ಗುರುವಾರ , ಮಾರ್ಚ್ 23, 2023
21 °C

’ತೆರೆಗೆ‘ ಬಾರ್ಸಿಲೋನಾ ಕೋಚ್ ಕ್ಸಾವಿ ಹೆರ್ನಾಂಡಜ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್‌: ಬಾರ್ಸಿಲೋನಾ ತಂಡದ ಹೊಸ ಕೋಚ್ ಆಗಿ ನೇಮಕಗೊಂಡಿರುವ ಕ್ಸಾವಿ ಹೆರ್ನಾಂಡಜ್ ಅವರನ್ನು ಸೋಮವಾರ ಸಾರ್ವಜನಿಕರಿಗೆ ಪರಿಚಯಿಸಲಾಯಿತು.

ಬಾರ್ಸಿಲೋನಾ ತಂಡವನ್ನು ಪ್ರತಿನಿಧಿಸಿದ್ದ ಮಿಡ್‌ಫೀಲ್ಡರ್ ಕ್ಸಾವಿ ಅವರು ಕೋಚ್ ಆಗಿ ಕ್ಲಬ್‌ಗೆ ಮರಳಿದ್ದರಿಂದ ಪುಳಕಗೊಂಡಿರುವ ಫುಟ್‌ಬಾಲ್‌ ಪ್ರೇಮಿಗಳು ಪರಿಚಯ ಕಾರ್ಯಕ್ರಮದಲ್ಲಿ ಸಂಭ್ರಮಿಸಿದರು.

ಕ್ಸಾವಿ...ಕ್ಸಾವಿ ಎಂಬ ಘೋಷಣೆಯ ನಡುವೆ ಹೆಜ್ಜೆ ಹಾಕಿದ ಹೆರ್ನಾಂಡಜ್ ಕುಟುಂಬದ ಸದಸ್ಯರು ಮತ್ತು ಬಾರ್ಸಿಲೋನಾ ಅಧ್ಯಕ್ಷ ಜಾನ್ ಲಾಪೋರ್ಟ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. 10 ಸಾವಿರಕ್ಕೂ ಹೆಚ್ಚಿನ ಜನರು ಇದಕ್ಕೆ ಸಾಕ್ಷಿಯಾದರು. 

’ಭಾವುಕತನ ಈಗ ಅಗತ್ಯವಿಲ್ಲ. ಜಗತ್ತಿನ ಅತ್ಯಂತ ಬಲಿಷ್ಠ ತಂಡ ನಮ್ಮದು ಎಂಬುದನ್ನು ಸಾರಿ ಹೇಳಲು ಇಷ್ಟಪಡುತ್ತೇನೆ. ಯಶಸ್ಸಿಗಾಗಿ ಛಲದಿಂದ ಕಾದಾಡುವೆವು. ಎಲ್ಲ ಪಂದ್ಯಗಳನ್ನೂ ಗೆಲ್ಲುವುದು ನಮ್ಮ ಪ್ರಥಮ ಆದ್ಯತೆ. ಸೋಲು ಅಥವಾ ಡ್ರಾದಲ್ಲಿ ಪಂದ್ಯಗಳನ್ನು ಮುಗಿಸಲು ಇಷ್ಟಪಡುವುದಿಲ್ಲ‘ ಎಂದು ಕ್ಸಾವಿ ಹೇಳಿದರು. 

41 ವರ್ಷದ ಕ್ಸಾವಿ ಅವರು ಬಾರ್ಸಿಲೋನಾ ಪರ 767 ಪಂದ್ಯಗಳನ್ನು ಆಡಿದ್ದಾರೆ. ಆರು ವರ್ಷಗಳ ಹಿಂದೆ ಅಲ್ ಸಡ್ ತಂಡದ ಪರವಾಗಿ ಆಡಲು ಕತಾರ್‌ಗೆ ತೆರಳಿದ್ದರು. ಈಗ ಮರಳಿ ಬಂದಿರುವುದರಿಂದ ಕ್ಲಬ್‌ನಲ್ಲಿ ಹೊಸ ಚೇತನ ತುಂಬಿದೆ. ಲಾಲಿಗಾ ಟೂರ್ನಿಯಲ್ಲಿ ತಂಡ ಸದ್ಯ ಒಂಬತ್ತನೇ ಸ್ಥಾನದಲ್ಲಿದೆ. ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ತಂಡ 2015ರ ನಂತರ ಒಮ್ಮೆಯೂ ಪ್ರಶಸ್ತಿ ಗೆದ್ದುಕೊಂಡಿಲ್ಲ.

ರಿಯಲ್ ಸೊಸೀಡಡ್‌ಗೆ ಗೆಲುವು
ದ್ವಿತೀಯಾರ್ಧದಲ್ಲಿ ಗಳಿಸಿದ ಎರಡು ಗೋಲುಗಳ ಬಲದಿಂದ ರಿಯಲ್ ಸೊಸೀಡಡ್ ತಂಡ ಲಾಲಿಗಾ ಟೂರ್ನಿಯಲ್ಲಿ ಜಯ ಗಳಿಸಿತು. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ತಂಡ ಒಸಾಸುನಾವನ್ನು 2–0ಯಿಂದ ಮಣಿಸಿತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಸ್ಪೇನ್‌ನ ಮಿಡ್‌ಫೀಲ್ಡರ್ ಮೈಕೆಲ್ ಮರಿನೊ 72ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಖಾತೆ ತೆರೆದರು. 82ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟ್ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಅಡ್ನಾನ್ ಜನುಜಜ್‌ ಮುನ್ನಡೆಯನ್ನು ಹೆಚ್ಚಿಸಿದರು.

ಈ ಗೆಲುವಿನ ಮೂಲಕ ಒಟ್ಟಾರೆ 16 ಪಂದ್ಯಗಳಲ್ಲಿ ಸೊಸೀಡಡ್ ತಂಡ ಅಜೇಯವಾಗಿ ಉಳಿಯಿತು. ಲಾಲಿಗಾ ಟೂರ್ನಿಯಲ್ಲಿ ತಂಡ ಈ ವರೆಗೆ 13 ಪಂದ್ಯಗಳನ್ನು ಆಡಿದ್ದು 28 ಪಾಯಿಂಟ್ ಗಳಿಸಿದೆ. ಎರಡನೇ ಸ್ಥಾನದಲ್ಲಿರುವ ರಿಯಲ್ ಮ್ಯಾಡ್ರಿಡ್ 12 ಪಂದ್ಯಗಳನ್ನು ಆಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು