ಮಯಂಕ್‌–ರಾಹುಲ್‌ಗೆ ಆರಂಭದ ಹೊಣೆ?

7
ಇಂದಿನಿಂದ ಸಿಡ್ನಿಯಲ್ಲಿ ಭಾರತ–ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ

ಮಯಂಕ್‌–ರಾಹುಲ್‌ಗೆ ಆರಂಭದ ಹೊಣೆ?

Published:
Updated:
Prajavani

ಸಿಡ್ನಿ: ಕರ್ನಾಟಕದ ಜೋಡಿ ಮಯಂಕ್ ಅಗರವಾಲ್ ಮತ್ತು ಕೆ.ಎಲ್. ರಾಹುಲ್ ಅವರು ಗುರುವಾರ ಸಿಡ್ನಿಯಲ್ಲಿ ಆರಂಭವಾಗಲಿರುವ ಟೆಸ್ಟ್‌ನಲ್ಲಿ ಇನಿಂಗ್ಸ್‌ ಆರಂಭಿಸುವರೇ?

ಬುಧವಾರ ಆಯ್ಕೆಯಾಗಿರುವ 13 ಆಟಗಾರರ ಭಾರತ ತಂಡದ ಪಟ್ಟಿಯ ಮೇಲೆ ಕಣ್ಣಾಡಿಸಿದರೆ ಈ ಸಾಧ್ಯತೆ ದಟ್ಟವಾಗಿದೆ. ಮೆಲ್ಬರ್ನ್‌ನಲ್ಲಿ ನಡೆದಿದ್ದ ಬಾರ್ಡರ್‌-ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಮತ್ತು ಮುರಳಿ ವಿಜಯ್ ಅವರನ್ನು ಕೈಬಿಡಲಾಗಿತ್ತು. ಕರ್ನಾಟಕದ ಮಯಂಕ್ ಅಗರವಾಲ್ ಪದಾರ್ಪಣೆ ಮಾಡಿದ್ದರು. ಅವರೊಂದಿಗೆ ಹನುಮವಿಹಾರಿ ಇನಿಂಗ್ಸ್ ಆರಂಭಿಸಿದ್ದರು.

ಆದರೆ, ಅಪ್ಪನಾದ ಸಂಭ್ರಮದಲ್ಲಿರುವ ರೋಹಿತ್ ಶರ್ಮಾ ಅವರು ಭಾರತಕ್ಕೆ ಮರಳಿದ್ದಾರೆ. ಆದ್ದರಿಂದ ಅವರು ಆಡುವ ಆರನೇ ಸ್ಥಾನಕ್ಕೆ ಹನುಮವಿಹಾರಿ ಕಣಕ್ಕಿಳಿಯುವುದು ಖಚಿತ. ಇದರಿಂದಾಗಿ ರಾಹುಲ್‌ಗೆ ಲಯಕ್ಕೆ ಮರಳಲು ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ.

ಆದ್ದರಿಂದ ಕನ್ನಡಿಗರಿಬ್ಬರು ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ಮಯಂಕ್ ಮೆಲ್ಬರ್ನ್‌ನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ 42 ರನ್‌ ಗಳಿಸಿದ್ದರು.

ಇಶಾಂತ್, ಅಶ್ವಿನ್ ಅಲಭ್ಯ: ವೇಗದ ಬೌಲರ್ ಇಶಾಂತ್ ಶರ್ಮಾ ಮತ್ತು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರು ಗಾಯದಿಂದ ಚೇತರಿಸಿಕೊಂಡಿಲ್ಲ. ಆದ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.  ಅಶ್ವಿನ್ ಅವರು ಪರ್ತ್ ಮತ್ತು ಮೆಲ್ಬರ್ನ್ ಪಂದ್ಯಗಳಲ್ಲಿಯೂ ಆಡಿರಲಿಲ್ಲ.

‘ಅಶ್ವಿನ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ಪ್ರವಾಸ ಟೂರ್ನಿಗಳಲ್ಲಿಯೂ ಇದೇ ರೀತಿ ಅಗಿತ್ತು. ಇದು ದುರದೃಷ್ಟಕರ ಸಂಗತಿ. ಅವರು ಸಂಪೂರ್ಣ ಫಿಟ್ ಆದರೆ, ತಂಡಕ್ಕೆ ಮಹತ್ವದ ಕಾಣಿಕೆ ನೀಡಬಲ್ಲರು’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 2–1ರಿಂದ ಮುನ್ನಡೆ ಸಾಧಿಸಿದೆ. ಸಿಡ್ನಿಯಲ್ಲಿ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ, ಮೊದಲ ಬಾರಿಗೆ  ಕಾಂಗರೂ ನೆಲದಲ್ಲಿ ಸರಣಿ ಜಯದ ಇತಿಹಾಸ ರಚನೆಯಾಗಲಿದೆ. ಈ ಸಾಧನೆ ಮಾಡಿದ ಭಾರತ ತಂಡದ ಮೊದಲ ನಾಯಕನೆಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಲಿದ್ದಾರೆ.  ಆದರೆ ಪಂದ್ಯ ಸೋತರೆ ಸರಣಿ ಡ್ರಾ ಆಗಲಿದೆ.

1947–48ರಿಂದ ಇಲ್ಲಿಯವರೆಗೆ ಭಾರತ ತಂಡವು ಆಸ್ಟ್ರೇಲಿಯಾ ಆಡಿದ ಸರಣಿಗಳಲ್ಲಿ 1980–81, 1985–86 ಮತ್ತು 2003–04 ರಲ್ಲಿ ಮಾತ್ರ ಡ್ರಾ ಮಾಡಿಕೊಂಡಿತ್ತು. ಉಳಿದಂತೆ ಏಳು ಸಲವೂ ಸೋತಿತ್ತು.

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗರವಾಲ್, ಹನುಮವಿಹಾರಿ, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಕುಲದೀಪ್ ಯಾದವ್. ರವಿಶಾಸ್ತ್ರಿ(ಮುಖ್ಯ ಕೋಚ್).

ಆಸ್ಟ್ರೇಲಿಯಾ: ಟಿಮ್ ಪೇನ್(ನಾಯಕ–ವಿಕೆಟ್‌ಕೀಪರ್), ಮಾರ್ಕಸ್ ಹ್ಯಾರಿಸ್, ಆ್ಯರನ್ ಫಿಂಚ್, ಉಸ್ಮಾನ್ ಖ್ವಾಜಾ, ಟ್ರಾವಿಸ್ ಹೆಡ್, ಶಾನ್ ಮಾರ್ಷ್, ನೇಥನ್ ಲಯನ್, ಮಿಚೆಲ್ ಸ್ಟಾರ್ಕ್,  ಪ್ಯಾಟ್ ಕಮಿನ್ಸ್‌, ಜೋಶ್ ಹ್ಯಾಜಲ್‌ವುಡ್, ಮಾರ್ನಸ್ ಲಬುಚಾನೆ, ಪೀಟರ್ ಹ್ಯಾಂಡ್ಸ್‌ಕಂಬ್, ಪೀಟರ್ ಸಿಡ್ಲ್

ಪಂದ್ಯ ಆರಂಭ: ಪ್ರತಿದಿನ ಬೆಳಿಗ್ಗೆ 5

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !