ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್: ಸಿಂಗಲ್ಸ್‌ ಫೈನಲ್‌ಗೆ ಪ್ರಣಯ್

Published 5 ಆಗಸ್ಟ್ 2023, 23:30 IST
Last Updated 5 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಸಿಡ್ನಿ: ಭಾರತದ ಅಗ್ರಮಾನ್ಯ ಆಟಗಾರ ಎಚ್‌.ಎಸ್‌.ಪ್ರಣಯ್ ನೇರ ಆಟಗಳಿಂದ ಸ್ವದೇಶದ ಉದಯೋನ್ಮುಖ ಆಟಗಾರ ಪ್ರಿಯಾನ್ಷು ರಾಜಾವತ್ ಅವರನ್ನು ಸೋಲಿಸಿ ಆಸ್ಟ್ರೇಲಿಯಾ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು.

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ 31 ವರ್ಷದ ಪ್ರಣಯ್ 21–18, 21–12 ರಿಂದ 21 ವರ್ಷದ ರಾಜಾವತ್ ಅವರನ್ನು ಮಣಿಸಿದರು. ಪ್ರಬಲ ಮತ್ತು ಕರಾರುವಾಕ್ ಹೊಡೆತಗಳಿಂದ ಪ್ರಣಯ್ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಮಧ್ಯಪ್ರದೇಶದ ರಾಜಾವತ್ ಇದೇ ಮೊದಲ ಬಾರಿ ಸೂಪರ್‌ 500 ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದರು.

‘ಗೆಲುವು ತೃಪ್ತಿ ತಂದಿದೆ. ಸತತವಾಗಿ ವಿಶ್ವದ ಟಾಪ್‌ 10 ಆಟಗಾರರ ವಿರುದ್ಧ ಆಡುವುದು ಮತ್ತು ಅವರನ್ನು ಸೋಲಿಸುವುದು ತುಂಬ ತ್ರಾಸದಾಯಕ. ಇತ್ತೀಚಿನ ದಿನಗಳಲ್ಲಿ 30 ವರ್ಷದ ಮತ್ತು 40ರ ಸಮೀಪ ಇರುವ ಆಟಗಾರರೂ ತುಂಬಾ ಹೋರಾಟ ನೀಡುತ್ತಾರೆ’ ಎಂದು ಪ್ರಣಯ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ವಿಶ್ವ ಕ್ರಮಾಂಕದಲ್ಲಿ 9ನೇ ಸ್ಥಾನದಲ್ಲಿರುವ ಪ್ರಣಯ್, ಭಾನುವಾರ ನಡೆಯುವ ಫೈನಲ್‌ನಲ್ಲಿ ಚೀನಾದ ವೆಂಗ್‌ ಹಾಂಗ್‌ ಯಾಂಗ್ ಅವರನ್ನು ಎದುರಿಸಲಿದ್ದಾರೆ. ಶ್ರೇಯಾಂಕರಹಿತ ಆಟಗಾರ ವೆಂಗ್‌ ಇನ್ನೊಂದು ಸೆಮಿಫೈನಲ್‌ನಲ್ಲಿ ಮಲೇಷ್ಯಾದ ಲೀ ಝಿಯಾ ಜಿಯಾ ಅವರನ್ನು 21–19, 13–21, 21–13 ರಿಂದ ಸೋಲಿಸಿದರು.

ವಿಶೇಷ ಎಂದರೆ, ಮೇ ತಿಂಗಳಲ್ಲಿ ನಡೆದ ಮಲೇಷ್ಯಾ ಮಾಸ್ಟರ್ಸ್‌ ಫೈನಲ್‌ನಲ್ಲೂ ಪ್ರಣಯ್ ಅವರಿಗೆ 24ನೇ ಕ್ರಮಾಂಕದ ವೆಂಗ್‌ ಎದುರಾಳಿ ಆಗಿದ್ದರು. ಅಲ್ಲಿ ಪ್ರಣಯ್ ಎದುರಾಳಿಯನ್ನು ಸೋಲಿಸಿ ಆರು ವರ್ಷಗಳಲ್ಲಿ ಮೊದಲ ವೈಯಕ್ತಿಕ ಪ್ರಶಸ್ತಿ ಗೆದ್ದುಕೊಂಡಿದ್ದರು. ಇದು ಇವರಿಬ್ಬರ ನಡುವೆ ಎರಡನೇ ಮುಖಾಮುಖಿ.

‘ವೆಂಗ್ ತುಂಬಾ ಚಾಣಾಕ್ಷ ಆಟಗಾರ. ಅವರು ದೀರ್ಘ ಪಂದ್ಯಗಳಲ್ಲಿ ಆಡಬಲ್ಲರು. ಅವರು ಕಳೆದ ಆರು ತಿಂಗಳ ಅವಧಿಯಲ್ಲಿ ಘಟಾನುಘಟಿ ಆಟಗಾರರನ್ನು ಸೋಲಿಸಿದ್ದಾರೆ. ಹೀಗಾಗಿ ಫೈನಲ್ ಪಂದ್ಯ ಸುಲಭದ್ದಲ್ಲ. ಎಡಗೈ ಆಟಗಾರನಾಗಿರುವ ಕಾರಣ ಅನುಕೂಲವೂ ಇದೆ. ಆದರೆ ಫೈನಲ್ ಆಗಿರುವುದರಿಂದ ನಾನೂ ಪೂರ್ಣ ಸಾಮರ್ಥ್ಯ ಬಳಸುವೆ’ ಎಂದರು ಪ್ರಣಯ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT