ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್‌ ಪುಟ್‌ಬಾಲ್‌: ಆ. 11ರಿಂದ ಕ್ವಾರ್ಟರ್‌ ಫೈನಲ್‌ ಪಂದ್ಯಗಳು

Published 9 ಆಗಸ್ಟ್ 2023, 14:23 IST
Last Updated 9 ಆಗಸ್ಟ್ 2023, 14:23 IST
ಅಕ್ಷರ ಗಾತ್ರ

ಸಿಡ್ನಿ: ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ ಆರಂಭವಾಗಿ ಮೂರು ವಾರಗಳಾಗಿದ್ದು, ಎಂಟು ತಂಡಗಳು ಕ್ವಾರ್ಟರ್‌ಫೈನಲ್‌ ಮುಖಾಮುಖಿಗೆ ಸಜ್ಜಾಗಿವೆ. ಆದರೆ, ಎಂಟರ ಘಟ್ಟ  ತಲುಪಬಹುದೆಂದು ಬಹುತೇಕ ಮಂದಿ ನಿರೀಕ್ಷಿಸಿದ್ದ ಪ್ರಬಲ ತಂಡಗಳಲ್ಲಿ ಕೆಲವು ಟೂರ್ನಿಯಿಂದ ಹೊರಬಿದ್ದಿವೆ.

ಗೆಲ್ಲುವ ತಂಡ ಯಾವುದೆಂದು ಊಹಿಸಲು ಕಷ್ಟವಾಗಿರುವ ವಿಶ್ವಕಪ್‌ ಇದು. ಏರಿಳಿತಗಳನ್ನು ಕಂಡ ಈ  ಟೂರ್ನಿಯ ಕೊನೆಯ ಪ್ರಿಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಕೊಲಂಬಿಯಾ ಮತ್ತು ಫ್ರಾನ್ಸ್‌ ಜಯಗಳಿಸಿವೆ. ಅಂತಿಮ ಎಂಟರಲ್ಲಿರುವ ಇರುವ ಇತರ ತಂಡಗಳೆಂದರೆ– ಸ್ಪೇನ್‌, ನೆದರ್ಲೆಂಡ್ಸ್‌, ಜಪಾನ್‌, ಸ್ವೀಡನ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌.

32 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಕೆಳಕ್ರಮಾಂಕದ ತಂಡಗಳು ಗಮನಾರ್ಹ ಸಾಧನೆ ತೋರಿವೆ. ಈ ಹಿಂದೆ ವಿಶ್ವಕಪ್‌ ಗೆದ್ದ ತಂಡಗಳಲ್ಲಿ ಜಪಾನ್‌ ಹೊರತುಪಡಿಸಿ ಉಳಿದೆಲ್ಲಾ ತಂಡಗಳು ಗಂಟುಮೂಟೆ ಕಟ್ಟಿವೆ. ಜಪಾನ್‌ 2011ರಲ್ಲಿ ಚಾಂಪಿಯನ್‌ ಆಗಿತ್ತು.

ನಾಲ್ಕು ಬಾರಿಯ ಚಾಂಪಿಯನ್‌ ಹಾಗೂ ಹ್ಯಾಟ್ರಿಕ್ ವಿಶ್ವಕಪ್‌ ಗೆಲುವಿನ ಕನಸು ಕಂಡಿದ್ದ ಅಮೆರಿಕ, ಈ ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿ ಸೆಮಿಫೈನಲ್‌ ಹಂತಕ್ಕಿಂತ ಮೊದಲೇ ಹೊರಬಿದ್ದಿತು.

ಎರಡು ಸಲದ ಚಾಪಿಯನ್ ಜರ್ಮನಿ, 1995ರ ಚಾಂಪಿಯನ್‌ ನಾರ್ವೆ, ಹಾಲಿ ಒಲಿಂಪಿಕ್‌ ಚಾಂಪಿಯನ್ ಕೆನಡಾ ಮತ್ತು ಬ್ರೆಜಿಲ್ ಹೊರಬಿದ್ದ ಇತರ ಪ್ರಬಲ ತಂಡಗಳು. ಬ್ರೆಜಿಲ್‌ 1995ರ ನಂತರ ಮೊದಲ ಬಾರಿ ಗ್ರೂಪ್‌ ಹಂತದಲ್ಲೇ ನಿರ್ಗಮಿಸಿದೆ.

‘ಈ ಟೂರ್ನಿಯಲ್ಲಿ ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳುವಂತಿರಲಿಲ್ಲ’ ಎಂದು ಇಂಗ್ಲೆಂಡ್‌ ಕೋಚ್‌ ಸರಿನಾ ವೀಗ್ಮನ್ ಹೇಳಿದರು. ಇಂಗ್ಲೆಂಡ್‌ ತಂಡ, ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ನೈಜೀರಿಯಾ ವಿರುದ್ಧ ಗೆಲ್ಲಲು 120 ನಿಮಿಷಗಳ ಕಾಲ ಬೆವರು ಹರಿಸಬೇಕಾಯಿತು. ಶೂಟೌಟ್‌ನಲ್ಲಿ ಫಲಿತಾಂಶ ನಿರ್ಧಾರ ಆಯಿತು.

‘ಪಂದ್ಯಗಳು ರೋಚಕವಾಗಿದ್ದವು. ಇದರ ಅರ್ಥ ಈ ಆಟದಲ್ಲಿ ಮಹಿಳಾ ತಂಡಗಳೂ ಸಾಕಷ್ಟು ಸುಧಾರಣೆ ಕಂಡಿವೆ ಎಂಬುದು’ ಎನ್ನುತ್ತಾರೆ.

ಕೊಲಂಬಿಯಾದ ಮಿಂಚಿನ ವೇಗದ ಆಟಗಾರ್ತಿ ಲಿಂಡಾ ಕೈಸಿಡೊ, ಸ್ಪೇನ್‌ನ ಮಿಡ್‌ಫೀಲ್ಡ್‌ ಆಟಗಾರ್ತಿ ಐತನಾ ಬೊನ್ಮತಿ ಮತ್ತು ಫ್ರಾನ್ಸ್‌ನ ಕೆ. ಡಿಯಾನಿ ಹೆಚ್ಚು ಗಮನ ಸೆಳೆದ ತಾರೆಗಳಾಗಿದ್ದಾರೆ. ಯಾರು ಗೆಲ್ಲಬಹುದು ಎಂದು ಹೇಳುವುದು ಕಷ್ಟದ ಕೆಲಸ.

16ರ ಘಟ್ಟದಲ್ಲಿ ನಾರ್ವೆಯನ್ನು ಹಿಮ್ಮೆಟ್ಟಿಸಿದ ಜಪಾನ್‌ ಈಗ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಅದು ಶುಕ್ರವಾರ ಕ್ವಾರ್ಟರ್‌ಫೈನಲ್‌ನಲ್ಲಿ ಸ್ವೀಡನ್‌ ವಿರುದ್ಧ ಆಡಲಿದೆ.  ಅದೇ ದಿನ ಸ್ಪೇನ್‌ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. 9ನೇ ಬಾರಿ ವಿಶ್ವಕಪ್ ಆಡುತ್ತಿರುವ ನೆದರ್ಲೆಂಡ್ಸ್ ತಂಡ ಲೀಗ್ ಹಂತದಲ್ಲಿ ಒಂದೂ ಪಂದ್ಯ ಸೋತಿರಲಿಲ್ಲ.

ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಸ್ಯಾಮ್ ಕೆರ್ ಅನುಪಸ್ಥಿತಿ ಕಾಡದಂತೆ, ಮೆಟಿಲ್ಡಾಸ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ತಂಡ ಶನಿವಾರ ಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್ ಸವಾಲು ಎದುರಿಸಬೇಕಾಗಿದೆ.

ಶನಿವಾರ ನಡೆಯುವ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್‌, ಕೊಲಂಬಿಯಾ ಎದುರು ಗೆಲ್ಲುವ ನೆಚ್ಚಿನ ತಂಡದಂತೆ ಕಾಣಿಸುತ್ತಿದೆ. ಇಂಗ್ಲೆಂಡ್‌ ಕೊನೆಯ 37 ಪಂದ್ಯಗಳಲ್ಲಿ 36ರಲ್ಲಿ ಅಜೇಯವಾಗಿದೆ. ಆದರೆ ಎಂಟು ತಂಡಗಳಲ್ಲಿ ಕಡಿಮೆ ರ್‍ಯಾಂಕಿಂಗ್‌ (25) ಹೊಂದಿರುವ ಕೊಲಂಬಿಯಾಕ್ಕೆ ಆಸ್ಟ್ರೇಲಿಯಾದ ಪ್ರೇಕ್ಷಕರ ಬೆಂಬಲವಂತೂ ಜೋರಾಗಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT