನೆರವಾಯಿತು.

ಕುವಾಕಿ ಅವರಿಗೆ ಚೆಂಡನ್ನು ಸುಲಭವಾಗಿ ತಡೆದು ದೂರ ಅಟ್ಟಬಹುದಿತ್ತು. ಆದರೆ ಅದರಲ್ಲಿ ಎಡವಿದ್ದರಿಂದ ದಿಯಾ ಗೋಲು ಗಳಿಸಿದರು. ಎರಡನೇ ಅವಧಿ ಆರಂಭದಲ್ಲೇ ಸೆನೆಗಲ್‌, ಮುನ್ನಡೆಯನ್ನು 2–0ಗೆ ಹೆಚ್ಚಿಸಿತು.

ದಕ್ಷಿಣ ಆಫ್ರಿಕಾ ತಂಡವನ್ನು (2010 ರ ಟೂರ್ನಿ) ಹೊರತುಪಡಿಸಿ ಯಾವುದೇ ಅತಿಥೇಯ ರಾಷ್ಟ್ರ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದಲ್ಲೇ ಹೊರಬಿದ್ದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT