ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಏಷ್ಯನ್‌ ಕ್ರೀಡಾಕೂಟಕ್ಕೆ ತೆರೆ: ಭಾರತದ ಐತಿಹಾಸಿಕ ಸಾಧನೆ

ಪದಕಗಳ ಶತಕ ಸಂಭ್ರಮ
Published 28 ಅಕ್ಟೋಬರ್ 2023, 16:34 IST
Last Updated 28 ಅಕ್ಟೋಬರ್ 2023, 16:34 IST
ಅಕ್ಷರ ಗಾತ್ರ

ಹಾಂಗ್‌ಝೌ: ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕಗಳ ಶತಕ ಸಾಧನೆ ಮಾಡಿದ್ದ ಭಾರತವು, ಪ್ಯಾರಾ ಏಷ್ಯನ್‌ ಕೂಟದಲ್ಲೂ ಮೂರಂಕಿಯ ಗಡಿದಾಟಿ ಐತಿಹಾಸಿಕ ಸಾಧನೆ ಮಾಡಿತು.

ಹಾಂಗ್‌ಝೌನಲ್ಲಿ ಶನಿವಾರ ಕೊನೆಗೊಂಡ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಒಟ್ಟು 111 ಪದಕಗಳನ್ನು ಗೆದ್ದುಕೊಂಡರು. ಸೆ.23 ರಿಂದ ಅ.8ರ ವರೆಗೆ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ 107 ಪದಕಗಳನ್ನು ಜಯಿಸಿತ್ತು.

ಪದಕ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿರುವುದು ಪ್ಯಾರಾ ಏಷ್ಯನ್‌ ಕೂಟದಲ್ಲಿ ಭಾರತದ ಅತ್ಯುತ್ತಮ ಸಾಧನೆ ಎನಿಸಿಕೊಂಡಿತು. ಮೊದಲ ಪ್ಯಾರಾ ಏಷ್ಯನ್ ಕ್ರೀಡಾಕೂಟ 2010ರಲ್ಲಿ ಚೀನಾದ ಗುವಾಂಗ್‌ಝೌನಲ್ಲಿ ನಡೆದಿತ್ತು. ಅಲ್ಲಿ ಭಾರತವು ಒಂದು ಚಿನ್ನ ಸೇರಿದಂತೆ 14 ಪದಕಗಳೊಂದಿಗೆ 15ನೇ ಸ್ಥಾನವನ್ನು ಗಳಿಸಿತ್ತು. 2014ರಲ್ಲೂ 15ನೇ ಸ್ಥಾನ ಪಡೆದಿತ್ತು. 2018ರ ಆವೃತ್ತಿಯಲ್ಲಿ 72 ಪದಕಗಳನ್ನು ಗೆದ್ದುಕೊಂಡು 9ನೇ ಸ್ಥಾನಕ್ಕೆ ಏರಿತ್ತು.

‘ನಾವು ಹೊಸ ಇತಿಹಾಸ ರಚಿಸಿದ್ದೇವೆ. ನಮ್ಮ ಪ್ಯಾರಾ ಅಥ್ಲೀಟ್‌ಗಳು ದೇಶಕ್ಕೆ ಹೆಮ್ಮೆ ತಂದಿತ್ತಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳಿಗಿಂತ ಹೆಚ್ಚಿನ ಪದಕಗಳನ್ನು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದು ಭಾರತ ಪ್ಯಾರಾಲಿಂಪಿಕ್‌ ಸಮಿತಿ ಅಧ್ಯಕ್ಷೆ ದೀಪಾ ಮಲಿಕ್ ಹೇಳಿದ್ದಾರೆ.

‘ಹಾಂಗ್‌ಝೌನಲ್ಲಿ ತೋರಿದ ಸಾಧನೆಯು ಅಚ್ಚರಿ ಉಂಟುಮಾಡಿಲ್ಲ. ಏಕೆಂದರೆ 110 –115 ಪದಕಗಳನ್ನು ಗೆಲ್ಲುವ ವಿಶ್ವಾಸವಿತ್ತು. 111 ಪದಕ ಜಯಿಸುವಲ್ಲಿ ಯಶಸ್ವಿಯಾದೆವು’ ಎಂದರು.

2018ಕ್ಕೆ ಹೋಲಿಸಿದರೆ, ಭಾರತ ಈ ಬಾರಿ 39 ಪದಕಗಳನ್ನು ಹೆಚ್ಚು ಗೆದ್ದಿದೆ. ಅಥ್ಲೆಟಿಕ್ಸ್‌ನಲ್ಲಿ 55 ಪದಕಗಳು ಬಂದಿವೆ. ಟ್ರ್ಯಾಕ್‌ ಮತ್ತು ಫೀಲ್ಡ್‌ನ ವಿವಿಧ ಸ್ಪರ್ಧೆಗಳಲ್ಲಿ 18 ಚಿನ್ನ, 17 ಬೆಳ್ಳಿ ಮತ್ತು 20 ಕಂಚು ಲಭಿಸಿವೆ.

ಬ್ಯಾಡ್ಮಿಂಟನ್‌ನಲ್ಲಿ ನಾಲ್ಕು ಚಿನ್ನ ಒಳಗೊಂಡಂತೆ 21 ಪದಕಗಳನ್ನು ಗೆದ್ದಿದೆ. ಚೆಸ್‌ ಮತ್ತು ಆರ್ಚರಿಯಲ್ಲಿ ಕ್ರಮವಾಗಿ ಎಂಟು ಹಾಗೂ ಏಳು ಪದಕಗಳನ್ನು ಭಾರತ ಜಯಿಸಿದೆ.

ಕೊನೆಯ ದಿನವಾದ ಶನಿವಾರ ಭಾರತದ ಕ್ರೀಡಾಪಟುಗಳು ನಾಲ್ಕು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದುಕೊಂಡರು. ನೀರಜ್‌ ಯಾದವ್‌ ಅವರು ಪುರುಷರ ಎಫ್‌55 ವಿಭಾಗದ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಚಿನ್ನ ತಮ್ಮದಾಗಿಸಿಕೊಂಡರು. ಅವರು 33.69 ಮೀ. ಸಾಧನೆ ಮಾಡಿದರು. 39 ವರ್ಷದ ನೀರಜ್‌ 2018ರ ಕೂಟದಲ್ಲೂ ಚಿನ್ನ ಜಯಿಸಿದ್ದರು.

ದಿಲೀಪ್‌ ಮಹದೂ ಗಾವಿತ್‌ ಅವರು ಪುರುಷರ ಟಿ47 ವಿಭಾಗದ 400 ಮೀ. ಓಟದ ಸ್ಪರ್ಧೆಯಲ್ಲಿ 49.48 ಸೆ.ಗಳೊಂದಿಗೆ ಅಗ್ರಸ್ಥಾನ ಪಡೆದರು. ಪೂಜಾ ಅವರು ಮಹಿಳೆಯರ 1,500 ಮೀ. ಓಟದಲ್ಲಿ (ಟಿ20 ವಿಭಾಗ) ಕಂಚು ಜಯಿಸಿದರು.

ಕಿಶನ್‌, ವೃತಿಗೆ ಕಂಚು: ಚೆಸ್‌ನಲ್ಲಿ ಕರ್ನಾಟಕದ ಕಿಶನ್‌ ಗಂಗೊಳ್ಳಿ ಅವರು ಪುರುಷರ ರ್‍ಯಾಪಿಡ್‌ ಸ್ಪರ್ಧೆಯ ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ವೃತಿ ಜೈನ್‌ ಅವರು ಮಹಿಳೆಯರ ತಂಡ ವಿಭಾಗದಲ್ಲಿ ಕಂಚು ಪಡೆದರು.

ಈ ಬಾರಿ 22 ಕ್ರೀಡೆಗಳಲ್ಲಿ 17 ರಲ್ಲಿ ಭಾರತವು ಕ್ರೀಡಾಪಟುಗಳನ್ನು ಕಣಕ್ಕಿಳಿಸಿತ್ತು. 43 ದೇಶಗಳ 4,000 ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT