ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಫೈವ್ಸ್: ನೆದರ್ಲೆಂಡ್ಸ್‌ಗೆ ಜಯ, ಭಾರತ ರನ್ನರ್ ಅಪ್

Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ಮಸ್ಕತ್‌: ಭಾರತ ತಂಡವು ಎಫ್‌ಐಎಚ್‌ ಮಹಿಳಾ ಹಾಕಿ ಫೈವ್ಸ್‌ ವಿಶ್ವಕಪ್ ಫೈನಲ್‌ನಲ್ಲಿ ನೆದರ್ಲೆಂಡ್ಸ್‌ ವಿರುದ್ಧ 2–7 ಗೋಲುಗಳಿಂದ ಸೋತು ರನ್ನರ್‌ ಅಪ್ ಸ್ಥಾನ ಪಡೆಯಿತು. 

ಭಾರತ ಪರ ಜ್ಯೋತಿ ಛತ್ರಿ (20ನೇ ನಿಮಿಷ) ಮತ್ತು ರುತುಜಾ ದಾದಾಸೊ ಪಿಸಾಲ್ (23ನೇ ನಿಮಿಷ) ಗೋಲು ಗಳಿಸಿದರು.

ನೆದರ್ಲೆಂಡ್ಸ್‌ ಪರ ಜನ್ನೆಕೆ ವಾನ್ ಡಿ ವೆನ್ನ (2, 14ನೇ ನಿಮಿಷ), ಬೆಂಟೆ ವಾನ್ ಡೆರ್ ವೆಲ್ಟ್‌ (4,8ನೇ ನಿಮಿಷ) ಮತ್ತು ಲಾನಾ ಕಾಲ್ಸೆ (11 ಮತ್ತು 27ನೇ ನಿಮಿಷ)  ಹಾಗೂ ಸೋಶಾ ಬೆನ್ನಿಂಗಾ (13 ನೇ ನಿಮಿಷ) ಗೋಲು ಗಳಿಸಿದರು.  

ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಾಕಿ ಇಂಡಿಯಾ ಪ್ರತಿ ಆಟಗಾರ್ತಿಗೆ ₹3 ಲಕ್ಷ,  ಸಹಾಯಕ ಸಿಬ್ಬಂದಿಗೆ ತಲಾ ₹1.5 ಲಕ್ಷ ನಗದು ಬಹುಮಾನ ಘೋಷಿಸಿದೆ.

ಆರಂಭದಲ್ಲಿ ಉಭಯ ತಂಡಗಳು ಗೋಲು ಗಳಿಸುವ ಅವಕಾಶಕ್ಕಾಗಿ ಹೋರಾಡಿದವು. ಆದರೆ,ನೆದರ್ಲೆಂಡ್ಸ್‌ಗೆ ಉತ್ತಮ ಆರಂಭ ಕಂಡುಕೊಳ್ಳಲು ಹೆಚ್ಚು ಸಮಯವಾಗಲಿಲ್ಲ.

ನೆದರ್ಲೆಂಡ್ಸ್‌ನ ಜನ್ನೆಕೆ ಅವರು ಭಾರತದ ಗೋಲ್ ಕೀಪರ್ ರಜನಿ ಅವರನ್ನು ತಪ್ಪಿಸಿ ಚೆಂಡನ್ನು ಗುರಿ ಸೇರಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಬೆಂಟೆ ವಾನ್ ಅವರು ಭಾರತದ ರಕ್ಷಣೆ ಕೋಟೆ ಭೇದಿಸಿ,  ಎರಡು ಗೋಲು ಗಳಿಸುವ ಮೂಲಕ ತಂಡದ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿದರು.  

ಮೊದಲಾರ್ಧ ಮುಗಿಯಲು ನಾಲ್ಕು ನಿಮಿಷಗಳು ಬಾಕಿ ಇರುವಾಗ ಲಾನಾ ಕಾಲ್ಸೆ ಗೋಲು ಬಾರಿಸಿ ನೆದರ್ಲೆಂಡ್ಸ್ ಪರ 4-0 ಮುನ್ನಡೆ ಸಾಧಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ಸೋಶಾ ಅವರು ಗೋಲು ಗಳಿಸಿ, ‌ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಿದರು.

ದ್ವಿತೀಯಾರ್ಧದಲ್ಲೂ ಡಚ್‌ ಆಟಗಾರ್ತಿಯರ ಪ್ರಾಬಲ್ಯ ಮುಂದುವರಿಯಿತು. ಪಂದ್ಯದ ಕೊನೆ ನಿಮಿಷದಲ್ಲಿ ಡಚ್‌ರಿಗೆ ಪೆನಾಲ್ಟಿ ಅವಕಾಶ ದೊರೆಯಿತು. ರಜನಿ ಚೆಂಡು ಗುರಿ ಸೇರುವುದನ್ನು ತಡೆದರು. ಅಷ್ಟರಲ್ಲಿ ಎದುರಾಳಿ ತಂಡ ಗೆಲುವಿನ ದಡ ಸೇರಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT