ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಕ್‌ ಪೂನಿಯಾ ಚಿನ್ನದ ‘ದಂಗಲ್‌’

Last Updated 18 ಆಗಸ್ಟ್ 2019, 19:31 IST
ಅಕ್ಷರ ಗಾತ್ರ

ದೀಪಕ್‌ ಪೂನಿಯಾ...

ಹರಿಯಾಣದ ಝಾಜರ್ ಜಿಲ್ಲೆಯ ಈ ಕುಸ್ತಿಪಟು ಹೋದ ಬುಧವಾರ ವಿಶ್ವ ಜೂನಿಯರ್ ಕುಸ್ತಿಯಲ್ಲಿ ಸಂಚಲನ ಮೂಡಿಸಿದರು.

ಈಸ್ಟೋನಿಯಾದ ಟ್ಯಾಲ್ಲಿನ್‌ನಲ್ಲಿ ನಡೆದ ವಿಶ್ವ ಜೂನಿಯರ್‌ ಕುಸ್ತಿ ಟೂರ್ನಿಯಲ್ಲಿ ಅವರಿಗೆ ಚಾಂಪಿಯನ್‌ ಪಟ್ಟ ಒಲಿಯಿತು. 86 ಕೆ.ಜಿ. ವಿಭಾಗದ ಫೈನಲ್‌ ಬೌಟ್‌ನಲ್ಲಿ ಅವರು ರಷ್ಯಾದ ಅಲಿಕ್‌ ಶಿಬುಜುಕೊವ್‌ ಅವರನ್ನು ಸೋಲಿಸಿದರು 18 ವರ್ಷಗಳ ಬಳಿಕ ಭಾರತಕ್ಕೆ ಈ ವಿಭಾಗದಲ್ಲಿ ಚಿನ್ನ ತಂದುಕೊಟ್ಟರು.

ಪೈಲ್ವಾನಗಳೇ ಹೆಚ್ಚಾಗಿರುವ ಚಾರಾ ಎಂಬ ಊರಿನ ಈ ಹುಡುಗ ತಾನೂ ಅದೇ ಮಾರ್ಗದಲ್ಲಿ ಸಾಗುವ ಕನಸು ಕಂಡು ನನಸಾಗಿಸಿಕೊಂಡವರು. ಅವರ ತಂದೆ ಸುಭಾಷ್ ಅವರದು ಹಾಲು ಮಾರುವ ವೃತ್ತಿ. ಬಾಲ್ಯದಿಂದಲೇ ಹಸುವಿನ ಹಾಲು ಸೇವಿಸುತ್ತಾ ಬೆಳೆದವರು ಪೂನಿಯಾ.

ಕಿರಿಯರ ವಿಶ್ವ ಚಾಂಪಿಯನ್‌ ಪಟ್ಟ ಅವರಿಗೆ ಸುಲಭವಾಗಿಯೇನೂ ಒಲಿದಿಲ್ಲ. ಎರಡು ಬಾರಿ ವಿಫಲವಾಗಿ ಮೂರನೇ ಬಾರಿ ಈ ಪಟ್ಟ ಅಲಂಕರಿಸಿದ್ದಾರೆ. 18 ವರ್ಷಗಳ ಹಿಂದೆ ಭಾರತದ ಪಲ್ವಿಂದರ್‌ ಸಿಂಗ್‌ ಚೀಮಾ ಹಾಗೂ ರಮೇಶ್‌ ಗುಲಿಯಾ 2001ರಲ್ಲಿ ತಾಷ್ಕೆಂಟ್‌ನಲ್ಲಿ ನಡೆದ ಟೂರ್ನಿಯಲ್ಲಿ ಚಿನ್ನ ಗೆದ್ದಿದ್ದರು. ‘ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇದು ನನ್ನ ಕೊನೆಯ ಪ್ರಯತ್ನವಾಗಿತ್ತು. ಇದನ್ನು ಸ್ಮರಣೀಯವಾಗಿಸಿಕೊಳ್ಳಲು ಯೋಚಿಸಿದ್ದೆ’ ಎಂದು 20 ವರ್ಷದ ಪೂನಿಯಾ ನುಡಿಯುತ್ತಾರೆ.

ತಮ್ಮ ನಾಲ್ಕನೇ ವರ್ಷದಲ್ಲೇ ಸಾಂಪ್ರದಾಯಿಕ ಕ್ರೀಡೆಯ ಅಖಾಡಕ್ಕಿಳಿದವರು ಪೂನಿಯಾ. ಅವರ ಸಹೋದರ ಸುನಿಲ್‌ಕುಮಾರ್‌ ಅವರದು ಕುಸ್ತಿಯಲ್ಲಿ ಜನಪ್ರಿಯ ಹೆಸರು. ಅವರಿಂದ ಕುಸ್ತಿ ಪಟ್ಟುಗಳನ್ನು ಕಲಿತರು ಪೂನಿಯಾ. ಏಳನೇ ವರ್ಷದಿಂದ ಪದಕಗಳ ಬೇಟೆ ಆರಂಭಿಸಿದರು. ಸುತ್ತಮುತ್ತಲಿನ ಊರುಗಳ ಕಣಗಳಲ್ಲಿಕರಾಮತ್ತು ತೋರಲಾರಂಭಿಸಿದರು. ಇದು ಅವರ ಹಣಕಾಸು ಕೊರತೆಯನ್ನು ನೀಗಿಸಲಾರಂಭಿಸಿತು. ಹೀಗಾಗಿ ಪೂನಿಯಾ ಅವರ ತಮ್ಮ ತಂದೆಯ ಶ್ರಮವೂ ಕಡಿಮೆಯಾಗುವಂತಾಯಿತು.

ಕುಸ್ತಿಯಲ್ಲಿ ಭವಿಷ್ಯ ಅರಸಿ 2015ರಲ್ಲಿ ದೆಹಲಿಯ ಛತ್ರಶಾಲಾಗೆ ತೆರಳಿದರು ಪೂನಿಯಾ. ಅಲ್ಲಿ ಸ್ಥಳೀಯ ಕೋಚ್‌ಗಳ ಹೊರತಾಗಿ, ಭಾರತದ ಕೋಚ್‌ ಆಗಿದ್ದ ವ್ಲಾಡಿಮಿರ್‌ ಮೆಸ್ಟ್‌ವಿರಿಶ್ವಿಲಿ ದೀಪಕ್ ಪ್ರತಿಭೆಗೆ ನೀರೆರೆದರು. ಅಲ್ಲಿಂದ ಅವರಿಗೆ ಪ್ರಶಸ್ತಿಗಳೂ ಒಲಿದವು.

2016ರ ಸೆಪ್ಟೆಂಬರ್‌ನಲ್ಲಿ ಜಾರ್ಜಿಯಾದಲ್ಲಿ ನಡೆದ ವಿಶ್ವ ಕೆಡೆಟ್‌ ಕುಸ್ತಿ ಚಾಂಪಿಯನ್‌ಷಿಪ್‌ ಚಿನ್ನ, ಹೋದ ವರ್ಷ ನಡೆದ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡರು. ಸೆಪ್ಟೆಂಬರ್‌ನಲ್ಲಿ ಕಜಕಸ್ತಾನದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಈ ಚಾಂಪಿಯನ್‌ಷಿಪ್‌ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಟೂರ್ನಿಯಾಗಿದೆ.

‘ಈಗ ಗೆದ್ದಿರುವ ಚಿನ್ನದ ಪದಕದಿಂದ ವಿಶ್ವ ಚಾಂಪಿಯನ್‌ಷಿಪ್‌ಗೆ ಸಿದ್ಧವಾಗುವ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದೇನೆ. ಒಲಿಂಪಿಕ್‌ ಅರ್ಹತೆ ಗಳಿಸುವ ವಿಶ್ವಾಸವಿದೆ’ಎಂದು ಪೂನಿಯಾ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT