ಶುಕ್ರವಾರ, ಅಕ್ಟೋಬರ್ 18, 2019
24 °C
ಕೆಪಿಎಲ್: ಲಯನ್ಸ್‌ಗೆ ಸವಾಲಿನ ಗುರಿ ನೀಡಿದ ಹುಬ್ಬಳ್ಳಿ

ಪವನ್‌, ವಿನಯ್‌ ಆಸರೆ

Published:
Updated:

ಮೈಸೂರು: ಕೆ.ಬಿ.ಪವನ್ ಮತ್ತು ನಾಯಕ ಆರ್‌.ವಿನಯ್‌ ಕುಮಾರ್ ಅವರ ಬಿರುಸಿನ ಆಟದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್‌ ತಂಡ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್‌ಗೆ 191 ರನ್‌ಗಳ ನೀಡಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಎಲಿಮಿನೇಟರ್’ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ಟೈಗರ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 190 ರನ್‌ ಗಳಿಸಿತು.

ಪವನ್‌ (ಔಟಾಗದೆ 56, 39 ಎಸೆತ) ಮತ್ತು ವಿನಯ್‌ (55, 45 ಎಸೆತ) ಅರ್ಧಶತಕ ಗಳಿಸಿ ಮಿಂಚಿದರು. ಈ ಜೋಡಿ ಮೂರನೇ ವಿಕೆಟ್‌ಗೆ 93 ರನ್‌ ಸೇರಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿತು.

ಟಾಸ್‌ ಗೆದ್ದ ಲಯನ್ಸ್‌ ತಂಡದ ನಾಯಕ ಅಭಿಮನ್ಯು ಮಿಥುನ್‌ ಅವರು ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಲವನೀತ್‌ ಸಿಸೋಡಿಯಾ (2) ಅವರನ್ನು ಮಿಥುನ್ ಬೇಗನೇ ಔಟ್‌ ಮಾಡಿದರು.

ವಿನಯ್‌ ಮತ್ತು ಮೊಹಮ್ಮದ್‌ ತಾಹ (41, 22 ಎಸೆತ, 7 ಬೌಂ, 1 ಸಿ.) ಎರಡನೇ ವಿಕೆಟ್‌ಗೆ 23 ಎಸೆತಗಳಲ್ಲಿ 42 ರನ್‌ ಸೇರಿಸಿ ತಂಡವನ್ನು ಆರಂಭಿಕ ಕುಸಿತದಿಂದ ಪಾರುಮಾಡಿದರು. ಐದು ಓವರ್‌ಗಳಲ್ಲಿ ತಂಡದ ಮೊತ್ತ 50ರ ಗಡಿ ದಾಟಿತು.

ಆದರೆ ಏಳನೇ ಓವರ್‌ನಲ್ಲಿ ತಾಹ ವಿಕೆಟ್‌ ಪಡೆದ ರಿಷಭ್‌ ಸಿಂಗ್‌ ಎದುರಾಳಿ ತಂಡದ ರನ್‌ ವೇಗಕ್ಕೆ ಕಡಿವಾಣ ಹಾಕಿದರು. 5 ರಿಂದ 10 ಓವರ್‌ಗಳ ಅವಧಿಯಲ್ಲಿ 31 ರನ್‌ಗಳು ಮಾತ್ರ ಬಂದವು. ಕಳೆದ ಪಂದ್ಯದಲ್ಲೂ ಬಿರುಸಿನ ಆಟವಾಡಿದ್ದ ತಾಹ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು.

11ನೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದ ಪವನ್‌ ತಂಡದ ರನ್‌ ವೇಗ ಹೆಚ್ಚಿಸಿದರು. ವಿನಯ್‌ ಕೂಡಾ ಬಿರುಸಿನ ಹೊಡೆತಗಳ ಮೂಲಕ ಮಿಂಚಿದರು. 

ವಿನಯ್‌ ನಿರ್ಗಮನದ ಬಳಿಕ ಕ್ರೀಸ್‌ಗೆ ಬಂದ ಪ್ರವೀಣ್‌ ದುಬೆ ಕೇವಲ 8 ಎಸೆತಗಳಲ್ಲಿ 23 ರನ್‌ ಗಳಿಸಿದರು. ಇದರಿಂದ ಟೈಗರ್ಸ್‌ ತಂಡ ಸವಾಲಿನ ಗುರಿ ನೀಡಿತು. ಈ ಪಂದ್ಯದಲ್ಲಿ ಗೆಲುವು ಪಡೆಯುವ ತಂಡ ಶುಕ್ರವಾರ ನಡೆಯುವ ಎರಡನೇ ಕ್ವಾಲಿಫೈಯರ್‌ನಲ್ಲಿ ಬೆಳಗಾವಿ ಪ್ಯಾಂಥರ್ಸ್‌ ತಂಡವನ್ನು ಎದುರಿಸಲಿದೆ. ಪ್ಯಾಂಥರ್ಸ್‌ ತಂಡ ಬುಧವಾರ ನಡೆದಿದ್ದ ಕ್ವಾಲಿಫೈಯರ್‌–1 ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್‌ ಎದುರು 37 ರನ್‌ಗಳಿಂದ ಪರಾಭವಗೊಂಡಿತ್ತು. ಟಸ್ಕರ್ಸ್‌ ತಂಡ ಟೂರ್ನಿಯ ಫೈನಲ್‌ ಪ್ರವೇಶಿಸಿದೆ.

ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 190 (ಮೊಹಮ್ಮದ್‌ ತಾಹ 42, ಆರ್‌.ವಿನಯ್‌ ಕುಮಾರ್ 55, ಕೆ.ಬಿ.ಪವನ್ ಔಟಾಗದೆ 56, ಪ್ರವೀಣ್‌ ದುಬೆ 23, ಅಭಿಮನ್ಯು ಮಿಥುನ್ 27ಕ್ಕೆ 1,ರಿಷಬ್‌ ಸಿಂಗ್ 34ಕ್ಕೆ 1).

Post Comments (+)