ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತ ಜೂನಿಯರ್ ತಂಡದ ಶುಭಾರಂಭ

ಯುರೋಪ್ ಪ್ರವಾಸ: ಬೆಲ್ಜಿಯಂ ವಿರುದ್ಧ ಜಯ
Published 21 ಮೇ 2024, 13:24 IST
Last Updated 21 ಮೇ 2024, 13:24 IST
ಅಕ್ಷರ ಗಾತ್ರ

ಆ್ಯಂಟ್‌ವರ್ಪ್‌ (ಪಿಟಿಐ): ಭಾರತ ಜೂನಿಯರ್ ಪುರುಷರ ಹಾಕಿ ತಂಡ, ಯುರೋಪ್‌ ಪ್ರವಾಸದ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಬೆಲ್ಜಿಯಂ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4–2 ಗೋಲುಗಳಿಂದ ಸೋಲಿಸಿ ಶುಭಾರಂಭ ಮಾಡಿತು. ಈ ರೋಚಕ ಪಂದ್ಯದ ನಿಗದಿ ಅವಧಿಯ ಆಟ 2–2 ಗೋಲುಗಳಿಂದ ಸಮನಾಗಿತ್ತು.

ಸೋಮವಾರ ನಡೆದ ಪಂದ್ಯದಲ್ಲಿ ಭಾರತ ತಂಡದ ಎರಡೂ ಗೋಲುಗಳನ್ನು ಉಪ ನಾಯಕ ಶಾರ್ದಾನಂದ ತಿವಾರಿ 3 ಮತ್ತು 27ನೇ ನಿಮಿಷ ಗಳಿಸಿದರು. ಪೆನಾಲ್ಟಿ ಸ್ಟ್ರೋಕ್‌ ಮೂಲಕ ಭಾರತ ತಂಡ ಪಂದ್ಯದ ಆರಂಭದಲ್ಲೇ ಮುನ್ನಡೆ ಸಾಧಿಸಿತಲ್ಲದೇ ಮೊದಲ ಕ್ವಾರ್ಟರ್‌ವರೆಗೆ ಆ ಲೀಡ್‌ ಉಳಿಸಿಕೊಂಡಿತು. ಎರಡನೇ ಕ್ವಾರ್ಟರ್‌ನಲ್ಲಿ ತಿವಾರಿ ಭಾರತದ ಮುನ್ನಡೆಯನ್ನು ಹೆಚ್ಚಿಸಿದರು. ಈ ಗೋಲು ಕೂಡ ಪೆನಾಲ್ಟಿ ಸ್ಟ್ರೋಕ್‌ ಮೂಲಕವೇ ಬಂದಿತು.

ಬೆಲ್ಜಿಯಂ ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಗಳಿಸಿ ಹಿನ್ನಡೆಯನ್ನು (1–2) ತಗ್ಗಿಸಿತು. ನಾಲ್ಕನೇ ಕ್ವಾರ್ಟರ್‌ನಲ್ಲಿ ಆತಿಥೇಯರು ಭಾರತ ತಂಡದ ಮೇಲೆ ಒತ್ತಡ ಮುಂದುವರಿಸಿದರು. ಪಂದ್ಯ ಮುಗಿಯಲು ಐದು ನಿಮಿಷಗಳಿರುವಂತೆ ಬೆಲ್ಜಿಯಂ ತಂಡ ಮತ್ತೊಂದು ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಸ್ಕೋರ್ ಸಮ ಮಾಡಿಕೊಂಡಿತು.

ಉಳಿದ ಅಲ್ಪ ಅವಧಿಯಲ್ಲಿ ಗೋಲುಗಳು ಬರದ ಕಾರಣ ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ ಮೂಲಕ ಇತ್ಯರ್ಥಗೊಳಿಸಲಾಯಿತು. ಗುರ್ಜೋತ್ ಸಿಂಗ್, ಸೌರಬ್‌ ಆನಂದ್ ಕುಶ್ವಾಹ, ದಿಲ್ರಾಜ್ ಸಿಂಗ್‌ ಮತ್ತು ಮನ್ಮೀತ್‌ ಸಿಂಗ್ ಚೆಂಡನ್ನು ಗುರಿಮುಟ್ಟಿಸಿದರು. ಭಾರತದ ಗೋಲ್ ಕೀಪರ್ ಪ್ರಿನ್ಸ್‌ ದೀಪ್‌ ಸಿಂಗ್ ಎದುರಾಳಿ ತಂಡದ ಆಟಗಾರರ ಎರಡು ಯತ್ನಗಳನ್ನು ಅಮೋಘವಾಗಿ ತಡೆದು ಭಾರತ ಶುಭಾರಂಭ ಮಾಡಲು ನೆರವಾದರು.

ಭಾರತ ತನ್ನ ಮುಂದಿನ ಪಂದ್ಯವನ್ನು ನೆದರ್ಲೆಂಡ್ಸ್‌ನ ಬ್ರಿಡಾದಲ್ಲಿ ಬುಧವಾರ ಬೆಲ್ಜಿಯಂ ವಿರುದ್ಧವೇ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT