ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಜಿ ವಜಾ: ಸ್ಥಿರೀಕರಿಸಿದ ಕಾರ್ಯಕಾರಿ ಸಮಿತಿ

Published 9 ನವೆಂಬರ್ 2023, 15:15 IST
Last Updated 9 ನವೆಂಬರ್ 2023, 15:15 IST
ಅಕ್ಷರ ಗಾತ್ರ

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಾಜಿ ಪ್ರಭಾಕರ್ ಅವರನ್ನು ವಜಾಗೊಳಿಸಿರುವ ಕ್ರಮವನ್ನು ಫೆಡರೇಷನ್‌ನ ಕಾರ್ಯಕಾರಿ ಸಮಿತಿ ಗುರುವಾರ ಸ್ಥಿರೀಕರಿಸಿದೆ. ಫೆಡರೇಷನ್‌ ಅಧ್ಯಕ್ಷ ಕಲ್ಯಾಣ್ ಚೌಬೆ, ನಂಬಿಕೆದ್ರೋಹದ ಕಾರಣ ನೀಡಿ ಶಾಜಿ ಅವರನ್ನು ಬುಧವಾರ ವಜಾಗೊಳಿಸಿದ್ದರು.

ಚೌಬೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯು, ಕರ್ನಾಟಕದ ಎಂ.ಸತ್ಯನಾರಾಯಣ ಅವರನ್ನು ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ ಕ್ರಮವನ್ನೂ ಅನುಮೋದಿಸಿತು. ಆ ಮೂಲಕ ಔಪಚಾರಿಕ ಕ್ರಮ ಪೂರೈಸಿತು. ಭಾರತ ತಂಡದ ಮಾಜಿ ನಾಯಕರಾದ ಬೈಚುಂಗ್‌ ಭುಟಿಯಾ, ಕ್ಲೈಮಾಕ್ಸ್‌ ಲಾರೆನ್ಸ್ ಸೇರಿ ನಾಲ್ವರು ಸದಸ್ಯರು ಸಭೆಗೆ ಗೈರುಹಾಜರಾಗಿದ್ದರು.

51 ವರ್ಷದ ಶಾಜಿ ಅವರ ಅಧಿಕಾರದ ಅವಧಿ 14 ತಿಂಗಳಿಗೆ ಕೊನೆಗೊಂಡಿತು.‌

ಸತ್ಯನಾರಾಯಣ ಅವರನ್ನು ಆಗಸ್ಟ್‌ನಲ್ಲಿ ಫೆಡರೇಷನ್‌ನ ಉಪ ಮಹಾಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು.

‘ಫೀಫಾ ಸಂತೋಷ್‌ ಟ್ರೋಫಿ’:

ಸಂತೋಷ್‌ ಟ್ರೋಫಿಗಾಗಿ ನಡೆಯುವ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಹೆಸರನ್ನು ಇನ್ನು ಮುಂದೆ ‘ಫೀಫಾ ಸಂತೋಷ್‌ ಟ್ರೋಫಿ’ ಎಂದು ಕರೆಯಲಾಗುವುದು ಎಂದು ಸಭೆಯ ವೇಳೆ ಚೌಬೆ ತಿಳಿಸಿದರು. ಮುಂದಿನ ಸಾಲಿನ ಚಾಂಪಿಯನ್‌ಷಿಪ್‌ ಅರುಣಾಚಲಪ್ರದೇಶದಲ್ಲಿ ನಡೆಯಲಿದೆ. ಮಾರ್ಚ್ 9 ಅಥವಾ 10ರಂದು ಫೈನಲ್ ನಿಗದಿಯಾಗಿದ್ದು, ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಹಾಜರಾಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.

‘ಕೆಲಸ ಗುರುತಿಸಿ ಹೊಣೆ’:

ಬೆಂಗಳೂರು ವರದಿ: ‘ರಾಜ್ಯದಲ್ಲಿ ನಾನು ನಾಲ್ಕು ವರ್ಷಗಳಲ್ಲಿ ಮಾಡಿದ ಕೆಲಸ ಗುರುತಿಸಿ ಅಧ್ಯಕ್ಷರು ನನಗೆ ಈ ಜವಾಬ್ದಾರಿ ನೀಡಿದ್ದಾರೆ. ಈಗ ಒಳ್ಳೆಯ ತಂಡವಿದೆ. ಒಳ್ಳೆಯ ಕೆಲಸ ಮಾಡಲು ನನ್ನಿಂದಾಷ್ಟು ಪ್ರಯತ್ನಿಸುವೆ’ ಎಂದು ಮಹಾಪ್ರಧಾನ ಕಾರ್ಯದರ್ಶಿ ಹೊಣೆ ವಹಿಸಿಕೊಂಡಿರುವ ಸತ್ಯನಾರಾಯಣ ಅವರು ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT