ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | Wrestling: ಬಜರಂಗ್‌ ಪೂನಿಯಾಗೆ ಮುಖಭಂಗ

ಕುಸ್ತಿ: ಅಮನ್‌ ಸೆಹ್ರಾವತ್‌, ಕಿರಣ್‌, ಸೋನಂಗೆ ಕಂಚು
Published 6 ಅಕ್ಟೋಬರ್ 2023, 14:37 IST
Last Updated 6 ಅಕ್ಟೋಬರ್ 2023, 14:37 IST
ಅಕ್ಷರ ಗಾತ್ರ

ಹಾಂಗ್‌ಝೌ: ‘ಆಯ್ಕೆ ಟ್ರಯಲ್ಸ್‌’ನಿಂದ ವಿನಾಯಿತಿ ಪಡೆದು ಏಷ್ಯನ್‌ ಗೇಮ್ಸ್‌ಗೆ ನೇರ ಅರ್ಹತೆ ಪಡೆದುಕೊಂಡಿದ್ದ ಕುಸ್ತಿಪಟು ಬಜರಂಗ್‌ ಪೂನಿಯಾ ಅವರು ಪದಕ ಗೆಲ್ಲಲು ವಿಫಲರಾಗಿ ಮುಖಭಂಗ ಅನುಭವಿಸಿದರು.

ಪುರುಷರ 65 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಬಜರಂಗ್‌, ಜಪಾನ್‌ನ ಕೈಕಿ ಯಮಗುಚಿ ಎದುರು ಪರಾಭವಗೊಂಡರು. ಯುವ ಕುಸ್ತಿಪಟು ಅಮನ್‌ ಸೆಹ್ರಾವತ್‌ (ಪುರುಷರ 57 ಕೆ.ಜಿ. ವಿಭಾಗ), ಸೋನಂ ಮಲಿಕ್‌ (ಮಹಿಳೆಯರ ಫ್ರೀಸ್ಠೈಲ್‌ 62 ಕೆ.ಜಿ) ಮತ್ತು ಕಿರಣ್‌ ಬಿಷ್ಣೋಯಿ (ಮಹಿಳೆಯರ ಫ್ರೀಸ್ಠೈಲ್‌ 76 ಕೆ.ಜಿ) ಅವರು ಕಂಚು ಗೆದ್ದರು.

ಏಷ್ಯನ್‌ ಗೇಮ್ಸ್‌ಗೆ ಕುಸ್ತಿ ತಂಡದ ಆಯ್ಕೆಗೆ ನಡೆಸಿದ ಟ್ರಯಲ್ಸ್‌ನಲ್ಲಿ ಪುರುಷರ 65 ಕೆ.ಜಿ. ವಿಭಾಗದಲ್ಲಿ ವಿಶಾಲ್‌ ಕಾಳಿರಾಮನ್‌ ಅವರು ಗೆದ್ದಿದ್ದರು. ಆದರೆ ಭಾರತ ಒಲಿಂಪಿಕ್‌ ಸಂಸ್ಥೆಯ ಅಡಹಾಕ್‌ ಸಮಿತಿಯು ಬಜರಂಗ್‌ ಅವರಿಗೆ ನೇರ ಪ್ರವೇಶ ನೀಡಿತ್ತು. ಟ್ರಯಲ್ಸ್‌ನಿಂದ ವಿನಾಯಿತಿ ನೀಡುವ ಅಡ್‌ಹಾಕ್ ಸಮಿತಿಯ ನಿರ್ಧಾರಕ್ಕೆ ಕುಸ್ತಿಪಟುಗಳ ವಲಯದಿಂದ ಆಕ್ರೋಶ ವ್ಯಕ್ತವಾಗಿತ್ತು.

ಮಹಿಳೆಯರ ವಿಭಾಗದಲ್ಲಿ ವಿನೇಶಾ ಫೋಗಟ್‌ ಅವರಿಗೂ ಟ್ರಯಲ್ಸ್‌ನಿಂದ ವಿನಾಯಿತಿ ನೀಡಿ, ನೇರ ಪ್ರವೇಶ ಕಲ್ಪಿಸಿತ್ತು. ಆದರೆ ಅವರು ಗಾಯದ ಕಾರಣ ಏಷ್ಯನ್‌ ಗೇಮ್ಸ್‌ನಿಂದ ಹಿಂದೆ ಸರಿದಿದ್ದರು. ಅವರ ಬದಲು ಅವಕಾಶ ಪಡೆದಿದ್ದ ಅಂತಿಮ್‌ ಪಂಘಲ್‌ ಗುರುವಾರ ಕಂಚು ಗೆದ್ದಿದ್ದರು.

ಬಜರಂಗ್‌  ಅವರು ಮೊದಲ ಎರಡು ಸುತ್ತುಗಳಲ್ಲಿ ಕ್ರಮವಾಗಿ ಫಿಲಿಪ್ಪೀನ್ಸ್‌ನ ರೊನಿಲ್ ತುಬೊಗ್‌ (8–1) ಮತ್ತು ಬಹರೇನ್‌ನ ಅಲಿಬೇಗ್ ಅಲಿಬೆಗೊವ್‌ ಅವರನ್ನು ಮಣಿಸಿದರು. ಆದರೆ ಸೆಮಿಫೈನಲ್‌ನಲ್ಲಿ ಲಯ ಕಳೆದುಕೊಂಡ ಅವರ ಇರಾನ್‌ನ ಅಮೌಜದ್ ಖಲೀಲಿ ಕೈಯಲ್ಲಿ 1–8 ರಿಂದ ಪರಾಭವಗೊಂಡರು.

2022ರ ವಿಶ್ವ ಚಾಂಪಿಯನ್‌ ಮತ್ತು ಹಾಲಿ ಏಷ್ಯನ್‌ ಚಾಂಪಿಯನ್‌ ಆಗಿರುವ ಖಲೀಲಿ ಆರಂಭದಲ್ಲೇ ನಾಲ್ಕು ಪಾಯಿಂಟ್ಸ್ ಗಿಟ್ಟಿಸಿ ಭಾರತದ ಪೈ‌ಲ್ವಾನ್‌ ಮೇಲೆ ಒತ್ತಡ ಹೇರಿದರು. ಎರಡನೇ ಅವಧಿಯ ಆರಂಭದಲ್ಲಿ ಮತ್ತೆ ನಾಲ್ಕು ಪಾಯಿಂಟ್ಸ್‌ ಕಲೆಹಾಕಿದರು. ಮರುಹೋರಾಟ ನಡೆಸಿದ ಬಜರಂಗ್‌ ಒಂದು ಪಾಯಿಂಟ್ಸ್‌ ಗಳಿಸಲಷ್ಟೇ ಶಕ್ತರಾದರು.

ಕಂಚಿನ ಪದಕದ ‘ಪ್ಲೇ ಆಫ್‌’ನಲ್ಲೂ ಬಜರಂಗ್‌, ಯಾವುದೇ ಪ್ರತಿರೋಧ ಒಡ್ಡದೆ ಎದುರಾಳಿಗೆ ಶರಣಾದರು. ಜಪಾನ್‌ನ ಯಮಗುಚಿ ತಾಂತ್ರಿಕ ಕೌಶಲ ಶ್ರೇಷ್ಠತೆಯ (10–0) ಆಧಾರದಲ್ಲಿ ಗೆದ್ದರು.

ಅಮನ್‌ಗೆ ಕಂಚು:

ಅಮನ್ ಸೆಹ್ರಾವತ್‌ ಅವರು ‘ಪ್ಲೇ ಆಫ್‌’ನಲ್ಲಿ ತಾಂತ್ರಿಕ ಕೌಶಲ ಶ್ರೇಷ್ಠತೆಯ ಆಧಾರದಲ್ಲಿ ಚೀನಾದ ಮಿಂಗ್‌ಹು ಲಿಯು ಅವರನ್ನು ಪರಾಭಗೊಳಿಸಿದರು.

ಸೆಮಿಫೈನಲ್‌ನಲ್ಲಿ ಅವರು 10–12 ರಿಂದ ಜಪಾನ್‌ನ ತೊಷಿಹಿರೊ ಹಸೆಗವ ಎದುರು ಸೋತರು. ಇಬ್ಬರೂ ಪೈಲ್ವಾನರು ಆಕ್ರಮಣಕಾರಿ ಪ್ರದರ್ಶನ ನೀಡಿದ್ದರಿಂದ ಸಾಕಷ್ಟು ಪಾಯಿಂಟ್‌ಗಳು ಬಂದವು.

ಸೋನಂ ಅವರು ಕಂಚಿನ ಪದಕದ ಪ್ಲೇ ಆಫ್‌ನಲ್ಲಿ 7–5 ರಿಂದ ಚೀನಾದ ಜಿಯಾ ಲಾಂಗ್‌ ವಿರುದ್ಧ ಗೆದ್ದರೆ, ಕಿರಣ್‌ ಅವರು 6–3 ರಿಂದ ಮಂಗೋಲಿಯದ ಅರ್ಯುನ್‌ಜರ್ಗಲ್‌ ಗನ್ಬತ್‌ ಅವರನ್ನು ಮಣಿಸಿದರು.

ಶುಕ್ರವಾರ ಸ್ಪರ್ಧೆಗಿಳಿದ ಭಾರತದ ಕುಸ್ತಿಪಟುಗಳಲ್ಲಿ ರಾಧಿಕಾ (ಮಹಿಳೆಯರ 68 ಕೆ.ಜಿ.) ಮಾತ್ರ ಪದಕ ಸುತ್ತು ತಲುಪಲು ವಿಫಲರಾದರು.

ಭಾರತದ ಕುಸ್ತಿಪಟುಗಳು ಈ ಕೂಟದಲ್ಲಿ ಇದುವರೆಗೆ ಐದು ಕಂಚು ಜಯಿಸಿದ್ದಾರೆ. ಶನಿವಾರ ನಾಲ್ವರು ಪೈಲ್ವಾನರು ಕಣಕ್ಕಿಳಿಯಲಿದ್ದಾರೆ.

ಸೋತ ನಿರಾಸೆಯಲ್ಲಿ ಬಜರಂಗ್‌

ಸೋತ ನಿರಾಸೆಯಲ್ಲಿ ಬಜರಂಗ್‌

–ಪಿಟಿಐ ಚಿತ್ರ

ಅಮನ್‌ ಸೆಹ್ರಾವತ್‌

ಅಮನ್‌ ಸೆಹ್ರಾವತ್‌

–ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT