ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಮಳೆಗೆ ಎದಿರೇಟು ನೀಡಿದ ಕ್ರೀಡಾಪಟುಗಳು

ಹೊರಗೆ ಜಿಟಿಜಿಟಿ ಮಳೆ, ಮೈದಾನದಲ್ಲಿ ಗೋಲುಗಳ ಸುರಿಮಳೆ
Published 5 ಜನವರಿ 2024, 4:45 IST
Last Updated 5 ಜನವರಿ 2024, 4:45 IST
ಅಕ್ಷರ ಗಾತ್ರ

ಮಡಿಕೇರಿ: ಒಂದೆಡೆ ಜಿನುಗುತ್ತಿದ್ದ ಜಿಟಿಜಿಟಿ ಮಳೆ, ಮತ್ತೊಂದೆಡೆ ಬೀಸುತ್ತಿದ್ದ ಮೈನಡುಗಿಸುವ ಶೀತಗಾಳಿ, ಆವರಿಸಿದ್ದ ದಟ್ಟ ಮಂಜು. ಇಷ್ಟಾದರೂ, ಕ್ರೀಡಾಪಟುಗಳು ಮೈದಾನದಲ್ಲಿ ಗೋಲುಗಳ ಸುರಿಮಳೆಗರೆದರು.

ಈ ದೃಶ್ಯಗಳು ಮಡಿಕೇರಿ, ಪೊನ್ನಂಪೇಟೆ, ಸೋಮವಾರಪೇಟೆ ಹಾಗೂ ಕೂಡಿಗೆಯಲ್ಲಿ ಗುರುವಾರ ನಡೆದ 63ನೇ ರಾಷ್ಟ್ರಮಟ್ಟದ ಬಾಲಕಿಯರ (ಶಾಲೆಗಳ) ಹಾಕಿ ಟೂರ್ನಿಯಲ್ಲಿ ಕಂಡು ಬಂತು.

ಕರ್ನಾಟಕ ತಂಡ ಆರಂಭಿಕ ಪಂದ್ಯದಲ್ಲೇ ಮಹಾರಾಷ್ಟ್ರದ ವಿರುದ್ಧ 1–0 ಅಂತರದಲ್ಲಿ ಗೆಲುವಿನ ನಗೆ ಬೀರಿತು. ಇನ್ನುಳಿದ ರಾಜ್ಯಗಳ ತಂಡಗಳ ಆಟಗಾರರು ಮೈದಾನಗಳಲ್ಲಿ ಗೋಲುಗಳನ್ನು ಬಾರಿಸುತ್ತ ಅಬ್ಬರಿಸಿದರು.

ಒಂದೇ ದಿನ ಆಡಿದ 2 ಪಂದ್ಯಗಳಲ್ಲಿ ಉತ್ತರಪ್ರದೇಶ ತಂಡವು 23 ಗೋಲುಗಳನ್ನು ದಾಖಲಿಸುವ ಮೂಲಕ ಅತ್ಯಧಿಕ ಗೋಲುಗಳನ್ನು ದಾಖಲಿಸಿತು. ಅಂಕಪಟ್ಟಿಯಲ್ಲಿ ಉತ್ತರಪ್ರದೇಶ, ಹಿಮಾಚಲಪ್ರದೇಶ, ಕೇರಳ, ಛತ್ತೀಸಘಡ ಹಾಗೂ ಪಂಜಾಬ್ ತಂಡಗಳು ತಲಾ 6 ಅಂಕಗಳನ್ನು ಪಡೆಯುವ ಮೂಲಕ ಮೊದಲ ದಿನದಲ್ಲಿ ಅಗ್ರಸ್ಥಾನ ಪಡೆದವು.

ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಕಿ ಮೈದಾನದಲ್ಲಿ ಒಟ್ಟು 7 ಪಂದ್ಯಗಳು ನಡೆದವು. ‘ಬಿ’ ಗುಂಪಿನಲ್ಲಿರುವ ಕರ್ನಾಟಕ ತಂಡವು ಮಹಾರಾಷ್ಟ್ರವನ್ನು 1–0 ಅಂತರದಿಂದ ಮಣಿಸಿದರೆ, ಮಹಾರಾಷ್ಟ್ರ ಕೇಂದ್ರೀಯ ವಿದ್ಯಾಲಯವನ್ನು 1–0 ಅಂತರದಿಂದ ಮಣಿಸಿತು. ಹೀಗಾಗಿ, ಕರ್ನಾಟಕ ಮತ್ತು ಮಹಾರಾಷ್ಟ್ರಗಳು ತಲಾ 3 ಅಂಕಗಳನ್ನು ಪಡೆದವು. ಕೇಂದ್ರೀಯ ವಿದ್ಯಾಲಯ ಯಾವುದೇ ಅಂಕ ಪಡೆಯಲಾಗಲಿಲ್ಲ.

ಇಲ್ಲಿ ನಡೆದ ‘ಜಿ’ ಗುಂಪಿನ ಪಂದ್ಯಾವಳಿಯಲ್ಲಿ ಛತ್ತೀಸ್‌ಗಡವು ನವೋದಯ ವಿದ್ಯಾಲಯ ತಂಡವನ್ನು 17–0 ಬೃಹತ್ ಅಂತರದಿಂದ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಛತ್ತೀಸ್‌ಗಡವು ಪುದುಚೇರಿ ತಂಡವನ್ನು 5–0 ಅಂತರದಿಂದ ಮಣಿಸಿ, 6 ಅಂಕಗಳನ್ನು ಗಳಿಸಿತು. ಇದೇ ಗುಂಪಿನಲ್ಲಿರುವ ಪಂಜಾಬ್ ತಂಡವು ನವೋದಯ ವಿದ್ಯಾಲಯ ತಂಡವನ್ನು 12–0 ಅಂತರದಿಂದ ಹಾಗೂ ಪುದುಚೇರಿ ತಂಡವನ್ನು 5–0 ಅಂತರದಿಂದ ಮಣಿಸಿ, 6 ಅಂಕಗಳನ್ನು ಪಡೆದುಕೊಂಡಿತು. 

ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ಗುರುವಾರ ನಡೆದ ಬಾಲಕಿಯರ ರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ ಹರ್ಯಾಣ ಮತ್ತು ಪಶ್ಚಿಮ ಬಂಗಾಳ ತಂಡಗಳು ಸೆಣೆಸಾಡಿದವು
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ಗುರುವಾರ ನಡೆದ ಬಾಲಕಿಯರ ರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ ಹರ್ಯಾಣ ಮತ್ತು ಪಶ್ಚಿಮ ಬಂಗಾಳ ತಂಡಗಳು ಸೆಣೆಸಾಡಿದವು

ಸೋಮವಾರಪೇಟೆ; ಗೋಲುಗಳ ಸುರಿಮಳೆಗರೆದ ಉತ್ತರಪ್ರದೇಶ

ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ನೂತನ ಟರ್ಫ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯಗಳಲ್ಲಿ ಮಳೆಯ ನಡುವೆಯೂ ವಿವಿಧ ತಂಡಗಳು ಭರ್ಜರಿ ಪ್ರದರ್ಶನ ತೋರಿದವು. ಉತ್ತರ ಪ್ರದೇಶ ತಂಡವು ಆಡಿದ ಎರಡೂ ಪಂದ್ಯಗಳಿಂದ 23 ಗೋಲು ಗಳಿಸಿ ಪಾರಮ್ಯ ಮೆರೆಯಿತು.

ತೆಲಂಗಾಣ ತಂಡವನ್ನು 8-0 ಯಿಂದ ಹಾಗೂ ವಿದ್ಯಾಭಾರತಿ ತಂಡವನ್ನು 15-0 ಅಂತರದಿಂದ ಮಣಿಸಿ 6 ಅಂಕಗಳನ್ನು ತನ್ನದಾಗಿಸಿಕೊಂಡಿತು. ಹಿಮಾಚಲಪ್ರದೇಶ ತಂಡವು ತೆಲಂಗಾಣ ತಂಡವನ್ನು 2-0ಯಿಂದ ಹಾಗೂ ಮಥುರಾದ ವಿದ್ಯಾಭಾರತಿ ತಂಡವನ್ನು 12-0 ಗೋಲುಗಳಿಂದ ಜಯಭೇರಿ ಬಾರಿಸಿತು. ಈ ತಂಡವೂ 6 ಅಂಕಗಳನ್ನು ಪಡೆದು ಪಾರಮ್ಯ ಮೆರೆಯಿತು.

ಚಂಡೀಗಡ ತಂಡವು ಉತ್ತರಾಖಂಡ ತಂಡವನ್ನು 5-0 ಅಂತರದಿಂದ ಹಾಗೂ ಮಧ್ಯಪ್ರದೇಶ ತಂಡವು ಉತ್ತರಾಖಂಡ ತಂಡವನ್ನು 4-0 ಗೋಲುಗಳಿಂದ ಸೋಲಿಸಿ ತಲಾ 3 ಅಂಕಗಳನ್ನು ಪಡೆದವು. ಆಡಿದ ಎಲ್ಲ ಪಂದ್ಯಗಳಲ್ಲೂ ಸೋತ ವಿದ್ಯಾಭಾರತಿ ಹಾಗೂ ಉತ್ತರಾಖಂಡ ತಂಡಗಳು ಯಾವುದೇ ಅಂಕ ಪಡೆಯಲಾಗದೇ ನಿರಾಸೆ ಅನುಭವಿಸಿದವು. ಇಲ್ಲಿ ನಡೆದ ಎಲ್ಲ ಪಂದ್ಯಗಳಲ್ಲೂ ಸೋತ ಯಾವುದೇ ತಂಡವೂ ಒಂದು ಗೋಲನ್ನೂ ಗಳಿಸಲು ಶಕ್ತವಾಗದೇ ಇದ್ದದ್ದು ವಿಶೇಷ ಎನಿಸಿತು. ಶುಕ್ರವಾರ ಬೆಳಿಗ್ಗೆ 7 ರಿಂದ ಚಂಡೀಗಡ ಮತ್ತು ಮಧ್ಯಪ್ರದೇಶ 8-30ಕ್ಕೆ ತೆಲಂಗಾಣ ಮತ್ತು ಮಥುರಾದ ವಿದ್ಯಾಭಾರತಿ ಹಾಗೂ 10ಕ್ಕೆ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ.

ಕೂಡಿಗೆಯಲ್ಲಿ ಪಾರಮ್ಯ ಮೆರೆದ ಕೇರಳ

ಕುಶಾಲನಗರ: ಇಲ್ಲಿನ ಕೂಡಿಗೆಯ ಸರ್ಕಾರಿ ಕ್ರೀಡಾಶಾಲಾ ಟರ್ಫ್ ಮೈದಾನದಲ್ಲಿ ಗುರುವಾರ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಹಾನಿಗಳ ನಡುವೆ ನಡೆದ ಹಾಕಿ ಟೂರ್ನಿಯಲ್ಲಿ ಕೇರಳ ತಂಡ 6 ಅಂಕ ಗಳಿಸುವ ಮೂಲಕ ಪಾರಮ್ಯ ಮೆರೆಯಿತು.

ಕೇರಳವು ಗುಜರಾತ್ ತಂಡವನ್ನು 2 –1ರಿಂದ ಬಿಹಾರ ತಂಡವನ್ನು 1-0 ಅಂತರದಿಂದ ಮಣಿಸಿತು. ಜಾರ್ಖಾಂಡ ತಂಡವು ರಾಜಸ್ಥಾನ ತಂಡವನ್ನು 5–0ಯಿಂದ ಸೋಲಿಸಿದರೆ ಬಿಹಾರ ತಂಡವು 2–1 ಅಂತರದಿಂದ ಆಂಧ್ರಪ್ರದೇಶ ತಂಡವನ್ನು ಮಣಿಸಿದರೆ ಗುಜರಾತ್ ತಂಡವು ಆಂಧ್ರಪ್ರದೇಶ ತಂಡವನ್ನು 3–0 ಅಂತರದಿಂದ ಮಣಿಸಿ ತಲಾ 3 ಅಂಕಗಳನ್ನು ಪಡೆದವು. 

ಆಂಧ್ರಪ್ರದೇಶ ಮತ್ತು ಗುಜರಾತ್ ತಂಡಗಳು ಯಾವುದೇ ಗೆಲುವು ಸಾಧಿಸಲಾಗದೆ ನಿರಾಸೆ ಅನುಭವಿಸಿದವು. ಇಲ್ಲಿಗೆ ಬರಬೇಕಿದ್ದ ಜಮ್ಮು ಮತ್ತು ಕಾಶ್ಮೀರದ ತಂಡದ ಸದಸ್ಯರು ಪ್ರಯಾಣಿಸುತ್ತಿದ್ದ ರೈಲು ಹವಾಮಾನ ವೈಪರೀತ್ಯಕ್ಕೆ ಸಿಲುಕಿ ತಡವಾಗಿದ್ದರಿಂದ ಈ ತಂಡ ಯಾವುದೇ ಪಂದ್ಯಗಳನ್ನು ಆಡಲಾಗಲಿಲ್ಲ.

ಪೊನ್ನಂಪೇಟೆ: ಹರ್ಯಾಣ ತಂಡದಿಂದ ಗೋಲುಗಳ ಮಹಾಪೂರ

ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಹರ್ಯಾಣ ತಂಡ ಪಶ್ಚಿಮಬಂಗಾಳ ತಂಡವನ್ನು 15-0 ಗೋಲುಗಳ ಭಾರಿ ಅಂತರದಿಂದ ಮಣಿಸಿ 3 ಅಂಕಗಳನ್ನು ತನ್ನದಾಗಿಸಿಕೊಂಡಿತು.

ದೆಹಲಿ ತಂಡ ಪಶ್ಚಿಮಬಂಗಾಳ ತಂಡದ ವಿರುದ್ಧ 10-0 ಗೋಲುಗಳ ಅಂತರದಿಂದ ಹಾಗೂ ಒಡಿಸ್ಸಾ ತಂಡ ಮಣಿಪುರ ತಂಡದ ಎದುರು 1-0 ಗೋಲುಗಳಿಂದ ಗೆಲುವು ಸಾಧಿಸಿ ತಲಾ 3 ಅಂಕ ಗಳಿಸಿದವು. ಮಣಿಪುರ ಮತ್ತು ತಮಿಳುನಾಡು ತಂಡಗಳು ಯಾವುದೇ ಗೋಲು ಸಾಧಿಸದೇ ಸಮಬಲ ಸಾಧಿಸಿ ತಲಾ ಒಂದೊಂದು ಅಂಕಗಳನ್ನು ಪಡೆದವು.

ಪಶ್ಚಿಮ ಬಂಗಾಳ ತಂಡವು ಆಡಿದ ಎರಡೂ ಪಂದ್ಯಗಳಲ್ಲೂ ಸೋತು ನಿರಾಸೆ ಅನುಭವಿಸಿತು. ‍ಪೊನ್ನಂಪೇಟೆ ಸಬ್‌ಇನ್‌ಸ್ಪೆಕ್ಟರ್ ನವೀನ್ ಪಂದ್ಯಾವಳಿಯನ್ನು ಉದ್ಘಟಿಸಿದರು. ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ ಸಿಆರ್‌ಪಿ ತಿರುನೆಲ್ಲಿಮಾಡ ಜೀವನ್ ನಿಂಗರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT