ಸ್ಟಾಕ್‌ಹೋಮ್: ಭಾರತ ತಂಡವು ಡೇವಿಸ್ ಕಪ್ ವಿಶ್ವ ಗುಂಪು ಒಂದರ ಪಂದ್ಯದಲ್ಲಿ ಸ್ವೀಡನ್ ವಿರುದ್ಧ 0–4ಯಿಂದ ಪರಾಭವಗೊಂಡಿತು. ಇದು ಭಾರತ ತಂಡಕ್ಕೆ ಸ್ವೀಡನ್ ವಿರುದ್ಧ ಆರನೇ ಸೋಲಾಗಿದೆ.
ಶನಿವಾರ ನಡೆದ ಮೊದಲೆರಡು ಸಿಂಗಲ್ಸ್ ಪಂದ್ಯಗಳಲ್ಲಿ ಶ್ರೀರಾಮ್ ಬಾಲಾಜಿ ಮತ್ತು ರಾಮಕುಮಾರ್ ರಾಮನಾಥನ್ ಅವರು ನೇರ ಸೆಟ್‌ಗಳಲ್ಲಿ ಎದುರಾಳಿಗಳಿಗೆ ಮಣಿದಿದ್ದರು. ಭಾನುವಾರ ನಡೆದ ಡಬಲ್ಸ್‌ನಲ್ಲೂ ರಾಮ್‌ಕುಮಾರ್ ಮತ್ತು ಬಾಲಾಜಿ ನಿರಾಸೆ ಅನುಭವಿಸಿದರು. ಈ ಜೋಡಿ 3-6, 4-6ರಿಂದ ಆ್ಯಂಡ್ರೆ ಗೊರಾನ್ಸನ್ ಮತ್ತು ಫಿಲಿಪ್ ಬರ್ಗೆವ್ ಅವರಿಗೆ ಶರಣಾಯಿತು. ನಂತರ ನಡೆದ ರಿವರ್ಸ್ ಸಿಂಗಲ್ಸ್ ಔಪಚಾರಿಕವಾಗಿತ್ತು. ಅದರಲ್ಲಿ ರಾಷ್ಟ್ರೀಯ ಮಾಜಿ ಚಾಂಪಿಯನ್ ಸಿದ್ಧಾರ್ಥ್ ಅವರನ್ನು ಕಣಕ್ಕೆ ಇಳಿದರು. ಅವರು 2-6, 2-6ರಿಂದ ಎಲಿಯಾಸ್ ಯೀಮರ್ ವಿರುದ್ಧ ಸೋತರು.