ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟೇಬಲ್ ಟೆನಿಸ್ ಟೀಮ್ ಸ್ಪರ್ಧೆ: ಭಾರತ ತಂಡಗಳು ನಾಕೌಟ್‌ ಹಂತಕ್ಕೆ

Published 20 ಫೆಬ್ರುವರಿ 2024, 15:19 IST
Last Updated 20 ಫೆಬ್ರುವರಿ 2024, 15:19 IST
ಅಕ್ಷರ ಗಾತ್ರ

ಬೂಸಾನ್: ಭಾರತ ಪುರುಷರ ಮತ್ತು ಮಹಿಳಾ ತಂಡಗಳು, ವಿಶ್ವ ಟೇಬಲ್ ಟೆನಿಸ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಗುಂಪಿನ ಪಂದ್ಯಗಳನ್ನು ವಿಭಿನ್ನ ಶೈಲಿಯಲ್ಲಿ ಗೆದ್ದು ಮಂಗಳವಾರ  ನಾಕೌಟ್‌ ಹಂತಕ್ಕೆ ಮುನ್ನಡೆದವು.

ಮಹಿಳಾ ತಂಡ ಆರಂಭಿಕ ಹಿನ್ನಡೆಯಿಂದ ಪುಟಿದೆದ್ದು 3–2 ರಿಂದ ಸ್ಪೇನ್ ತಂಡವನ್ನು ಸೋಲಿಸಿದರೆ, ಪುರುಷರ ತಂಡ ಹೆಚ್ಚಿನ ಪ್ರಯಾಸವಿಲ್ಲದೇ 3–0ಯಿಂದ ನ್ಯೂಜಿಲೆಂಡ್ ಮೇಲೆ ಜಯಗಳಿಸಿತು.

ನಾಲ್ಕು ಪಂದ್ಯಗಳಲ್ಲಿ ಮೂರು ಗೆದ್ದ ಭಾರತ ಮಹಿಳಾ ತಂಡ ಗುಂಪು ಒಂದರಲ್ಲಿ ಚೀನಾ ನಂತರ ಎರಡನೇ ಸ್ಥಾನ ಪಡೆಯಿತು. ಭಾರತ, ಚೀನಾಕ್ಕೆ ಸ್ವಲ್ಪದರಲ್ಲೇ ಸೋತಿತ್ತು.

ಶ್ರೀಜಾ ಅಕುಲಾ ಮತ್ತು ಮಣಿಕಾ ಬಾತ್ರಾ ಮೊದಲ ಎರಡು ಸಿಂಗಲ್ಸ್‌ನಲ್ಲಿ ಸೋತರೂ, ಭಾರತ ತಂಡ ಕೊನೆಗೂ ಉಳಿದ ಮೂರು ಪಂದ್ಯಗಳನ್ನು ಗೆದ್ದು ಸ್ಪೇನ್ ತಂಡವನ್ನು ಹಿಮ್ಮೆಟ್ಟಿಸಿತು.

ಮೊದಲ ಸಿಂಗಲ್ಸ್ ನಲ್ಲಿ ಶ್ರೀಜಾ 9-11, 11-9, 11-13, 4-11 ರಿಂದ ಮಾರಿಯಾ ಶಿಯಾವೊ ಅವರಿಗೆ ಸೋತರು. ಸೋಫಿಯಾ-ಕ್ಸುವಾನ್ ಜಾಂಗ್ 13-11, 6-11, 8-11, 11-9, 11-7 ರಿಂದ ಭಾರತದ ಅಗ್ರ ರ‍್ಯಾಂಕಿನ ಆಟಗಾರ್ತಿ ಮಣಿಕಾ ವಿರುದ್ಧ ಗೆದ್ದು ಸ್ಪೇನ್‌ಗೆ  2–0 ಮುನ್ನಡೆ ಒದಗಿಸಿದರು.

ಆದರೆ ಐಹಿಕಾ ಮುಖರ್ಜಿ ಮೂರನೇ ಸಿಂಗಲ್ಸ್‌ನಲ್ಲಿ 11–8, 11–13, 11–9, 9–11, 11–4ರಿಂದ ಎಲ್ವಿರಾ ರಾಡ್‌ ಮೇಲೆ ಗೆದ್ದು ಭಾರತದ ಹೋರಾಟಕ್ಕೆ ಜೀವತುಂಬಿದರು. ಮಣಿಕಾ ನಂತರ 11–9, 11–2, 11–4 ರಿಂದ ಮರಿಯಾ ಅವರಿಗೆ ಸೋಲುಣಿಸಿ ಪಂದ್ಯವನ್ನು 2–2 ಸಮಗೊಳಿಸಿದರು. ನಿರ್ಣಾಯಕ ಸಿಂಗಲ್ಸ್‌ನಲ್ಲಿ ಶ್ರೀಜಾ 11–6, 11–13, 11–6, 11–3 ರಿಂದ ಸೋಫಿಯಾ ಕ್ಸುವಾನ್ ಮೇಲೆ ಜಯಗಳಿಸಿದ್ದರಿಂದ ಭಾರತದ ಪಾಳೆಯದಲ್ಲಿ ಸಂಭ್ರಮ ಮೂಡಿತು.

ಪುರುಷರ ವಿಭಾಗದಲ್ಲಿ, ಹಾಲಿ ರಾಷ್ಟ್ರೀಯ ಚಾಂಪಿಯನ್ ಹರ್ಮಿತ್ ದೇಸಾಯಿ 11–5, 11–1, 11–6ರಲ್ಲಿ ನ್ಯೂಜಿಲೆಂಡ್‌ನ ಚೊಯ್ ತಿಮೋತಿ ಅವರನ್ನು ಸೋಲಿಸಿದರು. ಜಿ.ಸತ್ಯನ್ ಕೂಡ 11–3, 11–7, 11–6ರಲ್ಲಿ ಆಲ್ಫ್ರೆಡ್‌ ಪೆನಾ ಡೆಲಾ ಅವರನ್ನು ಸೋಲಿಸಲು ಕಷ್ಟಪಡಲಿಲ್ಲ.

ಮಾನುಷ್‌ ಶಾ ಹಿನ್ನಡೆಯಿಂದ ಚೇತರಿಸಿ ಮ್ಯಾಕ್ಸ್‌ವೆಲ್ ಹೆಂಡರ್ಸನ್ ಅವರನ್ನು 10–12, 6–11, 11–4, 11–8 ರಿಂದ ಸೋಲಿಸಿ, ಭಾರತದ ಗೆಲುವನ್ನು ಪೂರ್ಣಗೊಳಿಸಿದರು.

ಕಣದಲ್ಲಿದ್ದ 40 ತಂಡಗಳ ಪೈಕಿ ಭಾರತದ ತಂಡಗಳೂ ಸೇರಿ 24 ತಂಡಗಳು ನಾಕೌಟ್‌ಗೆ ಅರ್ಹತೆ ಪಡೆದವು. ಕ್ವಾರ್ಟರ್‌ಫೈನಲ್ ತಲುಪಿದರೂ, ಭಾರತ ತಂಡ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುತ್ತದೆ. ಇದಕ್ಕಾಗಿ 32ರ ಮತ್ತು16ರ ಸುತ್ತಿನ ಪಂದ್ಯಗಳನ್ನು ಭಾರತದ ತಂಡಗಳು ಗೆಲ್ಲಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT