ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಕುಸ್ತಿಗೆ ಮರಳುವುದಿಲ್ಲ: ಸಾಕ್ಷಿ ಮಲಿಕ್

Published 4 ಮಾರ್ಚ್ 2024, 19:30 IST
Last Updated 4 ಮಾರ್ಚ್ 2024, 19:30 IST
ಅಕ್ಷರ ಗಾತ್ರ

ನವದೆಹಲಿ: ಸ್ಪರ್ಧಾತ್ಮಕ ಕುಸ್ತಿಗೆ ಮರಳುವುದನ್ನು ತಳ್ಳಿ ಹಾಕಿರುವ ಒಲಿಂಪಿಕ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ದೀರ್ಘ ಕಾಲದ ಪ್ರತಿಭಟನೆಯು ತನ್ನನ್ನು ಮಾನಸಿಕವಾಗಿ ಹಿಂಸಿಸಿದೆ ಎಂದು ಹೇಳಿದ್ದಾರೆ.

ಶರಣ್ ಸಿಂಗ್ ಅವರ ನಿಕಟವರ್ತಿ ಸಂಜಯ್ ಸಿಂಗ್ ಅವರು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ 31 ವರ್ಷದ ಸಾಕ್ಷಿ ನಿವೃತ್ತಿ ಘೋಷಿಸಿದ್ದರು. ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿ ಸಾಕ್ಷಿ ಅವರೊಂದಿಗೆ ಒಲಿಂಪಿಕ್‌ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ, ವಿನೇಶಾ ಫೋಗಾಟ್‌ ಸಹ ಪ್ರತಿಭಟನೆ ನಡೆಸಿದ್ದರು. 

‘ಒಂದು ವರ್ಷಕ್ಕಿಂತ ಹೆಚ್ಚು ಸಮಯವಾಗಿದ್ದು, ತುಂಬಾ ಮಾನಸಿಕ ಒತ್ತಡವಿದೆ. ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಸಾಧ್ಯವಿರುವ ಎಲ್ಲ ರೀತಿಯ ಹೋರಾಟಕ್ಕೆ ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ನಾನು ಕುಸ್ತಿಯಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ’ ಎಂದು ಮಲಿಕ್ ಭಾರತದಲ್ಲಿ ಮಿ–ಟೂ ಚಳವಳಿಯ ಪರಿಣಾಮದ ಕುರಿತ ಪ್ಯಾನಲ್ ಚರ್ಚೆಯಲ್ಲಿ ಹೇಳಿದರು.

‘ನಾನು ಭಾರತಕ್ಕೆ (ಒಲಿಂಪಿಕ್) ಕಂಚಿನ ಪದಕ ಗೆದ್ದಿದ್ದೇನೆ. ನನ್ನ ಕಿರಿಯರು ಬೆಳ್ಳಿ ಮತ್ತು ಚಿನ್ನ ಗೆಲ್ಲಬೇಕೆಂದು ಬಯಸುತ್ತೇನೆ. ದೇಶದ ಪ್ರತಿಯೊಬ್ಬ ಹುಡುಗಿಯೂ ತನ್ನ ಕನಸುಗಳನ್ನು ಬೆನ್ನಟ್ಟುವುದನ್ನು ನೋಡಲು ಬಯಸುತ್ತೇನೆ’ ಎಂದು ಅವರು ತಿಳಿಸಿದರು. 

ಡಬ್ಲ್ಯುಎಫ್ಐ ಮುಖ್ಯಸ್ಥ ಸ್ಥಾನದಿಂದ ಶರಣ್ ಸಿಂಗ್ ಅವರನ್ನು ತೆಗೆದು ಹಾಕಿದ ನಂತರವೂ ಪ್ರತಿಭಟನೆ ಮುಂದುವರಿಸಿರುವ ಸಾಕ್ಷಿ, ‍ಪೂನಿಯಾ ಮತ್ತು ಫೋಗಾಟ್, ‘ಹೊಸ ಅಧ್ಯಕ್ಷರು ಕೇವಲ ಹೆಸರಿಗಷ್ಟೇ ಇದ್ದಾರೆ. ಎಲ್ಲವನ್ನೂ ಶರಣ್‌ ಸಿಂಗ್ ಅವರೇ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಸಾಕ್ಷಿ, ಒಲಿಂಪಿಕ್ ಅರ್ಹತಾ ಪಂದ್ಯಗಳಿಗಾಗಿ ನಡೆಯಲಿರುವ ರಾಷ್ಟ್ರೀಯ ಟ್ರಯಲ್ಸ್‌ನಿಂದಲೂ ಹೊರಗುಳಿಯಲಿದ್ದಾರೆ. ಸಂಜಯ್ ಸಿಂಗ್ ನೇತೃತ್ವದ ಡಬ್ಲ್ಯುಎಫ್ಐ ಆಯೋಜಿಸುವ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಪುನಿಯಾ ಈಗಾಗಲೇ ಹಿಂದೆ ಸರಿದಿದ್ದಾರೆ.

ಪ್ರತಿಭಟನಾನಿರತ ಕುಸ್ತಿಪಟುಗಳನ್ನು ಎಲ್ಲಾ ಟ್ರಯಲ್ಸ್‌ಗೆ ಆಹ್ವಾನಿಸಲಾಗುವುದು ಮತ್ತು ಯಾವುದೇ ತಾರತಮ್ಯ ಇರುವುದಿಲ್ಲ ಎಂಬ ಷರತ್ತಿನ ಮೇಲೆ ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು) ಇತ್ತೀಚೆಗೆ ಡಬ್ಲ್ಯುಎಫ್ಐ ಮೇಲಿನ ತಾತ್ಕಾಲಿಕ ನಿಷೇಧವನ್ನು ತೆಗೆದುಹಾಕಿತ್ತು. 

‘ಅನೇಕರು ಕುಸ್ತಿಯಲ್ಲಿ ಮುಂದುವರಿಯಲು ಹೇಳಿದ್ದಾರೆ. ಆದರೆ, ಬ್ರಿಜ್‌ ಭೂಷಣ್ ಅವರಂತಹ ಜನರ ನಡುವೆ ಕುಸ್ತಿ ಮಾಡಲು ನಾನು ಬಯಸುವುದಿಲ್ಲ. ಅವರು ಮುಕ್ತವಾಗಿ ಓಡಾಡುವುದನ್ನು ನೋಡಿದಾಗ ಬೇಸರವಾಗುತ್ತದೆ. ಅವರು ಇನ್ನೂ ಫೆಡರೇಷನ್‌ಅನ್ನು  ನಿಯಂತ್ರಿಸುತ್ತಿದ್ದಾರೆ ಎಂದು ಅನಿಸುತ್ತದೆ’ ಎಂದು ಸಾಕ್ಷಿ ಹೇಳಿದರು.

‘ನಾನು ವೈಯಕ್ತಿಕವಾಗಿ ಕಿರುಕುಳ ಅನುಭವಿಸಿದ್ದೇನೆ. ಕುಸ್ತಿಯನ್ನು ತ್ಯಜಿಸಿದ್ದೇನೆ. ಆದರೆ, ನಮ್ಮ ಆಂದೋಲನವು ಬ್ರಿಜ್ ಭೂಷಣ್ ಅವರಂತಹ ಜನರನ್ನು ಹೊರಹಾಕುತ್ತದೆ ಎಂದು ಯುವಜನರು ಆಶಿಸುತ್ತಿದ್ದಾರೆ. ನಮ್ಮಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದ್ದೇವೆ. ಕುಸ್ತಿ ಆಡಳಿತದಲ್ಲಿ ಬ್ರಿಜ್‌ ಭೂಷಣ್ ಅವರಿಗೆ ಸಂಬಂಧಿಸಿದ ಜನರಿಗೆ ಅವಕಾಶ ನೀಡದಂತೆ ನೋಡಿಕೊಳ್ಳುವಂತೆ  ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ಸಕಾರಾತ್ಮಕ ಫಲಿತಾಂಶವನ್ನು ಆಶಿಸುತ್ತೇನೆ’ ಎಂದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT