ರೂರ್ಕೆಲಾ: ಒಡಿಶಾದಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಭಾನುವಾರ ನಡೆದ ಪಂದ್ಯವು ಗೋಲುರಹಿತ ಡ್ರಾದಲ್ಲಿ ಅಂತ್ಯಗೊಂಡಿದೆ.
'ಡಿ' ಗುಂಪಿನ ಎರಡನೇ ಪಂದ್ಯದಲ್ಲಿ ಭಾರತಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡದ ಸವಾಲು ಎದುರಾಗಿತ್ತು. ಆದರೆ ಚುರುಕಿನ ಪ್ರದರ್ಶನ ನೀಡಿದ ಹರ್ಮನ್ಪ್ರೀತ್ ಸಿಂಗ್ ಬಳಗವು ಎದುರಾಳಿ ತಂಡಕ್ಕೆ ನಿಕಟ ಪೈಪೋಟಿ ಒಡ್ಡುವಲ್ಲಿ ಯಶಸ್ವಿಯಾಯಿತು.
ಎರಡನೇ ಸ್ಥಾನದಲ್ಲಿ ಭಾರತ... ಇಂಗ್ಲೆಂಡ್ ವಿರುದ್ಧದ ಡ್ರಾ ಫಲಿತಾಂಶದೊಂದಿಗೆ ಸದ್ಯ ನಾಲ್ಕು ಅಂಕ ಹೊಂದಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಅಷ್ಟೇ ಅಂಕಗಳನ್ನು ಹೊಂದಿರುವ ಇಂಗ್ಲೆಂಡ್, ಗೋಲುಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ.
ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭಾರತ 2-0 ಗೋಲುಗಳ ಅಂತರದ ಗೆಲುವು ಸಾಧಿಸಿತ್ತು. ಜನವರಿ 19ರಂದು ಗುಂಪು ಹಂತದ ಕೊನೆಯ ಹಂತದಲ್ಲಿ ಭಾರತ ತಂಡವು ವೇಲ್ಸ್ ಸವಾಲನ್ನು ಎದುರಿಸಲಿದೆ.