ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಓಪನ್ ಟೆನಿಸ್: ಎರಡನೇ ಸುತ್ತಿಗೆ ರಿಬಾಕಿನಾ

Published 29 ಮೇ 2024, 0:05 IST
Last Updated 29 ಮೇ 2024, 0:05 IST
ಅಕ್ಷರ ಗಾತ್ರ

ಪ್ಯಾರಿಸ್: ಕಜಕಸ್ತಾನದ ಭರವಸೆಯ ಆಟಗಾರ್ತಿ ಎಲಿನಾ ರಿಬಾಕಿನಾ ಹಾಗೂ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರು ರೋಲ್ಯಾಂಡ್ ಗ್ಯಾರೊಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆ ಹಾಗೂ ಪುರುಷರ ವಿಭಾಗಗಳ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರು. 

ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ನಲ್ಲಿ ಎಲಿನಾ 6–2, 6–3 ರಿಂದ ಬೆಲ್ಜಿಯಂನ ಗ್ರೀಟ್ ಮಿನೆನ್ ವಿರುದ್ಧ ಜಯಿಸಿದರು. 73 ನಿಮಿಷ ನಡೆದ ಹಣಾಹಣಿಯಲ್ಲಿ ವಿಂಬಲ್ಡನ್ ಮಾಜಿ ಚಾಂಪಿಯನ್ ಎಲಿನಾ ಮೇಲುಗೈ ಸಾಧಿಸಿದರು.  

‘ಟೂರ್ನಿಯಲ್ಲಿ ಮರಳಿ ಬಂದು ಸ್ಪರ್ಧಿಸುತ್ತಿರುವುದು ಸಂತಸ ತಂದಿದೆ’ ಎಂದು ರಿಬಾಕಿನಾ ಪಂದ್ಯದ ನಂತರ ಹೇಳಿದರು. ಹೋದ ಸಲ ಅವರು ಅನಾರೋಗ್ಯ ದಿಂದಾಗಿ ಮೂರನೇ ಸುತ್ತಿನಿಂದ ಹಿಂದೆ ಸರಿದಿದ್ದರು. 

ಅವರು ಇಲ್ಲಿ ಎರಡನೇ ಸುತ್ತಿನಲ್ಲಿ ಏಂಜಲಿಕಾ ಕೆರ್ಬರ್ ಅಥವಾ ಅರಾಂತಾ ರೂಸ್ ಅವರನ್ನು ಎದುರಿಸಲಿದ್ದಾರೆ. 

ಪುರುಷರ ಸಿಂಗಲ್ಸ್‌ನಲ್ಲಿ ಮೆಡ್ವೆಡೆವ್ 6–3, 6–4, 5–7, 6–3ರಿಂದ ಜರ್ಮನಿಯ ಡಾಮ್ನಿಕ್ ಕೊಫೆರ್ ವಿರುದ್ಧ ಜಯಿಸಿದರು. ಮೊದಲೆರಡು ಸೆಟ್‌ಗಳಲ್ಲಿ ಸುಲಭವಾಗಿ ಮೇಲುಗೈ ಸಾಧಿಸಿದ ರಷ್ಯನ್ ಆಟಗಾರ ಮೂರನೇಯದ್ದರಲ್ಲಿ ಪ್ರತಿರೋಧ ಎದುರಿಸಬೇಕಾಯಿತು. 30 ವರ್ಷದ ಡಾಮ್ನಿಕ್ ತಿರುಗೇಟು ನೀಡಿದರು. ಮೆಡ್ವೆಡೆವ್ ಕೆಲವು ಲೋಪಗಳನ್ನು ಎಸಗಿದ್ದು ಕೂಡ ಡಾಮ್ನಿಕ್ ಅವರಿಗೆ ಅನುಕೂಲಕರವಾದವು. 

ಆದರೆ ನಂತರದ ಸೆಟ್‌ನಲ್ಲಿ ಡಾಮ್ನಿಕ್ ಅವರ ಪ್ರಯತ್ನಗಳನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾದ ಮೆಡ್ವೆಡೆವ್ ಗೆಲುವು ಸಾಧಿಸಿದರು. 

ಪುರುಷರ ವಿಭಾಗದ ಇನ್ನೊಂದು ಪಂದ್ಯದಲ್ಲಿ ಇಟಲಿಯ ಫ್ಯಾಬಿಯೊ ಫಾಗ್ನಿನಿ ಜಯ ಸಾಧಿಸಿದರು. ಅವರು 6–1, 6–1, 7–5ರಿಂದ ನೆದರ್ಲೆಂಡ್ಸ್‌ನ ಬಾಟಿಕ್ ವ್ಯಾನ್ ಡೆ ಝೆಂಡ್ಸ್‌ಕ್ಲಪ್‌ ವಿರುದ್ಧ ಜಯಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದರು. ಬುಧವಾರ ಅವರು ಅಮೆರಿಕದ ಟಾಮಿ ಪಾಲ್ ವಿರುದ್ಧ ಆಡುವರು. 

ಕಾರ್ನೆಟ್ ದಾಖಲೆ; ವಿದಾಯ: ಫ್ರಾನ್ಸ್‌ನ ಅಲೀಜ್ ಕಾರ್ನೆಟ್ ಸತತ 69ನೇ ಗ್ರ್ಯಾನ್‌ಸ್ಲಾಮ್‌ ಟೂರ್ನಿ ಆಡಿದ ದಾಖಲೆ ಮಾಡಿದರು. ತಮ್ಮ ತವರಿನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋಲುವುದರೊಂದಿಗೆ ವೃತ್ತಿಪರ ಟೆನಿಸ್‌ಗೆ ವಿದಾಯ ಘೋಷಿಸಿದರು.

ಮಂಗಳವಾರ ನಡೆದ ಮೊದಲ ಸುತ್ತಿನಲ್ಲಿ ಚೀನಾದ ಕಿನ್ವೆನ್ ಝೆಂಗ್ 6–2, 6–1ರಿಂದ 34 ವರ್ಷದ ಕಾರ್ನೆಟ್ ವಿರುದ್ಧ ಜಯಿಸಿದರು. 

ಕಾರ್ನೆಟ್ ಅವರು ತಮ್ಮ 15ನೇ ವಯಸ್ಸಿನಲ್ಲಿಯೇ ರೋಲ್ಯಾಂಡ್ ಗ್ಯಾರೊಸ್ ಮೂಲಕ ಗ್ರ್ಯಾನ್‌ಸ್ಲ್ಯಾಮ್ ಟೆನಿಸ್ ಪದಾರ್ಪಣೆ ಮಾಡಿದ್ದರು. 2006ರ ಅಮೆರಿಕ ಓಪನ್ ಟೆನಿಸ್‌ನಲ್ಲಿ ಆಡಿದ್ದ ಅವರು ಅಲ್ಲಿಂದ ಇಲ್ಲಿಯವ ರೆಗೆ ಯಾವುದೇ ಟೂರ್ನಿಯನ್ನೂ ತಪ್ಪಿಸಿಕೊಂಡಿರಲಿಲ್ಲ. 

2009ರಲ್ಲಿ ಅವರು 11ನೇ ರ‍್ಯಾಂಕಿಂಗ್‌ ಗಳಿಸಿದ್ದರು. 2022ರಲ್ಲಿ ಅವರು ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದರು. 

25ನೇ ಕಿರೀಟದತ್ತ ಜೊಕೊವಿಚ್‌ ಚಿತ್ತ

ಪ್ಯಾರಿಸ್‌ (ಎಎಫ್‌ಪಿ): ದಾಖಲೆಯ 25ನೇ ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿಯನ್ನು ಎದುರು ನೋಡುತ್ತಿರುವ ವಿಶ್ವದ ಅಗ್ರಮಾನ್ಯ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌ ಫ್ರೆಂಚ್‌ ಓಪನ್‌ನಲ್ಲಿ ಫ್ರಾನ್ಸ್‌ನ ಪಿಯರೆ ಹ್ಯೂಸ್‌ ಹರ್ಬರ್ಟ್‌ ವಿರುದ್ಧ ಅಭಿಯಾನ ಆರಂಭಿಸುವರು.

24 ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸರ್ಬಿಯಾದ 37 ವರ್ಷ ವಯಸ್ಸಿನ ಜೊಕೊವಿಚ್‌, ಇಲ್ಲಿ ಮೂರು ಬಾರಿ (2016, 2021, 2023) ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಈ ವರ್ಷ ಯಾವುದೇ ಪ್ರಮುಖ ಪ್ರಶಸ್ತಿ ಗೆದ್ದುಕೊಂಡಿಲ್ಲ. ಈ ಟೂರ್ನಿಯ ಮೂಲಕ ಮತ್ತೆ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ವಿಶ್ವದ 142ನೇ ಕ್ರಮಾಂಕದ ಹರ್ಬರ್ಟ್‌ ಅವರನ್ನು ಎದುರಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT