ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಎಚ್‌ ಜೂನಿಯರ್‌ ಪುರುಷರ ವಿಶ್ವಕಪ್‌ ಹಾಕಿ: ಭಾರತ– ಕೆನಡಾ ಹಣಾಹಣಿ ಇಂದು

ಎಫ್‌ಐಎಚ್‌ ಜೂನಿಯರ್‌ ಪುರುಷರ ವಿಶ್ವಕಪ್‌ ಹಾಕಿ
Published 9 ಡಿಸೆಂಬರ್ 2023, 9:26 IST
Last Updated 9 ಡಿಸೆಂಬರ್ 2023, 9:26 IST
ಅಕ್ಷರ ಗಾತ್ರ

ಕ್ವಾಲಾಲಂಪುರ (ಪಿಟಿಐ): ಭಾರತ ತಂಡವು ಶನಿವಾರ ಎಫ್‌ಐಎಚ್‌ ಜೂನಿಯರ್‌ ಪುರುಷರ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ.

‘ಸಿ’ ಗುಂಪಿನಲ್ಲಿರುವ ಭಾರತವು ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು 4–2ರಿಂದ ಸೋಲಿಸಿ ಶುಭಾರಂಭ ಮಾಡಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ 1–4ರಿಂದ ಪರಾಭವಗೊಂಡಿತ್ತು.

ಸ್ಪೇನ್‌ ತಂಡವು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು, ಆರು ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಮತ್ತು ದಕ್ಷಿಣ ಕೊರಿಯಾ ತಂಡ ತಲಾ ಮೂರು ಅಂಕ ಹೊಂದಿದ್ದರೆ, ಗೆಲುವಿನ ಖಾತೆ ತೆರೆಯಲು ಕೆನಡಾ ಕೊನೆಯ ಸ್ಥಾನದಲ್ಲಿದೆ.

ಗುರುವಾರ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಸಾಂಘಿಕ ಪ್ರದರ್ಶನ ನೀಡಿದ ಸ್ಪೇನ್‌ ತಂಡವು ಮೇಲುಗೈ ಸಾಧಿಸಿತು. ಎದುರಾಳಿ ತಂಡದ ಅಮೋಘ ತಂತ್ರಗಾರಿಕೆಯ ಆಟದೆದುರು ಉತ್ತಮ್‌ ಸಿಂಗ್‌ ಪಡೆಯ ಪ್ರಯತ್ನಗಳಿಗೆ ಯಶಸ್ಸು ಸಿಗಲಿಲ್ಲ.

ಸ್ಪೇನ್‌ನ ರಕ್ಷಣಾತ್ಮಕ ಆಟದಿಂದಾಗಿ ಭಾರತಕ್ಕೆ ಆರಂಭದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶವೇ ಲಭಿಸಲಿಲ್ಲ. ಪಂದ್ಯ ಆರಂಭವಾದ ಮೊದಲ ನಿಮಿಷದಲ್ಲಿಯೇ ಕ್ಯಾಬ್ರೆ ವರ್ಡಿಯೆಲ್ ಪೋಲ್ ಚೆಂಡನ್ನು ಗುರಿ ಸೇರಿಸಿ ಸ್ಪೇನ್‌ಗೆ ಮುನ್ನಡೆ ಒದಗಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ರಫಿ ಆಂಡ್ರಿಯಾಸ್ (18ನೇ) ಗೋಲು ಹೊಡೆದು ಮುನ್ನಡೆಯನ್ನು ಹೆಚ್ಚಿಸಿದರು.

33ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ರೋಹಿತ್‌ ಭಾರತದ ಹಿನ್ನಡೆಯನ್ನು ಕುಗ್ಗಿಸಿದರು. ಆದರೆ, ಕಾಬ್ರೆ (41ನೇ), ರಫಿ (60) ಮತ್ತೆ ತಲಾ ಒಂದು ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು. 55 ಮತ್ತು 57ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಭಾರತದ ಆಟಗಾರರು ವಿಫಲವಾದರು.

‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. ಹೀಗಾಗಿ, ಭಾರತಕ್ಕೆ ಕೆನಡಾ ವಿರುದ್ಧ ಗೆಲುವು ಅನಿವಾರ್ಯವಾಗಿದೆ.

ಮಹಿಳಾ ಹಾಕಿ ವಿಶ್ವಕಪ್‌:

ಭಾರತಕ್ಕೆ ಜಯ ಸ್ಯಾಂಟಿಯಾಗೊ ಚಿಲಿ (ಪಿಟಿಐ): ಇಲ್ಲಿ ನಡೆಯುತ್ತಿರುವ ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್‌ ಟೂರ್ನಿಯಲ್ಲಿ 9- 12ನೇ ಸ್ಥಾನಗಳ ನಿರ್ಣಯಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ 3-1ರಿಂದ ಕೊರಿಯಾವನ್ನು ಮಣಿಸಿತು. ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಪರ ರೋಪ್ನಿ ಕುಮಾರಿ (23ನೇ ನಿಮಿಷ) ಮುಮ್ತಾಜ್ ಖಾನ್ (44ನೇ) ಮತ್ತು ಅನ್ನು (46ನೇ) ಗೋಲು ಗಳಿಸಿದರೆ ಕೊರಿಯಾ ಪರ ಜಿಯುನ್ ಚೋಯ್ (19ನೇ) ಚೆಂಡನ್ನು ಗುರಿ ಸೇರಿಸಿದರು. ‘ಸಿ’ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದ ಭಾರತವು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ವಿಫಲವಾಗಿತ್ತು. ಶನಿವಾರ ನಡೆಯುವ ಪಂದ್ಯದಲ್ಲಿ (ಚಿಲಿ ಅಥವಾ ಅಮೆರಿಕಾ) ಗೆಲುವು ಸಾಧಿಸಿದರೆ ಭಾರತಕ್ಕೆ 9ನೇ ಸ್ಥಾನ ಲಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT