ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ | ಭಾರತದ ಸೋಲು ತಪ್ಪಿಸಿದ ನವನೀತ್

Published 27 ಜುಲೈ 2023, 14:01 IST
Last Updated 27 ಜುಲೈ 2023, 14:01 IST
ಅಕ್ಷರ ಗಾತ್ರ

ನವದೆಹಲಿ: ನವನೀತ್ ಕೌರ್ ಗಳಿಸಿದ ಎರಡು ಗೋಲುಗಳ ಬಲದಿಂದ ಭಾರತ ತಂಡವು ಗುರುವಾರ ಇಲ್ಲಿ ನಡೆದ ಸ್ಪಾನಿಷ್ ಹಾಕಿ ಫೆಡರೇಷನ್ ಶತಮಾನೋತ್ಸವ ಅಂತರರಾಷ್ಟ್ರೀಯ ಹಾಕಿ ಟೂರ್ನಿಯ ಪಂದ್ಯದಲ್ಲಿ ಸ್ಪೇನ್ ಎದುರು ಡ್ರಾ ಸಾಧಿಸಿತು.

ಸ್ಪೇನ್‌ ತಂಡದ ಝೆಂಟಲ್ ಗೈನ್ (13ನೇ ನಿಮಿಷ) ಮತ್ತು ಲೈಯಾ ವಿಡೊಸಾ (26ನೇ ನಿಮಿಷ) ಗೋಲು ಗಳಿಸಿದರು. ಭಾರತದ ನವನೀತ್ 14ನೇ ಮತ್ತು 29ನೇ ನಿಮಿಷದಲ್ಲಿ ಗೋಲು ಹೊಡೆದರು. ಇದರಿಂದಾಗಿ ಉಭಯ ತಂಡಗಳು ಸಮಬಲ ಸಾಧಿಸಿದವು.

ತವರಿನಂಗಳದ ಲಾಭ ಪಡೆದ ಸ್ಪೇನ್ ತಂಡವು ಆರಂಭದಿಂದಲೇ ಆಕ್ರಮಣಕಾರಿ ಶೈಲಿಯಲ್ಲಿ ಆಡಿತು. ಭಾರತದ ರಕ್ಷಣಾ ಪಡೆಯ ಗೋಡೆಯನ್ನು ಮೀರುವ ಪ್ರಯತ್ನ ಮಾಡಿದರು. ಆರಂಭದಲ್ಲಿ  ಸ್ಪೇನ್‌ ಆಟಗಾರ್ತಿ ಮಾರ್ತಾ ಸೆಗು ಅವರು ವೃತ್ತದೊಳಗೆ ಚೆಂಡನ್ನು ಸಾಗಿಸಿದರು. ಅವರ ಗೋಲು ಗಳಿಸುವ ಪ್ರಯತ್ನಕ್ಕೆ ಗೋಲ್‌ಕೀಪರ್ ಸವಿತಾ ತಡೆಯೊಡ್ಡಿದರು.

ಮೊದಲ ಕ್ವಾರ್ಟರ್‌ ಸಮಾಪ್ತಿಗೆ ಸ್ವಲ್ಪ ಮುಂಚೆ ಎರಡೂ ತಂಡಗಳ ಆಟಗಾರ್ತಿಯರು ಗೋಲು ಗಳಿಸಲು ಧಾವಂತ ತೋರಿದರು. ಯಶಸ್ವಿಯಾದರು. ಮೊದಲು ಗೈನ್ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಅದಾಗಿ ಒಂದೇ ನಿಮಿಷದ ಅಂತರದಲ್ಲಿ ನವನೀತ್ ಕೌರ್ ನಿಖರ ಹೊಡೆತದ ಮೂಲಕ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ಭಾರತ ತಂಡವು ವೇಗದ ಆಟಕ್ಕೆ ಒತ್ತು ನೀಡಿತು. ಸ್ಪೇನ್ ರಕ್ಷಣಾ ತಂತ್ರವನ್ನು ಮುರಿಯಲು ಪ್ರಯತ್ನಿಸಿತು. ವೈಷ್ಣವಿ ಫಾಲ್ಕೆ ಅವರ ಡ್ರಿಬಲ್‌ ತಡೆಯುವಾಗ  ಸ್ಪೇನ್ ಆಟಗಾರ್ತಿಯರು ಲೋಪವೆಸಗಿದರು. ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತದ ಗೋಲು ಗಳಿಸುವ ಪ್ರಯತ್ನಕ್ಕೆ ಗೋಲ್‌ಕೀಪರ್ ಕ್ಲಾರಾ ಪೆರೇಜ್ ಅಡ್ಡಿಯಾದರು. ಪಂದ್ಯದಲ್ಲ ಒಟ್ಟು 30 ನಿಮಿಷ ದಾಟುವ ಮುನ್ನವೇ ಉಭಯ ತಂಡಗಳೂ ತಲಾ ಒಂದು ಗಳಿಸಿ ಸಮಬಲ ಸಾಧಿಸಿದವು.

ಕೊನೆಯ 15 ನಿಮಿಗಳು ಬಾಕಿಯಿದ್ದಾಗ ಗೆಲುವಿನ ಗೋಲು ಗಳಿಸಲು ಭಾರತ ತಂಡದವರು ಬಹಳಷ್ಟು ಪ್ರಯತ್ನ ನಡೆಸಿದರು. ಆದರೆ ಫಲ ಕೊಡಲಿಲ್ಲ.

ಭಾರತ ತಂಡವು ಶುಕ್ರವಾರ ಇಂಗ್ಲೆಂಡ್ ಎದುರು ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT