ಪ್ಯಾರಿಸ್: ಭಾರತದ ಧರಂವೀರ್ ಅವರು ಪ್ಯಾರಾಲಿಂಪಿಕ್ಸ್‌ನ ಪುರುಷರ ಕ್ಲಬ್ ಥ್ರೋ (ಎಫ್51) ಸ್ಪರ್ಧೆಯಲ್ಲಿ ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದೇ ಸ್ಪರ್ಧೆಯಲ್ಲಿ ಸ್ವದೇಶದ ಪ್ರಣವ್ ಶೂರ್ಮಾ ಬೆಳ್ಳಿಗೆ ಕೊರಳೊಡ್ಡಿದ್ದಾರೆ.
ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ, ಸೋನಿಪತ್‌ನ 35 ವರ್ಷ ವಯಸ್ಸಿನ ಧರಂವೀರ್ ಬುಧವಾರ ತಡರಾತ್ರಿ ನಡೆದ ಫೈನಲ್‌ನಲ್ಲಿ 35.92 ಮೀಟರ್ ಸಾಧನೆಯೊಂದಿಗೆ ಅಗ್ರಸ್ಥಾನಿಯಾದರು. ನಾಲ್ಕು ಫೌಲ್‌ಗಳ ನಂತರ ಐದನೇ ಪ್ರಯತ್ನದಲ್ಲಿ ಈ ಎಸೆತ ಬಂತು.
ಫರೀದಾಬಾದ್‌ನ 29 ವರ್ಷ ವಯಸ್ಸಿನ ಶೂರ್ಮಾ ಅವರು ಮೊದಲ ಪ್ರಯತ್ನದಲ್ಲಿಯೇ 34.59 ಮೀಟರ್ ಸಾಧನೆ ಮಾಡಿ ಪದಕ ಖಚಿತಗೊಳಿಸಿದರು. ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ ಶೂರ್ಮಾ ಅವರಿಗೆ ಧರಂವೀರ್ ಅವರನ್ನು ಮೀರಿಸಲು ಸಾಧ್ಯವಾಗಲಿಲ್ಲ. ಸರ್ಬಿಯಾದ ಫಿಲಿಪ್ ಗ್ರಾವೊಕ್ ಎರಡನೇ ಪ್ರಯತ್ನದಲ್ಲಿ 34.18 ಮೀಟರ್ ಎಸೆದು ಕಂಚಿನ ಪದಕ ಪಡೆದರು.
ಕಣದಲ್ಲಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ, ಧರಂವೀರ್ ಅವರ ಮೆಂಟರ್ ಅಮಿತ್ ಕುಮಾರ್ ಸರೋಹ ಅವರು 23.96 ಮೀಟರ್‌ಗಳ ಪ್ರಯತ್ನದೊಂದಿಗೆ ಕೊನೆಯ ಸ್ಥಾನವನ್ನು ಗಳಿಸಿದರು. ಅಮಿತ್ ಅವರು 2017ರ ವಿಶ್ವ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ.
ಎಫ್51 ಕ್ಲಬ್ ಥ್ರೋ ವಿಭಾಗದಲ್ಲಿ ಅಥ್ಲೀಟ್‌ಗಳು ಕುಳಿತಿರುವ ಸ್ಥಾನದಿಂದಲೇ ಸ್ಪರ್ಧಿಸುತ್ತಾರೆ. ಅವರು ಭುಜಗಳು ಮತ್ತು ತೋಳನ್ನು ಅವಲಂಬಿಸಿ ಥ್ರೋ ಮಾಡುತ್ತಾರೆ.
ಕಾಲುವೆಯೊಂದಕ್ಕೆ ತಪ್ಪಾಗಿ ಡೈವ್ ಮಾಡಿದ್ದ ಪರಿಣಾಮ ಸೊಂಟದ ಕೆಳಭಾಗ ಪಾರ್ಶ್ವವಾಯುವಿಗೆ ತುತ್ತಾಗಿರುವ ಧರಂವೀರ್ ಅವರು ಅಮಿತ್ ಕುಮಾರ್ ಸರೋಹ ಅವರಿಂದ ಪ್ರೇರಣೆ ಪಡೆದು, ಪ್ಯಾರಾ ಕ್ರೀಡೆಯತ್ತ ಆಸಕ್ತಿ ಬೆಳೆಸಿಕೊಂದರು. ಅದಾಗಿ ಎರಡು ವರ್ಷದಲ್ಲಿ ಧರಂವೀರ್ 2016ರ ರಿಯೊ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. 2022ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಕ್ರಿಕೆಟ್ ಮತ್ತು ರೋಲರ್ ಹಾಕಿ ಉತ್ಸಾಹಿಯಾಗಿದ್ದ ಶೂರ್ಮಾ 16 ವರ್ಷದವನಾಗಿದ್ದಾಗ ಸಿಮೆಂಟ್ ಶೀಟ್ ಅವರ ತಲೆಯ ಮೇಲೆ ಬಿದ್ದು, ಬೆನ್ನುಹುರಿಗೆ ತೀವ್ರವಾದ ಗಾಯಗೊಂಡು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಕುಟುಂಬದ ಬೆಂಬಲ ಮತ್ತು ಸಕಾರಾತ್ಮಕ ಮನಸ್ಥಿತಿ ಈ ಸಾಧನೆಗೆ ಪ್ರೇರಣೆಯಾಯಿತು. ಅವರು ಬ್ಯಾಂಕ್ ಆಫ್ ಬರೋಡಾದಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದಾರೆ.
ಫೈನಲ್‌ಗೆ ಸಿಮ್ರಾನ್ ಶರ್ಮಾ ಪ್ಯಾರಿಸ್: ಭಾರತದ ಪ್ಯಾರಾ ಅಥ್ಲೀಟ್ ಸಿಮ್ರಾನ್ ಶರ್ಮಾ ಮಹಿಳೆಯರ 100 ಮೀ. (ಟಿ12) ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ತನ್ನ ಮಾರ್ಗದರ್ಶಿ ಅಭಯ್ ಸಿಂಗ್ ಜೊತೆಗೂಡಿ 24 ವರ್ಷ ವಯಸ್ಸಿನ ಹಾಲಿ ವಿಶ್ವ ಚಾಂಪಿಯನ್ ಸಿಮ್ರಾನ್ ಅವರು ಎರಡನೇ ಸೆಮಿಫೈನಲ್‌ನಲ್ಲಿ 12.33 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ರೇಸ್‌ನಲ್ಲಿ ಜರ್ಮನಿಯ ಕ್ಯಾತ್ರಿನ್ ಮುಲ್ಲರ್ ರೊಟ್‌ಗಾರ್ಡ್ ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಪ್ರವೇಶಿಸಿದ್ದಾರೆ. ಸಿಮ್ರಾನ್ ಒಟ್ಟಾರೆ ಮೂರನೇ ಶ್ರೇಯಾಂಕವನ್ನು ಪಡೆದರು. ಟಿ12 ವಿಭಾಗದ ಸ್ಪರ್ಧೆಯು ದೃಷ್ಟಿಹೀನತೆ ಹೊಂದಿರುವ ಅಥ್ಲೀಟ್‌ಗಳಿಗೆ ಮೀಸಲಾಗಿದೆ. ಕಂಚಿನ ಪದಕದ ಸುತ್ತಿಗೆ ಹರ್ವಿಂದರ್, ಪೂಜಾ ಭಾರತದ ಬಿಲ್ಗಾರರಾದ ಹರ್ವಿಂದರ್ ಸಿಂಗ್ ಮತ್ತು ಪೂಜಾ ಜತ್ಯಾನ್ ಅವರನ್ನು ಒಳಗೊಂಡ ರಿಕರ್ವ್ ಮಿಶ್ರ ತಂಡವು ಮುಕ್ತ ವಿಭಾಗದಲ್ಲಿ ಕಂಚಿನ ಪದಕದ ಸುತ್ತಿಗೆ ಅರ್ಹತೆ ಪಡೆದಿದೆ. ಸೆಮಿಫೈನಲ್‌ನಲ್ಲಿ ಭಾರತದ ಜೋಡಿಯು 6–ರಿಂದ ಇಟಲಿಯ ಟ್ರಾವಿಸಾನಿ ಸ್ಟೆಫಾನೊ ಮತ್ತು ಮಿಜ್ನೊ ಎಲಿಸಬೆಟ್ಟಾ ಅವರಿಗೆ ಶರಣಾಯಿತು. ಹೀಗಾಗಿ, ಕಂಚಿನ ಪದಕದ ಸುತ್ತಿನಲ್ಲಿ ಸ್ಲೊವೇನಿಯಾದ ತಂಡವನ್ನು ಎದುರಿಸಲಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಜೋಡಿಯು 6–0ಯಿಂದ ತನಗಿಂತ ಪೋಲೆಂಡ್‌ನ ಮಿಲೆನಾ ಓಲ್‌ಸ್ಜೆವ್ಸ್ಕಾ ಮತ್ತು ಲುಕಾಸ್ಜ್ ಸಿಸ್ಜೆಕ್ ಅವರನ್ನು ಸುಲಭವಾಗಿ ಸೋಲಿಸಿತು. ಅದಕ್ಕೂ ಮುನ್ನ 5–4ರಿಂದ ಆಸ್ಟ್ರೇಲಿಯಾದ ಜೋಡಿಯನ್ನು (ಟೇಮನ್ ಕೆಂಟನ್ ಸ್ಮಿತ್ ಮತ್ತು ಅಮಂಡಾ ಜೆನ್ನಿಂಗ್ಸ್) ಹಿಮ್ಮೆಟ್ಟಿಸಿತ್ತು. ಹರ್ವಿಂದರ್ ಸಿಂಗ್ ಅವರು ಪುರುಷರ ರಿಕರ್ವ್ ವೈಯಕ್ತಿಕ ವಿಭಾಗದಲ್ಲಿ ಬುಧವಾರ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದರು. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಆರ್ಚರಿಯಲ್ಲಿ ಭಾರತಕ್ಕೆ ದಕ್ಕಿದ ಮೊದಲ ಪದಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.