ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಚುವಲ್ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ

Last Updated 28 ಆಗಸ್ಟ್ 2020, 14:51 IST
ಅಕ್ಷರ ಗಾತ್ರ

ಬೆಂಗಳೂರು/ನವದೆಹಲಿ: ಮತ್ತೊಂದು ಬಾರಿ ಕ್ರೀಡಾ ದಿನಾಚರಣೆ ಬಂದಿದೆ. ಕೋವಿಡ್–19 ಹಾವಳಿಯಿಂದಾಗಿ ಇದೇ ಮೊದಲ ಬಾರಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ವರ್ಚುವಲ್ ಆಗಿ ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮ ಬೆಳಿಗ್ಗೆ 10.45ಕ್ಕೆ ಆರಂಭವಾಗಲಿದ್ದು ಪ್ರಶಸ್ತಿ ಪುರಸ್ಕೃತರು ಆನ್‌ಲೈನ್ ಮೂಲಕ ಗೌರವ ಸ್ವೀಕರಿಸಲಿದ್ದಾರೆ.

ಪ್ರತಿ ವರ್ಷ ರಾಷ್ಟ್ರಪತಿ ಭವನದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲರಿಗೂ ಅವರಿರುವ ಸ್ಥಳದಲ್ಲೇ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕರ್ನಾಟಕದ ಮೂವರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಶಸ್ತಿ ಸ್ವೀಕರಿಸುವ ಪ್ರಕ್ರಿಯೆಯ ಅಣಕು ಕಾರ್ಯಕ್ರಮ ಈಗಾಗಲೇ ನಡೆದಿದೆ.

ರಾಷ್ಟ್ರಪತಿ ರಾಮನಾಥ ಕೊವಿಂದ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ತಮ್ಮ ನಿವಾಸದಿಂದ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ಜಾಗದಲ್ಲಿ ಬೃಹತ್ ಪರದೆಯನ್ನು ಅಳವಡಿಸಲಾಗುವುದು. ಪ್ರಶಸ್ತಿ ಪುರಸ್ಕೃತರ ಹೆಸರು ಕರೆದಾಗ ನಿರ್ದಿಷ್ಟ ಜಾಗದಲ್ಲಿ ನಿಲ್ಲಬೇಕು. ಅವರ ಪರಿಚಯ ಮಾಡಿದ ನಂತರ ಕೈ ಮುಗಿದು ವಾಪಸ್ ತಮ್ಮ ಸ್ಥಳಕ್ಕೆ ತೆರಳಬೇಕು. ಆಗ ಅವರು ಪ್ರಶಸ್ತಿ ಪುರಸ್ಕೃತರಾಗುತ್ತಾರೆ. ನ್ಯಾಷನಲ್ ಇನ್ಫಾರ್ಮೆಟಿಕ್ ಸೆಂಟರ್ ಆಯೋಜಿಸುವ ಕಾರ್ಯಕ್ರಮದ ನೇರ ಪ್ರಸಾರ ದೂರದರ್ಶನ ಮತ್ತು webcast.gov.inನಲ್ಲಿ ಇರುತ್ತದೆ.

ಸಂತಸ ವ್ಯಕ್ತಪಡಿಸಿದಕ್ರೀಡಾಪಟುಗಳು

ರಾಷ್ಟ್ರಪತಿಗಳಿಂದ ನೇರವಾಗಿ ಪ್ರಶಸ್ತಿ ಸ್ವೀಕರಿಸುವುದು ಗೌರವದ ವಿಷಯ. ಆದರೆ ಈ ಬಾರಿ ಅದು ಸಾಧ್ಯವಾಗುತ್ತಿಲ್ಲ. ಆದರೂ ವರ್ಚುವಲ್ ಆಗಿ ಕಾರ್ಯಕ್ರಮ ಆಯೋಜಿಸಿರುವುದು ಖುಷಿ ತಂದಿದೆ ಎಂದು ಕೆಲವು ಕ್ರೀಡಾಪಟುಗಳು ಅಭಿಪ್ರಾಯಪಟ್ಟಿದ್ದಾರೆ.

‘ಪರಿಸ್ಥಿತಿ ಚೆನ್ನಾಗಿಲ್ಲ. ಕೋವಿಡ್‌ನಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಆದ್ದರಿಂದ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ವರ್ಚುವಲ್ ಆಗಿ ನಡೆಯುತ್ತದೆ. ಇದರಿಂದ ನನಗೇನೂ ಬೇಸರ ಇಲ್ಲ. ಪ್ರಶಸ್ತಿ ಸ್ವೀಕರಿಸುವ ಸಂಭ್ರಮಕ್ಕಾಗಿ ಕಾಯುತ್ತಿದ್ದೇನೆ’ ಎಂದು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವ ಟೇಬಲ್ ಟೆನಿಸ್ ಪಟು ಮಣಿಕಾ ಬಾತ್ರ ಹೇಳಿದರು.

‘ಕ್ರೀಡಾ ದಿನಾಚರಣೆಯಂದೇ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಷಯ. ವರ್ಚುವಲ್ ಕಾರ್ಯಕ್ರಮ ಆಯೋಜಿಸುವ ನಿರ್ಧಾರ ಕೈಗೊಂಡ ಭಾರತ ಕ್ರೀಡಾ ಪ್ರಾಧಿಕಾರದ ನಿರ್ಧಾರ ಶ್ಲಾಘನೀಯ’ ಎಂದು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ಯಾರಾ ಅಥ್ಲೀಟ್ ಸಂದೀಪ್ ಚೌಧರಿ ಹೇಳಿದರು.

‘ಪ್ರಶಸ್ತಿ ಸ್ವೀಕಾರ ಸಮಾರಂಭದ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಾಗ ನಿರಾಳವಾಗಿದ್ದೆ. ಈ ಕಾರ್ಯಕ್ರಮ ಆಯೋಜಿಸಿದ್ದರ ಹಿಂದಿನ ಶ್ರಮವನ್ನು ನೆನೆದಾಗ ರೋಮಾಂಚನಗೊಂಡೆ. ದೇಶದ ನಾನಾ ಭಾಗದಲ್ಲಿರುವ ಕ್ರೀಡಾಪಟುಗಳನ್ನು ಆನ್‌ಲೈನ್‌ ಮೂಲಕ ಒಂದೆಡೆ ಸೇರಿಸಿ ಗೌರವಿಸುವುದು ಸುಲಭದ ಕಾರ್ಯವಲ್ಲ’ ಎಂಬುದು ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಲಿರುವ ರಾಷ್ಟ್ರೀಯ ವುಷು ಕೋಚ್ ಕುಲದೀಪ್ ಹಂಡೂ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT