ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌: ಭಾರತ ಮಿಕ್ಸೆಡ್‌ ತಂಡಕ್ಕೆ ಚಿನ್ನ

Published 18 ಆಗಸ್ಟ್ 2023, 16:11 IST
Last Updated 18 ಆಗಸ್ಟ್ 2023, 16:11 IST
ಅಕ್ಷರ ಗಾತ್ರ

ಬಾಕು: ಶೂಟರ್‌ಗಳಾದ ಇಶಾ ಸಿಂಗ್ ಮತ್ತು ಶಿವ ನರ್ವಾಲ್‌ ಅವರು ಭಾರತದ ಪಾಳೆಯದಲ್ಲಿ ಕೊನೆಗೂ ಸಂಭ್ರಮ ಮೂಡಿಸಿದರು. ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಶುಕ್ರವಾರ ಇವರಿಬ್ಬರು 10 ಮೀ. ಏರ್‌ ಪಿಸ್ತೂಲ್‌ ಮಿಕ್ಸೆಡ್‌ ಟೀಮ್‌ ವಿಭಾಗದಲ್ಲಿ ಟರ್ಕಿಯ ಎದುರಾಳಿಗಳನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡರು.

ಇಶಾ– ಶಿವ ಜೋಡಿ ಫೈನಲ್‌ನಲ್ಲಿ 16–10 ರಿಂದ ಟರ್ಕಿಯ ಜೋಡಿ ಇಲ್ಯಾದ ತರ್ಹಾನ್ ಮತ್ತು ಯೂಸುಫ್‌ ಡಿಕೆಕ್ ಅವರನ್ನು ಸೋಲಿಸಿತು. ಭಾರತ ಇದರೊಂದಿಗೆ ಈ ಕೂಟದಲ್ಲಿ ಎರಡನೇ ಪದಕ ಗಳಿಸಿದಂತಾಯಿತು. ಗುರುವಾರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಪುರಷರ ತಂಡ ಕಂಚಿನ ಪದಕ ಗಳಿಸಿತ್ತು.

ಚೀನಾ ತಂಡ ಐದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗಳಿಸಿ ಎಲ್ಲರಿಗಿಂತ ಮೇಲಿದೆ.

ಕ್ವಾಲಿಫಿಕೇಷನ್‌ ಸುತ್ತಿನಲ್ಲಿ ಇಶಾ 290 ಮತ್ತು ನರ್ವಾಲ್‌ 293 ಪಾಯಿಂಟ್ಸ್‌ ಗಳಿಸಿ ಒಟ್ಟು 538 ಪಾಯಿಂಟ್ಸ್‌ ಕಲೆಹಾಕಿದ್ದು ಮೊದಲ ಸ್ಥಾನ ಗಳಿಸಿತ್ತು. ಟರ್ಕಿ(581) ಎರಡನೇ ಸ್ಥಾನ ಪಡೆದಿತ್ತು. ಚೀನಾ ಮತ್ತು ಇರಾನ್‌ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದ್ದವು.

ಆದರೆ ರೈಫಲ್‌ ಶೂಟಿಂಗ್‌ ವಿಭಾಗದಲ್ಲಿ ಭಾರತದ ಪ್ರದರ್ಶನ ಕಳಪೆಯಾಗಿತ್ತು. ಮಹಿಳೆಯರ ಸ್ಕೀಟ್‌ ವಿಭಾಗದಲ್ಲಿ ಭಾರತ ತಂಡ ನಾಲ್ಕನೇ ಸ್ಥಾನ ಪಡೆಯಿತು. ಅಮೆರಿಕ ಇಲ್ಲಿ ಚಿನ್ನದ ಪದಕ ಪಡೆದರೆ, ಇಟಲಿ ಬೆಳ್ಳಿಯ ಪದಕ ಕೊರಳಿಗೇರಿಸಿಕೊಂಡಿತು.

ನೀರಸ ಸಾಧನೆ

ಭಾರತದ ರೈಫಲ್‌ ಶೂಟರ್‌ಗಳು 10 ಮೀ. ಏರ್‌ ರೈಫಲ್‌ ಮಿಕ್ಸೆಡ್‌ ತಂಡ ವಿಭಾಗದಲ್ಲಿ ಅರ್ಹತಾ ಹಂತವನ್ನು ದಾಟಲು ವಿಫಲರಾದರು. ಮೆಹುಲಿ ಘೋಷ್‌ (316.0) ಮತ್ತು ಐಶ್ವರಿ ಪ್ರತಾಪ್‌ ಸಿಂಗ್ ತೊಮಾರ್ (314.2) ಅವರು 630.2 ಪಾಯಿಂಟ್‌ಗಳೊಂದಿಗೆ ಅರ್ಹತಾ ಸುತ್ತಿನಲ್ಲಿ 9ನೇ ಸ್ಥಾನ ಪಡೆದರು. ರಮಿತಾ ಮತ್ತು ದಿವ್ಯಾಂಶ್‌ ಸಿಂಗ್‌ ಪನ್ವರ್‌ ಅವರನ್ನು ಒಳಗೊಂಡ ಇನ್ನೊಂದು ತಂಡ 628.3 ಪಾಯಿಂಟ್‌ಗಳೊಂದಿಗೆ 17ನೇ ಸ್ಥಾನ ಗಳಿಸಿತು.

ಒಟ್ಟು 77 ತಂಡಗಳು ಕಣದಲ್ಲಿದ್ದವು. ಮೊದಲ ನಾಲ್ಕು ಸ್ಥಾನ ಪಡೆದ ಚೀನಾ, ಇರಾನ್‌, ಇಸ್ರೇಲ್‌ ಮತ್ತು ಫ್ರಾನ್ಸ್‌ ತಂಡಗಳು ಫೈನಲ್‌ಗೇರಿದವು. ಚೀನಾ ತಂಡ 16–2 ಅಂತರದಿಂದ ಇರಾನ್ ತಂಡವನ್ನು ಸೋಲಿಸಿ ಸ್ವರ್ಣ ಗೆದ್ದುಕೊಂಡಿತು. ಫ್ರಾನ್ಸ್‌ 17–9 ರಿಂದ ಇಸ್ರೇಲ್‌ ಮೇಲೆ ಜಯಗಳಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT