ಅಪ್ಪ, ಅಮ್ಮ ಇಬ್ಬರೂ ವೈದ್ಯರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿದವರು. ಕ್ರೀಡೆಗಳನ್ನು ಹವ್ಯಾಸಕ್ಕಾಗಿಯಷ್ಟೇ ಆಡಿದವರು. ಆದರೆ, ಅವರ ಮಗಳನ್ನು ನಾಲ್ಕನೆಯ ವಯಸ್ಸಿಗೇ ಚೆಸ್ ಆಕರ್ಷಿಸಿತು. ಆ ಬಾಲೆಯ ಪುಟ್ಟ ಕೈಬೆರಳುಗಳು ಮತ್ತು ಮಸ್ತಿಷ್ಕದ ನಡುವಿನ ಜೊತೆಯಾಟ ಆಗಲೇ ಚುರುಕಾಗಿತ್ತು. ಚೆಸ್ ಎಂದರೆ ‘ಬುದ್ಧಿವಂತರ ಆಟ’ ಮತ್ತು ‘ವಿದ್ಯಾಭ್ಯಾಸಕ್ಕೂ ಪೂರಕ’ ಆಗಿರುವುದರಿಂದ ವೈದ್ಯ ದಂಪತಿ ತಮ್ಮ ಮಗಳ ಹವ್ಯಾಸಕ್ಕೆ ಪ್ರೋತ್ಸಾಹದ ನೀರೆರೆದರು. ಒಂದೊಂದೇ ಸಾಧನೆ ಮಾಡುತ್ತ ನಡೆದ ಮಗಳ ಸಾಮರ್ಥ್ಯ ಮನಗಂಡ ಅವರು ಆಕೆಯನ್ನು ವೃತ್ತಿಪರ ಚೆಸ್ ಆಟಗಾರ್ತಿಯನ್ನಾಗಿ ರೂಪಿಸಲು ನಿರ್ಧರಿಸಿದರು. ಅವರ ಅಂದಿನ ತೀರ್ಮಾನಕ್ಕೆ ಪ್ರತಿಫಲವಾಗಿ ವಿಶ್ವಕಪ್ ಒಲಿದಿದೆ.

ಆ ಬಾಲೆಯೇ ದಿವ್ಯಾ ದೇಶಮುಖ್. ಮಹಾರಾಷ್ಟ್ರದ ನಾಗ್ಪುರದ ನಮ್ರತಾ ದೇಶಮುಖ್ ಮತ್ತು ಜಿತೇಂದ್ರ ದೇಶಮುಖ್ ದಂಪತಿಯ ಪುತ್ರಿ. ಏಳು ವರ್ಷದವಳಾಗಿದ್ದಾಗಲೇ ರಾಷ್ಟ್ರೀಯ ಚಾಂಪಿಯನ್ ಆಗಿದ್ದು ದಿವ್ಯಾ ಜೀವನದ ಮಹತ್ವದ ತಿರುವು. ಶ್ರೀನಾಥ್ ನಾರಾಯಣನ್ ಅವರಿಂದ ತರಬೇತಿ ಪಡೆಯುತ್ತ ಬೆಳೆದ ದಿವ್ಯಾ ಡರ್ಬನ್ನಲ್ಲಿ ನಡೆದ 10 ವರ್ಷದೊಳಗಿನವರ ವಿಶ್ವ ಚಾಂಪಿಯನ್ಷಿಪ್ ಕಿರೀಟ ಕೂಡ ತಮ್ಮದಾಗಿಸಿಕೊಂಡವರು.

ಇತ್ತ ತಮಿಳುನಾಡಿನಲ್ಲಿ ಹದಿಹರೆಯದ ಚೆಸ್ ಆಟಗಾರರು ಪ್ರಖರವಾಗಿ ಬೆಳಗುತ್ತಿದ್ದರೆ, ಅತ್ತ ಮಹಾರಾಷ್ಟ್ರದ ಹೆಸರು ಕೂಡ ಮಿಂಚುವಂತೆ ಮಾಡಿದವರು ದಿವ್ಯಾ. ‘ಜನರೇಷನ್ ಝೀ’ ಎಂದರೆ, ಇಂದಿನ ನವಪೀಳಿಗೆಯ ಹುಡುಗ, ಹುಡುಗಿಯರದ್ದು ವಿಭಿನ್ನ ಜೀವನಶೈಲಿ. ಎಲ್ಲ ಕೆಲಸಗಳಲ್ಲಿಯೂ ವೇಗ ಮತ್ತು ಆಕ್ರಮಣಶೀಲತೆಯನ್ನು ಇಷ್ಟಪಡುವವರೇ ಹೆಚ್ಚು. ದಿವ್ಯಾ ಕೂಡ ಆರಂಭದಲ್ಲಿ ಹಾಗೆಯೇ ಇದ್ದರು. ಚೆಸ್ ಪ್ರೀತಿ ಹೆಚ್ಚಾದಂತೆ ಪ್ರಬುದ್ಧರಾಗಿ ಬೆಳೆದರು. 19ನೇ ವಯಸ್ಸಿಗೆ ಮಹಿಳೆಯರ ಫಿಡೆ ಚೆಸ್ ವಿಶ್ವಕಪ್ ಚಾಂಪಿಯನ್ ಆದರು.

ಬಟುಮಿಯಲ್ಲಿ ನಡೆದ ಈ ಚಾಂಪಿಯನ್ಷಿಪ್ನಲ್ಲಿ ಅವರ ಗೆಲುವಿನ ಹಾದಿ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ. ಚೆಸ್ ಕ್ರೀಡೆಯಲ್ಲಿ ಅನುಭವಿಯಾದಷ್ಟೂ ಬುದ್ಧಿಮತ್ತೆ ಮತ್ತು ಕೌಶಲ ಪಕ್ವವಾಗುತ್ತದೆ. ಚುರುಕುತನ ದುಪ್ಪಟ್ಟಾಗುತ್ತದೆ. ತಾಳ್ಮೆ ಮತ್ತು ಆಕ್ರಮಣಶೀಲ ನಡೆಗಳನ್ನು ಪ್ರಯೋಗಿಸುವ ಔಚಿತ್ಯಗಳು ಕರಗತವಾಗುತ್ತವೆ. ಈ ಎಲ್ಲದರಲ್ಲೂ ಕೋನೇರು ಹಂಪಿ ಅವರದ್ದು ಉತ್ಕೃಷ್ಟ ಆಟ. ಅವರು ದಶಕಗಳಿಂದ ಈ ಆಟದಲ್ಲಿ ಹೆಸರು ಮಾಡಿದವರು. ಆಂಧ್ರಪ್ರದೇಶದ ಹಂಪಿ ಅವರು 2002ರಲ್ಲಿ ಗ್ರ್ಯಾಂಡ್ಮಾಸ್ಟರ್ ಆದಾಗ ದಿವ್ಯಾ ಇನ್ನೂ ಜನಿಸಿರಲೇ ಇಲ್ಲ. ತಾಳ್ಮೆಯೇ ಮೂರ್ತಿವೆತ್ತಂತೆ ಇರುವ ಹಂಪಿ ಎದುರಿನ ಫೈನಲ್ನಲ್ಲಿ ಎರಡು ಕ್ಲಾಸಿಕಲ್ ಪಂದ್ಯಗಳನ್ನು ಸಮಬಲಗೊಳಿಸಿಕೊಂಡಿದ್ದೇ ದಿವ್ಯಾ ಅವರ ಅಮೋಘ ಸಾಧನೆ. ಟೈಬ್ರೇಕರ್ನಲ್ಲಿಯೂ ಮೇಲುಗೈ ಸಾಧಿಸಿದ್ದು ಅಸಾಮಾನ್ಯ ಸಾಧನೆ.

ಈ ವಿಶ್ವಕಪ್ ಜೊತೆಗೆ ದಿವ್ಯಾ ಅವರು ಗ್ರ್ಯಾಂಡ್ಮಾಸ್ಟರ್ ಗೌರವವನ್ನೂ ಗಿಟ್ಟಿಸಿದ್ದಾರೆ. ಮುಂಬರುವ ಕ್ಯಾಂಡಿಡೇಟ್ ಚೆಸ್ನಲ್ಲಿಯೂ ಆಡಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಮಹಿಳಾ ಚೆಸ್ ರಂಗದಲ್ಲಿ ಹಂಪಿ, ಹಾರಿಕಾ ಮತ್ತಿತರರು ತಮ್ಮ ವೃತ್ತಿಜೀವನದ ಸಂಧ್ಯಾಕಾಲಕ್ಕೆ ಸರಿಯುತ್ತಿರುವ ಹೊತ್ತಿನಲ್ಲಿ ದಿವ್ಯಾ ಹೊರಹೊಮ್ಮಿರುವುದು ಹೊಸ ಭರವಸೆ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.