ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ಫೈನಲ್‌ಗೆ ಭಾರತದ ಮಹಿಳೆಯರು

ಊಬರ್‌ ಕಪ್‌ ಬ್ಯಾಡ್ಮಿಂಟನ್ ಟೂರ್ನಿ: ಸ್ಕಾಟ್ಲೆಂಡ್‌ ಎದುರು ಜಯಭೇರಿ
Last Updated 12 ಅಕ್ಟೋಬರ್ 2021, 12:20 IST
ಅಕ್ಷರ ಗಾತ್ರ

ಆಹಸ್‌, ಡೆನ್ಮಾರ್ಕ್‌: ಅದ್ಭುತ ಸಾಮರ್ಥ್ಯ ಮುಂದುವರಿಸಿದ ಭಾರತದ ಮಹಿಳೆಯರು ಊಬರ್ ಕಪ್ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಅದಿತಿ ಭಟ್‌ ಹಾಗೂ ತಸ್ನಿಮ್‌ ಮೀರ್ ಸಿಂಗಲ್ಸ್ ವಿಭಾಗಗಳಲ್ಲಿ ಮಿಂಚಿದ ಪಂದ್ಯದಲ್ಲಿ ತಂಡವು 4–1ರಿಂದ ಸ್ಕಾಟ್ಲೆಂಡ್‌ ಎದುರು ಜಯ ಗಳಿಸಿತು.

ಆಡಿದ ಎರಡೂ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿರುವ ಭಾರತ ತಂಡವು ಸದ್ಯ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ತಂಡವು ಭಾನುವಾರ ಸ್ಪೇನ್ ತಂಡವನ್ನು 3–2ರಿಂದ ಪರಾಭವಗೊಳಿಸಿತ್ತು.

ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಭಾರತಕ್ಕೆ ಸೋಲಿನ ಆಘಾತ ಕಾದಿತ್ತು. ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮರ್‌ ವಿರುದ್ಧ ಕಣಕ್ಕಿಳಿದಿದ್ದ ಮಾಳವಿಕಾ ಬಾನ್ಸೋದ್‌ 13–21, 9–21ರಿಂದ ನಿರಾಸೆ ಅನುಭವಿಸಿದರು. ಆದರೆ ಅದಿತಿ ಭಟ್‌ 21–14, 21–18ರಿಂದ ರಚೆಲ್‌ ಸುಗ್ದೆನ್‌ ಎದುರು ಗೆಲ್ಲುವ ಮೂಲಕ ಪಂದ್ಯ 1–1ರಿಂದ ಸಮಬಲಗೊಳ್ಳುವಂತೆ ಮಾಡಿದರು.

ಈ ಹಂತದಲ್ಲಿ ಆಟ ರಂಗೇರಿತು. ಡಬಲ್ಸ್ ವಿಭಾಗದ ಸುತ್ತಿನಲ್ಲಿ ಭಾರತದ ತನಿಶಾ ಕ್ರಾಸ್ಟೊ–ಋತುಪರ್ಣಾ ಪಂಡಾ 21-11 21-8ರಿಂದ ಜೂಲಿ ಮಾಚಪೆರ್ಸನ್‌ ಮತ್ತು ಸಿಯಾರಾ ಟೊರೆನ್ಸ್ ಅವರನ್ನು ಮಣಿಸುವ ಮೂಲಕ ಮುನ್ನಡೆ ದೊರಕಿಸಿಕೊಟ್ಟರು.

ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ತಸ್ನಿಮ್‌ 21-15 21-6ರಿಂದ ಲಾರೆನ್‌ ಮಿಡ್ಲ್‌ಟನ್‌ ವಿರುದ್ಧ ಗೆಲ್ಲುವುದರೊಂದಿಗೆ ಭಾರತದ ಮುನ್ನಡೆ 3–1ಕ್ಕೆ ತಲುಪಿತು.

ರಿವರ್ಸ್‌ ಡಬಲ್ಸ್‌ನಲ್ಲಿ ಯುವ ಆಟಗಾರ್ತಿಯರಾದ ತ್ರೀಶಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್‌ 21-8 19-21 21-10ರಿಂದ ಗಿಲ್ಮರ್‌ ಮತ್ತು ಎಲೆನಾರ್ ಓ‘ಡೊನೆಲ್‌ ಅವರಿಗೆ ಸೋಲುಣಿಸಿ ಭಾರತದ ಭರ್ಜರಿ ಜಯಕ್ಕೆ ಕಾಣಿಕೆ ನೀಡಿದರು.

ಮುಂದಿನ ಪಂದ್ಯದಲ್ಲಿ ಭಾರತಕ್ಕೆ ಬಲಿಷ್ಠ ಥಾಯ್ಲೆಂಡ್‌ ಸವಾಲು ಎದುರಾಗಿದೆ. ಬುಧವಾರ ಈ ಪಂದ್ಯ ನಿಗದಿಯಾಗಿದೆ.

ಟೂರ್ನಿಯ ಇತಿಹಾಸದಲ್ಲಿ ಭಾರತವು ಇದುವರೆಗೆ ಎರಡು ಬಾರಿ ಸೆಮಿಫೈನಲ್‌ (2014ರಲ್ಲಿ ನವದೆಹಲಿ ಮತ್ತು 2016ರಲ್ಲಿ ಚೀನಾದ ಕುನ್ಶನ್‌) ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT