ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನಿಯರ್‌ ವಿಶ್ವಕಪ್‌ ಹಾಕಿ ಸೆಮಿಫೈನಲ್‌ | ಭಾರತಕ್ಕೆ ನಿರಾಶೆ: ಫೈನಲ್‌ಗೆ ಜರ್ಮನಿ

Published 14 ಡಿಸೆಂಬರ್ 2023, 14:16 IST
Last Updated 14 ಡಿಸೆಂಬರ್ 2023, 14:16 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಸತತವಾಗಿ ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದ ಭಾರತ ತಂಡವು ಇಲ್ಲಿ ಗುರುವಾರ ನಡೆದ ಎಫ್‌ಐಎಚ್‌ ಪುರುಷರ ಜೂನಿಯರ್‌ ವಿಶ್ವಕಪ್‌ ಹಾಕಿ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ 1–4 ರಿಂದ ಜರ್ಮನಿಗೆ ಮಣಿಯಿತು. ಈ ಮೂಲಕ ನಾಲ್ಕನೇ ಬಾರಿ ಫೈನಲ್‌ಗೆ ಏರುವ ಭಾರತದ ಕನಸು ಕಮರಿತು.

ಆರು ಬಾರಿಯ ಚಾಂಪಿಯನ್ ಜರ್ಮನಿ ಇಡೀ ಪಂದ್ಯದಲ್ಲಿ ಕೇವಲ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆಯಿತು. ಎರಡೂ ಬಾರಿಯೂ ಚೆಂಡನ್ನು ಗುರಿ ಸೇರಿಸಿತು. ಆದರೆ, ಭಾರತದ ಆಟಗಾರರಿಗೆ   12 ಪೆನಾಲ್ಟಿ ಕಾರ್ನರ್‌ ಅವಕಾಶಗಳು ಅರಸಿ ಬಂದರೂ, ಅವುಗಳನ್ನು ಗೋಲುಗಳನ್ನಾಗಿ ಪರಿವರ್ತಿಸುವಲ್ಲಿ ಎಡವಿತು.

ಪಂದ್ಯ ಆರಂಭವಾದ ಎಂಟನೇ ನಿಮಿಷದಲ್ಲೇ ಬೆನ್ ಹ್ಯಾಸ್ಬಾಚ್ ಜರ್ಮನಿಗೆ ಆರಂಭಿಕ ಮುನ್ನಡೆ ಒದಗಿಸಿದರು. ಅದಾದ ಮೂರು ನಿಮಿಷಕ್ಕೆ ಸುದೀಪ್ ಚಿರ್ಮಾಕೊ (11ನೇ ನಿ) ಭಾರತದ ಪರ ಗೋಲು ಗಳಿಸಿ ಸಮಬಲ ಸಾಧಿಸಿದರು. ಆದರೆ, ಎರಡನೇ ಕ್ವಾರ್ಟರ್‌ನ ಕೊನೆಗೆ ಪೆನಾಲ್ಟಿ ಕಾರ್ನರ್‌ನಲ್ಲಿ ಬೆನ್ (30ನೇ) ಮತ್ತೊಮ್ಮೆ ಚೆಂಡನ್ನು ಗುರಿ ಸೇರಿಸಿ, ಮಧ್ಯಂತರದ ವೇಳೆಗೆ ಜರ್ಮನಿಗೆ 2–1 ಮುನ್ನಡೆ ತಂದಿತ್ತರು. ನಂತರದಲ್ಲಿ ಗ್ಲಾಂಡರ್ ಪಾಲ್ (41ನೇ) ಮತ್ತು ಲೋರಿಯನ್ ಸ್ಪೆರ್ಲಿಂಗ್ (58ನೇ) ಗೋಲು ಗಳಿಸಿ ಜರ್ಮನಿಯ ಗೆಲುವಿನ ಅಂತರವನ್ನು ಹೆಚ್ಚಿಸಿದರು. 

ಮಂಗಳವಾರ ನಡೆದಿದ್ದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅದ್ಭುತ ಆಟದ ಮೂಲಕ 4–3 ರಿಂದ ವಿಶ್ವದ ನಾಲ್ಕನೇ ರ‍್ಯಾಂಕ್‌ನ ನೆದರ್ಲೆಂಡ್ಸ್‌ ತಂಡವನ್ನು ಮಣಿಸಿದ್ದ ಉತ್ತಮ್‌ ಸಿಂಗ್‌ ಪಡೆ ನಾಲ್ಕರ ಘಟ್ಟದಲ್ಲಿ ನಿರಾಶೆ ಅನುಭವಿಸಿತು.

ಭಾರತ ಜೂನಿಯರ್ ಪುರುಷರ ತಂಡ ಈ ವರ್ಷ ಜರ್ಮನಿಯೊಂದಿಗೆ ಐದು ಬಾರಿ ಮುಖಾಮುಖಿಯಾಗಿದ್ದು, ಎಲ್ಲಾ ಪಂದ್ಯಗಳಲ್ಲಿಯೂ ಭಾರತ ಸೋತಿದೆ. ಭುವನೇಶ್ವರದಲ್ಲಿ ನಡೆದಿದ್ದ 2021ರ ಆವೃತ್ತಿಯ ಸೆಮಿಫೈನಲ್‌ನಲ್ಲೂ ಭಾರತವು 2–4ರಿಂದ ಜರ್ಮನಿಗೆ ಮಣಿದಿತ್ತು.

ಕಳೆದ ಆವೃತ್ತಿಯ ರನ್ನರ್ ಅಪ್ ಜರ್ಮನಿ ತಂಡವು, ಮತ್ತೊಂದು ಸೆಮಿಫೈನಲ್‌ನಲ್ಲಿ ವಿಜೇತರಾಗುವ (ಫ್ರಾನ್ಸ್– ಸ್ಪೇನ್) ತಂಡವನ್ನು ಫೈನಲ್‌ನಲ್ಲಿ ಎದುರಿಸಲಿದೆ. ಭಾರತವು ಶನಿವಾರ ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸಲಿದೆ.

ಟೂರ್ನಿಯಲ್ಲಿ ಭಾರತವು 2001, 2016ರಲ್ಲಿ ಚಾಂಪಿಯನ್‌ ಆಗಿದ್ದರೆ, 1997ರಲ್ಲಿ ರನ್ನರ್‌ ಅಪ್‌ ಸ್ಥಾನ ಆಗಿತ್ತು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT