ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ದಾಖಲೆ: ಅಪೂರ್ವ ಚಿನ್ನ ಗೆದ್ದ ಅಪೂರ್ವಿ

ಅಂಜುಮ್ ಮೌದ್ಗಿಲ್‌, ಇಳವೆನ್ನಿಲಗೆ ನಿರಾಸೆ
Last Updated 23 ಫೆಬ್ರುವರಿ 2019, 17:45 IST
ಅಕ್ಷರ ಗಾತ್ರ

ನವದೆಹಲಿ: ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ ಮೊದಲ ದಿನವಾದ ಶನಿವಾರ ಭಾರತ ಅಪೂರ್ವ ಸಾಧನೆ ಮಾಡಿದೆ. ಜೈಪುರ ನಿವಾಸಿ, 26 ವರ್ಷದ ಅಪೂರ್ವಿ ಚಾಂಡೇಲ ಅವರು ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅಪೂರ್ವಿ 252.9 ಸ್ಕೋರು ಗಳಿಸಿದರು. ಚೀನಾದ ರೌಜು ಜುವಾ 251.8 ಸ್ಕೋರುಗಳೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಹಾಂಗ್ ಕ್ಸು 230.4 ಸ್ಕೋರು ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇವರು ಕೂಟ ಚೀನಾದ ಶೂಟರ್‌.

ಕಳೆದ ವರ್ಷ ಏಪ್ರಿಲ್‌ನಲ್ಲಿ ಕೊರಿಯಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 252.4 ಸ್ಕೋರು ಗಳಿಸಿದ ರೌಜು ಜುವಾ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಮುರಿದು ಅಪೂರ್ವಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಎಂಟು ಸ್ಪರ್ಧಿಗಳಿದ್ದ ಫೈನಲ್‌ನ ಆರಂಭದಿಂದಲೇ ಅಪೂರ್ವಿ ಪಾರಮ್ಯ ಮೆರೆದರು. ತಾಯಿ ಬಿಂದು ಅವರ ಸಮ್ಮುಖದಲ್ಲಿ ಸ್ಕೋರು ಕಲೆ ಹಾಕುತ್ತಾ ಸಾಗಿದ ಅವರು ಬೆಳ್ಳಿ ಪದಕ ಗೆದ್ದ ಎದುರಾಳಿಗಿಂತ 1.1 ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಮೊದಲಿಗರಾದರು.

ಅಜುಮ್‌ ಮೌದ್ಗಿಲ್‌, ಇಳವೆನ್ನಿಲಗೆ ನಿರಾಸೆ: ಕಳೆದ ವರ್ಷ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ಮಾಡಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಅಪೂರ್ವಿ ಶನಿವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 629.3 ಸ್ಕೋರುಗಳೊಂದಿಗೆ ನಾಲ್ಕನೆಯವರಾಗಿದ್ದರು.

ಭರವಸೆ ಮೂಡಿಸಿದ್ದ ಭಾರತದ ಅಂಜುಮ್ ಮೌದ್ಗಿಲ್ ಮತ್ತು ಇಳವೆನ್ನಿಲ ವಾಳವರಿವನ್‌ ನಿರಾಸೆಗೆ ಒಳಗಾದರು. ಇವರು ಕ್ರಮವಾಗಿ 12 ಮತ್ತು 30ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅಂಜುಮ್‌ 628 ಮತ್ತು ಇಳವೆನ್ನಿಲ 625.3 ಸ್ಕೋರು ಗಳಿಸಿದ್ದರು.

ಅರ್ಹತಾ ಸುತ್ತಿನಲ್ಲಿ ರೌಜು ಜುವಾ (634) ಅಗ್ರ ಸ್ಥಾನ ಗಳಿಸಿದ್ದರು. ಚೀನಾದ ಇಬ್ಬರೂ ಶೂಟರ್‌ಗಳು ಆರಂಭದಿಂದಲೇ ಪ್ರಬಲ ಪೈಪೋಟಿ ನೀಡಿದರು. ಆದರೆ ‍ಪಟ್ಟು ಬಿಡದ ಅಪೂರ್ವಿ 18ನೇ ಶಾಟ್‌ನಲ್ಲಿ 10.8 ಸ್ಕೋರು ಗಳಿಸಿ ಮುನ್ನಡೆದರು. ತಿರುಗೇಟು ನೀಡಿದ ಕ್ಸು 10.9 ಸ್ಕೋರಿನೊಂದಿಗೆ ಹಿನ್ನಡೆಯನ್ನು 0.1 ಪಾಯಿಂಟ್‌ಗೆ ತಗ್ಗಿಸಿದರು.

ಈ ಸಂದರ್ಭದಲ್ಲಿ ಗುರಿಯನ್ನು ಇನ್ನಷ್ಟು ನಿಖರಗೊಳಿಸಿದ ಅಪೂರ್ವಿ 10.6, 10.8, 10.6 ಮತ್ತು 10.8ರ ಸಾಧನೆ ಮಾಡಿದ ಅಪೂರ್ವಿ 0.8 ಪಾಯಿಂಟ್‌ಗಳ ಮುನ್ನಡೆ ಸಾಧಿಸಿದರು. 24ನೇ ಶಾಟ್‌ನಲ್ಲಿ ಅಪೂರ್ವಿ ಮತ್ತು ರೌಜು ಜುವಾ 10.5 ಸ್ಕೋರು ಗಳಿಸಿದರು. ಆದರೆ ಅಷ್ಟರಲ್ಲಿ ಅಪೂರ್ವಿ ಮುನ್ನಡೆ ಸಾಕಷ್ಟು ಹೆಚ್ಚಿತ್ತು.

ವಿಶ್ವಕಪ್‌ನಲ್ಲಿ ಮೂರನೇ ಪದಕ
ಇದು, ವಿಶ್ವಕಪ್‌ನಲ್ಲಿ ಅಪೂರ್ವಿ ಅವರ ಮೂರನೇ ವೈಯಕ್ತಿಕ ಪದಕವಾಗಿದೆ. 2015ರಲ್ಲಿ ಚಾಂಗ್ವಾನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಅದೇ ವರ್ಷ ನಡೆದ ಮತ್ತೊಂದು ವಿಶ್ವಕಪ್‌ನಲ್ಲಿ ಬೆಳ್ಳಿಯ ಪದಕ ಗಳಿಸಿದ್ದರು.

2014ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಅಪೂರ್ವಿ ಕಳೆದ ಬಾರಿ ನಡೆದಿದ್ದ ಕೂಟದಲ್ಲಿ ಕಂಚಿನ ಪದಕ ಗಳಿಸಿದ್ದರು. ಮಿಶ್ರ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದರು.

*
ಸತತ ಅಭ್ಯಾಕ್ಕೆ ಒಲಿದ ಪದಕ ಇದು. ಫೈನಲ್ ಸ್ಪರ್ಧೆ ತುಂಬ ಸವಾಲಿನದ್ದಾಗಿತ್ತು. ಆದರೂ ಛಲ ಬಿಡದೆ ಹೋರಾಡಿದ್ದಕ್ಕೆ ಫಲ ಸಿಕ್ಕಿತು.
-ಅಪೂರ್ವಿ ಚಾಂಡೇಲ, ಭಾರತದ ಶೂಟರ್‌

***

ಅಪೂರ್ವಿ ಚಾಂಡೇಲ

ಜನ್ಮಸ್ಥಳ: ಜೈಪುರ

ಜನನ: 1993, ಜನವರಿ 4

ಸ್ಪರ್ಧಿಸುವ ವಿಭಾಗ: 10 ಮೀ ಏರ್ ರೈಫಲ್‌

ಪ್ರಮುಖ ಸಾಧನೆಗಳು

2019ರ ವಿಶ್ವಕಪ್‌ (ನವದೆಹಲಿ) ಚಿನ್ನ

2018ರ ವಿಶ್ವ ಚಾಂಪಿಯನ್‌ಷಿಪ್‌ (ಚಾಂಗ್ವಾನ್‌) ಬೆಳ್ಳಿ

2014ರ ಕಾಮನ್‌ವೆಲ್ತ್ ಕೂಟ (ಗ್ಲಾಸ್ಗೊ) ಚಿನ್ನ

2018ರ ಕಾಮನ್‌ವೆಲ್ತ್ ಕೂಟ (ಗೋಲ್ಡ್ ಕೋಸ್ಟ್‌) ಕಂಚು

2014ರ ಏಷ್ಯನ್‌ ಕ್ರೀಡಾಕೂಟ (ಜಕಾರ್ತ) ಕಂಚು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT