ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡೊನೇಷ್ಯನ್‌ ಓಪನ್‌ ಸೂಪರ್‌ ಸೀರಿಸ್‌: ಪ್ರಧಾನ ಸುತ್ತಿಗೆ ಅಶ್ವಿನಿ–ಸುಮೀತ್‌

Published : 7 ಜೂನ್ 2022, 19:31 IST
ಫಾಲೋ ಮಾಡಿ
Comments

ಜಕಾರ್ತ: ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸುಮೀತ್ ರೆಡ್ಡಿ ಜೋಡಿ ಇಲ್ಲಿ ಆರಂಭವಾದ ಇಂಡೊನೇಷ್ಯನ್‌ ಓಪನ್‌ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದ ಪ್ರಧಾನ ಸುತ್ತು ಪ್ರವೇಶಿಸಿತು.

ಮಂಗಳವಾರ ನಡೆದ ಅರ್ಹತಾ ಹಂತದ ಪಂದ್ಯದಲ್ಲಿ ಭಾರತದ ಜೋಡಿ 17–21, 21–18, 21–14 ರಲ್ಲಿ ಜಪಾನ್‌ ಯುಜಿರೊ ನಿಶಿಕಾವ– ಸವೊರಿ ಒಜಾಕಿ ವಿರುದ್ಧ ಜಯ ಸಾಧಿಸಿತು. ಮೊದಲ ಗೇಮ್‌ನಲ್ಲಿ ಸೋತರೂ, ಪುಟಿದೆದ್ದು ನಿಂತ ಅಶ್ವಿನಿ– ಸುಮೀತ್‌ 50 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಇಂಡೊನೇಷ್ಯದ ಹಾಫಿಜ್ ಫೈಜಲ್‌– ಸೆರೆನಾ ಕನಿ ವಿರುದ್ದ ಪೈಪೋಟಿ ನಡೆಸುವರು.

ಆದರೆ ಅಶ್ವಿನಿ ಅವರು ಮಹಿಳೆಯರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದರು. ಅಶ್ವಿನಿ– ಸಿಕ್ಕಿ ರೆಡ್ಡಿ ಜೋಡಿ 18-21 9-21ರಲ್ಲಿ ಇಂಡೊನೇಷ್ಯದ ಮೆಲಿಸಾ ಪುಸ್ಪಿತಾ ಮತ್ತು ರಚೆಲ್ ಅಲೆಸ್ಯಾ ಕೈಯಲ್ಲಿ ಪರಾಭವಗೊಂಡಿತು.

ಆಕರ್ಷಿಗೆ ಜಯ: ಯುವ ಪ್ರತಿಭೆ ಆಕರ್ಷಿ ಕಶ್ಯಪ್‌ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಧಾನ ಸುತ್ತು ಪ್ರವೇಶಿಸಿದರು. ಅರ್ಹತಾ ಹಂತದ ಪಂದ್ಯದಲ್ಲಿ ಅವರು 13-21 21-9 21-9 ರಲ್ಲಿ ಥಾಯ್ಲೆಂಡ್‌ನ ಸಿರದ ರೂಂಗ್ಪಿಬೂನ್‌ಸೊಪಿತ್‌ ಅವರನ್ನು ಪರಾಭವಗೊಳಿಸಿದರು. ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಬೀವೆನ್‌ ಜಾಂಗ್‌ ಸವಾಲು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಶುಭಾಂಕರ್‌ ದೇ, ಪ್ರಧಾನ ಹಂತ ಪ್ರವೇಶಿಸಲು ವಿಫಲರಾದರು. ಅರ್ಹತಾ ಸುತ್ತಿನ ಪಂದ್ಯದಲ್ಲಿ ಅವರು 16-21 21-9 14-21 ರಲ್ಲಿ ಮಲೇಷ್ಯದ ಸೂಂಗ್ ಜೂ ವೆನ್‌ ಎದುರು ಸೋತರು. ಸಿಮ್ರಾನ್‌ ಸಿಂಘಿ ಮತ್ತು ರಿತಿಕಾ ಥಾಕರ್‌ ಅವರು ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ 10-21 11-21 ರಲ್ಲಿ ಕೊರಿಯದ ಲೀ ಸೊ ಹೀ– ಶಿನ್‌ ಸುಂಗ್‌ ಚಾನ್‌ ಎದುರು ಸೋಲು ಅನುಭವಿಸಿದರು.

ಪುರುಷರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಮನು ಅತ್ರಿ– ಸುಮೀತ್‌ ಜೋಡಿ 21-19 11-21 8-21 ರಲ್ಲಿ ಪ್ರಮುದ್ಯಾ ಕುಸುಮವರ್ದನ– ಯೆರೆಮಿಯಾ ಯಾಕೊಬ್‌ ಎದುರು ಪರಾಭವಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT