ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕ್ತಾ, ನಾರಾಯಣ್‌, ಮನೀಷ್‌ಗೆ ಚಿನ್ನ

ಏಷ್ಯನ್‌ ಪ್ಯಾರಾ ಕ್ರೀಡಾಕೂಟ: ಮಂಗಳವಾರ 11 ಪದಕ ಗೆದ್ದ ಭಾರತದ ಸ್ಪರ್ಧಿಗಳು
Last Updated 9 ಅಕ್ಟೋಬರ್ 2018, 19:54 IST
ಅಕ್ಷರ ಗಾತ್ರ

ಜಕಾರ್ತ: ಅಮೋಘ ಸಾಮರ್ಥ್ಯ ತೋರಿದ ಏಕ್ತಾ ಬಯಾನ್‌, ನಾರಾಯಣ್ ಠಾಕೂರ್‌ ಮತ್ತು ಮನೀಷ್‌ ನರ್ವಾಲ್‌ ಅವರು ಏಷ್ಯನ್‌ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾರೆ.

ಮಂಗಳವಾರ ಭಾರತದ ಖಾತೆಗೆ ಒಟ್ಟು 11 ಪದಕಗಳು ಸೇರ್ಪಡೆಯಾಗಿವೆ.

ಮಹಿಳೆಯರ ಎಫ್‌ 32/51 ವಿಭಾಗದ ಕ್ಲಬ್‌ ಥ್ರೋ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಏಕ್ತಾ, ಫೈನಲ್‌ನಲ್ಲಿ 16.02 ಮೀಟರ್ಸ್‌ ಸಾಮರ್ಥ್ಯ ತೋರಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು.

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ (ಯುಎಇ) ಅಲಕಾಬಿ ಥೆಕ್ರಾ ಬೆಳ್ಳಿಯ ಪದಕ ಗೆದ್ದರು. ಅವರಿಂದ 15.75 ಮೀಟರ್ಸ್‌ ಸಾಮರ್ಥ್ಯ ಮೂಡಿಬಂತು. ಏಕ್ತಾ ಅವರು ಈ ವರ್ಷದ ಆರಂಭದಲ್ಲಿ ನಡೆದಿದ್ದ ಇಂಡಿಯಾ ಓಪನ್‌ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ಪುರುಷರ ಟಿ–35 ವಿಭಾಗದ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಠಾಕೂರ್‌ ಪಾರಮ್ಯ ಮೆರೆದರು. ಆರಂಭದಿಂದಲೂ ಚುರುಕಾಗಿ ಓಡಿದ ಅವರು 14.02 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿ ಸಂಭ್ರಮಿಸಿದರು.

ಸೌದಿ ಅರೇಬಿಯಾದ ಅದಾವಿ ಅಹ್ಮದ್‌ (14.40ಸೆ.) ಮತ್ತು ಹಾಂಕಾಂಗ್‌ನ ಯಿಯು ಚುಯಿ ಬಾವೊ (14.62ಸೆ.) ಅವರು ಕ್ರಮವಾಗಿ ಈ ವಿಭಾಗದ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು.

ಎಸ್‌ಎಚ್‌–1 ವಿಭಾಗದ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಮನೀಷ್‌ ಚಿನ್ನಕ್ಕೆ ಮುತ್ತಿಕ್ಕಿದರು.

ಪುರುಷರ ಎಫ್‌ 43/44, ಎಫ್‌ 62/64 ವಿಭಾಗದ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಸುರೇಂದರ್‌ ಅನೀಶ್‌ ಕುಮಾರ್‌, ಟಿ 45/46/47 ವಿಭಾಗದ ಹೈಜಂಪ್‌ನಲ್ಲಿ ರಾಂಪಾಲ್‌ ಮತ್ತು ಎಫ್‌ 56/57 ವಿಭಾಗದ ಶಾಟ್‌ಪಟ್‌ನಲ್ಲಿ ವೀರೇಂದರ್‌ ಬೆಳ್ಳಿಯ ಪದಕಗಳಿಗೆ ಕೊರಳೊಡ್ಡಿದರು.

ಪುರುಷರ ಎಫ್‌ 11 ವಿಭಾಗದ ಶಾಟ್‌ಪಟ್‌ನಲ್ಲಿ ಮೋನು ಗಾಂಗಸ್‌, ಟಿ 44/62/64 ವಿಭಾಗದ 200 ಮೀಟರ್‌ ಓಟದಲ್ಲಿ ಆನಂದನ್‌ ಗುಣಶೇಖರನ್‌ ಮತ್ತು ಮಹಿಳೆಯರ ಟಿ 45/46/47 ವಿಭಾಗದ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಜಯಂತಿ ಬೆಹ್ರಾ ಅವರು ಕಂಚಿನ ಪದಕಗಳನ್ನು ಜಯಿಸಿದರು. ಪುರುಷರ ಎಫ್‌ 46 ವಿಭಾಗದ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಗುರ್ಜರ್‌ ಕಂಚಿನ ಸಾಧನೆ ಮಾಡಿದರು.

ಒಟ್ಟು 28 ಪದಕಗಳನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. 73 ಚಿನ್ನ, 32 ಬೆಳ್ಳಿ ಮತ್ತು 29 ಕಂಚಿನ ಪದಕಗಳನ್ನು ಜಯಿಸಿರುವ ಚೀನಾ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ. ದಕ್ಷಿಣ ಕೊರಿಯಾ ತಂಡ ಎರಡನೇ ಸ್ಥಾನ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT