ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿ | ಮುಕುಂದ್ ವಿರುದ್ದ ಶಿಸ್ತುಕ್ರಮ: ಎಐಟಿಎ ಚಿಂತನೆ

Published 17 ಅಕ್ಟೋಬರ್ 2023, 14:20 IST
Last Updated 17 ಅಕ್ಟೋಬರ್ 2023, 14:20 IST
ಅಕ್ಷರ ಗಾತ್ರ

ನವದೆಹಲಿ: ಮೊರೊಕ್ಕೊ ವಿರುದ್ಧದ ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯ ಪಂದ್ಯದ ವೇಳೆ ಅಧಿಕೃತ ಉಡುಪು ಧರಿಸದೇ ಇದ್ದುದಕ್ಕೆ ಭಾರತ ತಂಡದ ಆಟಗಾರ ಶಶಿಕಿರಣ್‌ ಮುಕುಂದ್‌ ಮೇಲೆ ಶಿಸ್ತುಕ್ರಮ ಜರುಗಿಸಲು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಮುಂದಾಗಿದೆ.

ಭಾರತ– ಮೊರೊಕ್ಕೊ ನಡುವಣ ಡೇವಿಸ್‌ ಕಪ್‌ ವಿಶ್ವ ಗುಂಪು–2 ಪ್ಲೇ ಆಫ್‌ ಪಂದ್ಯ ಲಖನೌದಲ್ಲಿ ನಡೆದಿತ್ತು. ಮುಕುಂದ್‌ ಅವರು ಸೆ.16 ರಂದು ಮೊದಲ ಸಿಂಗಲ್ಸ್‌ನಲ್ಲಿ ಮೊರೊಕ್ಕೊದ ಯಾಸಿನ್‌ ದ್ಲಿಮಿ ವಿರುದ್ಧ ಆಡಿದ್ದರು.

ಭಾರತ ತಂಡದ ಅಧಿಕೃತ ಪ್ರಾಯೋಜಕರು ಒದಗಿಸಿದ್ದ ಉಡುಪು ಧರಿಸದ ಅವರು ತಮ್ಮ ಖಾಸಗಿ ಪ್ರಾಯೋಜಕರು ನೀಡಿದ್ದ ಜೆರ್ಸಿ ಧರಿಸಿ ಆಡಲಿಳಿದಿದ್ದರು. ಮಾತ್ರವಲ್ಲ, ಅವರು ಧರಿಸಿದ್ದ ಟಿ–ಶರ್ಟ್‌ನಲ್ಲಿ ಬರೆದಿದ್ದ ‘INDIA' ಹೆಸರು ತಪ್ಪಾಗಿ ಮುದ್ರಿತವಾಗಿತ್ತು. ತಂಡದ ಪ್ರಾಯೋಜಕರು ಈ ವಿಷಯವನ್ನು ಎಐಟಿಎ ಗಮನಕ್ಕೆ ತಂದಿದ್ದರು.

ಎಐಟಿಎಯು ಈ ಬಗ್ಗೆ ವಿವರಣೆ ಕೋರಿ ಸೆ.28 ರಂದು ಮುಕುಂದ್‌ ಅವರಿಗೆ ನೋಟಿಸ್‌ ನೀಡಿತ್ತು. ನೋಟಿಸ್‌ಗೆ ಅ.3 ರಂದು ಉತ್ತರಿಸಿದ್ದ ಮುಕುಂದ್, ‘ತಂಡದ ಪ್ರಾಯೋಜಕರು ನೀಡಿದ್ದ ಉಡುಪು ಆರಾಮದಾಯಕ ಎನಿಸದ ಕಾರಣ ಪಂದ್ಯದ ವೇಳೆ ಧರಿಸಲಿಲ್ಲ. ತಂಡದ ನಾಯಕ ಮತ್ತು ಕೋಚ್‌ ಅವರ ಅನುಮತಿ ಪಡೆದುಕೊಂಡೇ ಬೇರೆ ಉಡುಪು ಧರಿಸಿದ್ದೆ’ ಎಂದು ಸ್ಪಷ್ಟನೆ ನೀಡಿದ್ದರು.

‘ಘಟನೆ ಬಗ್ಗೆ ಮುಕುಂದ್‌ ಕ್ಷಮೆಯಾಚಿಸಿದ್ದಾರೆ. ಆದರೂ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆದಿದೆ’ ಎಂದು ಎಐಟಿಎ ಕಾರ್ಯದರ್ಶಿ ಅನಿಲ್‌ ಧೂಪರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT