ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಯಲ್ಲಿ ಪಿಎಚ್‌.ಡಿ; ತರಬೇತಿಯಲ್ಲಿ ಪರಿಣಿತ..!

Last Updated 2 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ಬಸವನಬಾಗೇವಾಡಿ:ಪ್ರಾಥಮಿಕ ಶಾಲೆಯಲ್ಲೇ ಕ್ರೀಡಾಸಕ್ತಿ. ಉನ್ನತ ಸಾಧನೆಗೈಯುವ ಛಲ, ಕನಸು ಹೊಂದಿದ್ದ ಡಾ.ವಿಶ್ವನಾಥ (ಪ್ರವೀಣ) ಎಂ.ನಡಕಟ್ಟಿ ಸ್ವತಃ ಕ್ರೀಡಾಪಟು. ದೈಹಿಕ ಶಿಕ್ಷಣದಲ್ಲಿ ಮಹಾಪ್ರಬಂಧ ಮಂಡಿಸಿ, ಪಿ.ಎಚ್‌ಡಿ ಪಡೆದಿರುವ ಇವರೀಗ ಪರಿಣಿತ ತರಬೇತುದಾರ.

ಕ್ರೀಡಾಸಕ್ತಿ ಹೊಂದಿರುವ ಯುವ ಸಮೂಹಕ್ಕೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ನಿತ್ಯವೂ ತರಬೇತಿ ಜತೆಗೆ ಪ್ರಮುಖ ಪಂದ್ಯಾವಳಿಗಳಿಗೂ ತಂಡವನ್ನು ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ. ಕ್ರೀಡಾಪಟುಗಳ ಮೆಚ್ಚಿನ ಮಾರ್ಗದರ್ಶಕ, ತರಬೇತುದಾರರಾಗಿ ಹೊರಹೊಮ್ಮಿದ್ದಾರೆ.

ಪ್ರಾಥಮಿಕ ಶಾಲೆಯಲ್ಲಿದ್ದಾಗ ಮೈದಾನದಲ್ಲಿ ಕ್ರೀಡಾಪಟುಗಳು ವಾಲಿಬಾಲ್‌ ಆಡುತ್ತಿದ್ದರೆ; ವಿಶ್ವನಾಥ ಮೈದಾನದಿಂದ ಹೊರ ಚಿಮ್ಮಿದ ಚೆಂಡನ್ನು ಹಿಡಿದು ತಂದು, ಆಟಗಾರರಿಗೆ ನೀಡುವುದರಲ್ಲೇ ಆನಂದ ಕಂಡಿದ್ದವರು. ಆಗಲೇ ಉನ್ನತ ಸಾಧನೆಯ ಕನಸನ್ನು ಬೇರೂರಿಸಿಕೊಂಡವರು.

ಎಂಪಿ,ಇಡಿ ಪದವಿಯಲ್ಲಿದ್ದಾಗ ಎರಡು ಬಾರಿ ಕರ್ನಾಟಕ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗಿ, ಉತ್ತಮ ಪ್ರದರ್ಶನ ನೀಡಿದ್ದಾರೆ. ದಸರಾ ಕ್ರೀಡಾಕೂಟದಲ್ಲಿ ವಿಭಾಗ ಮಟ್ಟದಲ್ಲಿ ಭಾಗವಹಿಸಿ, ತಮ್ಮ ಆಟದ ಶೈಲಿಗೆ ಮೆಚ್ಚುಗೆ ಪಡೆದಿದ್ದಾರೆ.

ಪದವಿಯಲ್ಲಿದ್ದಾಗ ಡಾ.ರಾಜಶೇಖರ ಬೆನಕನಹಳ್ಳಿ ಮಾರ್ಗದರ್ಶನದಲ್ಲಿ ಬಾಲ್ ಬ್ಯಾಡ್‌ಮಿಟನ್‌, ಷಟಲ್ ಬ್ಯಾಡ್‌ಮಿಟನ್‌ನಲ್ಲಿ ತರಬೇತಿ ಪಡೆದಿದ್ದಾರೆ. ನಂತರ ಎರಡು ಬಾರಿ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದಾರೆ. ಯುವಜನ ಕ್ರೀಡಾ ಇಲಾಖೆ ಆಯೋಜಿಸಿದ್ದ ವಿಭಾಗ ಮಟ್ಟದ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ತಮಿಳುನಾಡಿನ ಸೇಲಂ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಪದವಿ ಪಡೆದಿರುವ ಪ್ರವೀಣ, ರಾಜಸ್ತಾನದ ಸಿಂಗಾನಿಯಾ ವಿಶ್ವವಿದ್ಯಾಲಯದಿಂದ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ. ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಯೋಗದಲ್ಲಿ ಎಂ.ಎಸ್‌ಸಿ ಪದವಿ ಪಡೆದಿದ್ದಾರೆ. ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಸಂಚಿಕೆಯಲ್ಲಿ 15, ರಾಷ್ಟ್ರೀಯ ಸಂಚಿಕೆಯಲ್ಲಿ 10 ಲೇಖನ ಪ್ರಕಟಿಸಿರುವುದು ವಿಶ್ವನಾಥ ಹೆಗ್ಗಳಿಕೆ.

ವಾಲಿಬಾಲ್, ಅಥ್ಲೆಟಿಕ್ಸ್‌ನಲ್ಲಿ ರಾಜ್ಯ ಮಟ್ಟದ ನಿರ್ಣಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವವಿದ್ಯಾಲಯ ಮಟ್ಟದ ವಾಲಿಬಾಲ್, ಬಾಲ್ ಬ್ಯಾಡ್‌ಮಿಟನ್‌ ಸೇರಿದಂತೆ ವಿವಿಧ ಕ್ರೀಡಾ ಪಂದ್ಯಗಳಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಿವ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಎರಡು ಬಾರಿ ಸಂಯೋಜಕಾರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಆರು ಬಾರಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ಇವರದ್ದು. ಯುಜಿಸಿ ಆಯೋಜಿಸಿದ್ದ ಐದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ ಎಂಟು ಪ್ರಬಂಧಗಳನ್ನು ಮಂಡಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಕ್ರೀಡಾಸಕ್ತಿ ಹೆಚ್ಚಿಸುವುದಕ್ಕಾಗಿ ಐದು ವರ್ಷದಿಂದ ನಿತ್ಯ ಬೆಳಿಗ್ಗೆ 6ರಿಂದ 8 ಗಂಟೆವರೆಗೆ ವಾಲಿಬಾಲ್, ಬಾಲ್ ಬ್ಯಾಡ್‌ಮಿಟನ್‌ ಸೇರಿದಂತೆ ವಿವಿಧ ಆಟಗಳಿಗೆ ಸಂಬಂಧಿಸಿದಂತೆ ಬಸವನಬಾಗೇವಾಡಿಯಲ್ಲಿ ಉಚಿತ ತರಬೇತಿ ನೀಡುತ್ತಿದ್ದಾರೆ.

ಇವರ ಬಳಿ ತರಬೇತಿ ಪಡೆದವರು ಇದೀಗ ಕ್ರೀಡಾ ಸಾಧನೆಯ ಪಥದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಮೂರು ಬಾರಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿದ್ದು ವಿಶ್ವನಾಥ ಹಿರಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT