ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಗೆದ್ದು ಅಗ್ರಸ್ಥಾನಕ್ಕೇರಿದ ಬಜರಂಗ್ ಪೂನಿಯಾ

ಮಟಿಯೊ ಪೆಲಿಕಾನ್ ರ‍್ಯಾಂಕಿಂಗ್ ಕುಸ್ತಿ ಟೂರ್ನಿ: ವಿಶಾಲ್ ಕಳಿರಮಣ್‌ಗೆ ಕಂಚಿನ ಪದಕ
Last Updated 8 ಮಾರ್ಚ್ 2021, 12:38 IST
ಅಕ್ಷರ ಗಾತ್ರ

ರೋಮ್‌: ಭಾರತದ ಬಜರಂಗ್ ಪೂನಿಯಾ ಇಲ್ಲಿ ನಡೆಯುತ್ತಿರುವ ಮಟಿಯೊ ಪೆಲಿಕಾನ್ ರ‍್ಯಾಂಕಿಂಗ್‌ ಸೀರಿಸ್ ಕುಸ್ತಿ ಟೂರ್ನಿಯಲ್ಲಿ ಚಿನ್ನ ಗೆದ್ದು 65 ಕೆಜಿ ವಿಭಾಗದವರ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದರು. ಭಾನುವಾರ ರಾತ್ರಿ ನಡೆದ ಫೈನಲ್ ಬೌಟ್‌ನಲ್ಲಿ ಅವರು ಮಂಗೋಲಿಯಾದ ಟಲ್ಗಾ ತುಮುರ್ ಒಚಿರ್ ವಿರುದ್ಧ ಹಿನ್ನಡೆ ಅನುಭವಿಸಿದ್ದರು. ಆದರೆ ಅಂತಿಮ 30 ಸೆಕೆಂಡುಗಳಲ್ಲಿ ಎದುರಾಳಿಯನ್ನು ಕಂಗೆಡಿಸಿ ಎರಡು ಪಾಯಿಂಟ್‌ ತಮ್ಮದಾಗಿಸಿಕೊಂಡು ಗೆಲುವಿನ ನಗೆ ಬೀರಿದರು. ಈ ಮೂಲಕ ಪ್ರಶಸ್ತಿಯನ್ನು ಉಳಿಸಿಕೊಂಡರು.

ಲೆಗ್ ಡಿಫೆನ್ಸ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದ 27 ವರ್ಷದ ಬಜರಂಗ್ ರಕ್ಷಣಾತ್ಮಕ ತಂತ್ರಗಳನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.

’ಕೋವಿಡ್‌–19ರ ಕಾಟದ ನಂತರ ಇದೇ ಮೊದಲು ಕಣಕ್ಕೆ ಇಳಿದಿದ್ದೇನೆ. ಹಿಂದಿಗಿಂತ ಈಗ ಲೆಗ್ ಡಿಫೆನ್ಸ್‌ನಲ್ಲಿ ಸುಧಾರಣೆ ಕಂಡಿದ್ದೇನೆ. ಆದರೂ ಇನ್ನಷ್ಟು ಪ್ರಯತ್ನದ ಅಗತ್ಯವಿದೆ. ಆಕ್ರಮಣದ ಮೇಲೆಯೂ ಹೆಚ್ಚು ಗಮನ ನೀಡಬೇಕಾಗಿದೆ’ ಎಂದು ಬಜರಂಗ್ ಹೇಳಿದರು.

‘65 ಕೆಜಿ ವಿಭಾಗದಲ್ಲಿ ಕಠಿಣ ಸ್ಪರ್ಧೆ ಇರುತ್ತದೆ. ಫೈನಲ್‌ನಲ್ಲಿ ನನ್ನ ಎದುರಾಳಿಯಾಗಿದ್ದವರು ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಆದ್ದರಿಂದ ಅವರು ಹೆಚ್ಚು ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಇಲ್ಲಿ ಉತ್ತಮ ಸಾಮರ್ಥ್ಯ ತೋರಿದರೆ ಒಲಿಂಪಿಕ್ಸ್‌ನಲ್ಲಿ ಭರವಸೆಯಿಂದ ಕಣಕ್ಕೆ ಇಳಿಯಲು ನೆರವಾಗಲಿದೆ ಎಂಬ ಮನೋಭಾವದಿಂದ ಅವರು ಕಾದಾಡಿದ್ದರು. ಹೀಗಾಗಿ ಪೈಪೋಟಿ ಕಠಿಣವಾಗಿತ್ತು. ಕೊನೆಗೂ ಗೆಲುವು ಸಾಧಿಸಿದ್ದರಲ್ಲಿ ಖುಷಿ ಇದೆ’ ಎಂದು ಅವರು ನುಡಿದರು.

ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಹಾಜರಾಗುವ ಮೊದಲು ವಿದೇಶದಲ್ಲೇ ಕೆಲ ಕಾಲ ತರಬೇತಿ ಪಡೆಯಲು ಬಯಸಿರುವ ಬಜರಂಗ್ ಏಪ್ರಿಲ್ ಒಂಬತ್ತರಿಂದ 11ರ ವರೆಗೆ ಕಜಕಸ್ತಾನದಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ನಂತರ ತವರಿಗೆ ಮರಳಲು ನಿರ್ಧರಿಸಿದ್ದಾರೆ.

ವಿಶಾಲ್‌ಗೆ ಕಂಚಿನ ಪದಕ

ಒಲಿಂಪಿಕೇತರ ಸ್ಪರ್ಧೆಯಾದ 70 ಕೆಜಿ ವಿಭಾಗದಲ್ಲಿ ಭಾರತದ ವಿಶಾಲ್ ಕಳಿರಮಣ್ ಕಜಕಸ್ತಾನದ ಸಿರ್ಬಾಸ್ ತಲ್ಗಟ್ ವಿರುದ್ಧ 5–1ರಲ್ಲಿ ಗೆದ್ದು ಕಂಚಿನ ಪದಕ ಗಳಿಸಿದರು. ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಅಮಾನತಿಗೆ ಒಳಗಾಗಿ ಈಚೆಗೆ ಕಣಕ್ಕೆ ಮರಳಿರುವ ನರಸಿಂಗ್ ಪಂಚಮ್ ಯಾದವ್ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಕಜಕಸ್ತಾನದ ಡನಿಯಾರ್ ಕೈಸನೊವ್‌ಗೆ 0–5ರಲ್ಲಿ ಮಣಿದರು.

ಟೂರ್ನಿಯಲ್ಲಿ ಭಾರತ ಒಟ್ಟು ಏಳು ಪದಕಗಳನ್ನು ಗಳಿಸಿತು. ವಿನೇಶಾ ಪೋಗಟ್ ಮತ್ತು ಸರಿತಾ ಮೊರ್ ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿದ್ದರು. ವಿನೇಶಾ ಮೊದಲ ಬಾರಿ ವಿಶ್ವ ರ‍್ಯಾಂಕಿಂಗ್‌ನ ಅಗ್ರಸ್ಥಾನಕ್ಕೇರಿದ್ದರು. ಗ್ರೀಕೊ ರೋಮನ್ ವಿಭಾಗದಲ್ಲಿ ನೀರಜ್ (63 ಕೆಜಿ), ಕುಲದೀಪ್ ಮಲಿಕ್ (72 ಕೆಜಿ) ಮತ್ತು ನವೀನ್ (130 ಕೆಜಿ) ಕಂಚಿನ ಪದಕ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT