ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ ಮಾಸ್ಟರ್ಸ್: ಪ್ರಣಯ್‌ ‘ರಾಜ’

Published 28 ಮೇ 2023, 14:26 IST
Last Updated 28 ಮೇ 2023, 14:26 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಅಮೋಘ ಆಟವಾಡಿದ ಎಚ್‌.ಎಸ್‌. ಪ್ರಣಯ್‌ ಅವರು ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು. ಇದರೊಂದಿಗೆ ಆರು ವರ್ಷಗಳ ದೀರ್ಘಕಾಲದ ಪ್ರಶಸ್ತಿ ಬರವನ್ನು ನೀಗಿಸಿಕೊಂಡರು.

ಇಲ್ಲಿ ನಡೆದ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಜಿದ್ದಾಜಿದ್ದಿ ಫೈನಲ್‌ ಹಣಾಹಣಿಯಲ್ಲಿ ಭಾನುವಾರ ಪ್ರಣಯ್‌ 21-19, 13-21, 21-18ರಿಂದ ಚೀನಾದ ವೆಂಗ್‌ ಹಾಂಗ್‌ ಯಾಂಗ್ ಅವರನ್ನು ಮಣಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 34ನೇ ಸ್ಥಾನದಲ್ಲಿರುವ ಯಾಂಗ್ ವಿರುದ್ಧ ಭಾರತದ ಆಟಗಾರನಿಗೆ 94 ನಿಮಿಷಗಳಲ್ಲಿ ಗೆಲುವು ಒಲಿಯಿತು.

2017ರ ಅಮೆರಿಕ ಓಪನ್‌ ಗ್ರ್ಯಾನ್‌ಪ್ರಿಯಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಪ್ರಣಯ್ ಅವರಿಗೆ ಪ್ರಮುಖ ಪ್ರಶಸ್ತಿ ದೂರವೇ ಉಳಿದಿತ್ತು.

ಪ್ರಣಯ್ ಅವರಿಗೆ ಬಿಡಬ್ಲ್ಯುಎಫ್‌ ವಿಶ್ವ ಟೂರ್ ವಿಭಾಗದಲ್ಲಿ ಇದು ಮೊದಲ ಕಿರೀಟ. ಅಲ್ಲದೇ ಈ ವರ್ಷ ಭಾರತದ ಆಟಗಾರನೊಬ್ಬನಿಗೆ ಲಭಿಸಿದ ಮೊದಲ ಸಿಂಗಲ್ಸ್ ಪ್ರಶಸ್ತಿಯಾಗಿದೆ.

ಕಳೆದ ವರ್ಷ ಐತಿಹಾಸಿಕ ಥಾಮಸ್‌ ಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ವಿಜೇತ ಭಾರತ ತಂಡದ ಭಾಗವಾಗಿದ್ದರು ಪ್ರಣಯ್. ಆದರೆ ವೈಯಕ್ತಿಕ ವಿಭಾಗದಲ್ಲಿ ಆರು ವರ್ಷಗಳ ಬಳಿಕ ಅವರಿಗೆ ಪ್ರಶಸ್ತಿ ಬಂದಿದೆ.

ಜಿದ್ದಾಜಿದ್ದಿ

ವಿಶ್ವ ಕ್ರಮಾಂಕದಲ್ಲಿ 9ನೇ ಸ್ಥಾನದಲ್ಲಿರುವ ಪ್ರಣಯ್‌ ಈ ಪಂದ್ಯದಲ್ಲಿ ತಮ್ಮ ಬತ್ತಳಿಕೆಯಲ್ಲಿದ್ದ ಎಲ್ಲ ಪ್ರಮುಖ ಅಸ್ತ್ರಗಳನ್ನು ಪ್ರಯೋಗಿಸಿದರು. ನಿರಂತರ ಆಕ್ರಮಣ, ಅದ್ಭುತ ರಿಟರ್ನ್ಸ್, ಎದುರಾಳಿಯ ತಪ್ಪುಗಳ ಲಾಭ ಪಡೆಯುವುದು, ಚುರುಕಿನ ಆಟದ ಮೂಲಕ ಎದುರಾಳಿಯನ್ನು ಕಾಡಿದರು.

ಮೊದಲ ಗೇಮ್‌ನ ಆರಂಭದಲ್ಲಿ 1–3ರಿಂದ ಹಿನ್ನಡೆಯಲ್ಲಿದ್ದ ಅವರು ಬಳಿಕ 10–10ರ ಸಮಬಲ ಸಾಧಿಸಿದರು. 16–16ರವರೆಗೆ ಸಮ ಹೋರಾಟ ಮುಂದುವರಿಯಿತು. ಬಳಿಕ ಎರಡು ಪಾಯಿಂಟ್ಸ್ ಗಳಿಸಿದ ಪ್ರಣಯ್, ಅದೇ ಲಯದೊಂದಿಗೆ ಗೇಮ್ ಗೆದ್ದುಕೊಂಡರು.

ಎರಡನೇ ಗೇಮ್‌ನ ಆರಂಭದಲ್ಲೂ ಚೀನಾ ಆಟಗಾರ 4–0 ಮೇಲುಗೈ ಸಾಧಿಸಿದರು. ಬಳಿಕ ಬ್ಯಾಕ್‌ಹ್ಯಾಂಡ್‌ ಹೊಡೆತಗಳ ಮೂಲಕ ಚೇತರಿಸಿಕೊಂಡ ಪ್ರಣಯ್‌ 5–4ರಿಂದ ಮುನ್ನಡೆ ಗಳಿಸಿದರು. ವಿರಾಮದ ವೇಳೆ ಯಾಂಗ್ ಅವರಿಗೆ ಮತ್ತೆ 11–9ರ ಮುನ್ನಡೆ ಸಿಕ್ಕಿತು. ಬಳಿಕ ಪ್ರಣಯ್ ಮಾಡಿದ ಲೋಪಗಳ ಲಾಭ ಪಡೆದ ಚೀನಾ ಆಟಗಾರ ಮುನ್ನಡೆಯನ್ನು 16–10ಕ್ಕೆ ಹೆಚ್ಚಿಸಿಕೊಂಡರು. ಕ್ರಾಸ್‌ಕೋರ್ಟ್ ರಿಟರ್ನ್ಸ್ ಮೂಲಕ ಮಿಂಚಿದ ಅವರು ಗೇಮ್ ತಮ್ಮದಾಗಿಸಿಕೊಂಡರು.

ಮೂರನೇ ಗೇಮ್‌ನಲ್ಲಿ ಆಟ ಮತ್ತಷ್ಟು ರಂಗೇರಿತು. ಪ್ರಣಯ್‌ 6–8ರಿಂದ ಆರಂಭದ ಮುನ್ನಡೆ ಗಳಿಸಿದರು. ವಿರಾಮದ ವೇಳೆಗೆ ಒಂದು ಪಾಯಿಂಟ್‌ನಿಂದ ಅವರು ಮುನ್ನಡೆಯಲ್ಲಿದ್ದರು.

ಬಳಿಕ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳಿಂದ ಗಮನಸೆಳೆದ ಪ್ರಣಯ್‌ 14–11ರ ಮೇಲುಗೈ ಪಡೆದರು. ಬಳಿಕ ಚೇತರಿಸಿಕೊಂಡ ಯಾಂಗ್‌ 18–18ರ ಸಮಬಲ ಸಾಧಿಸಿದರು. ನಂತರ ಒತ್ತಡವನ್ನು ಮೀರಿನಿಂತ ಪ್ರಣಯ್‌ ಮಾಂತ್ರಿಕ ಸ್ಮ್ಯಾಷ್‌ಗಳ ನೆರವಿನಿಂದ ಚಾಂಪಿಯನ್‌ಷಿಪ್‌ ಪಾಯಿಂಟ್ಸ್ ಗಳಿಸಿ ಜಯದ ಹೊಳೆಯಲ್ಲಿ ಮಿಂದೆದ್ದರು.

ಫೈನಲ್‌ ತಲುಪುವ ಹಾದಿಯಲ್ಲಿ ಪ್ರಣಯ್ ಅವರು ವಿಶ್ವದ ಐದನೇ ರ‍್ಯಾಂಕಿನ ಚೊ ಟಿಯೆನ್ ಚೆನ್‌, ಆಲ್ ಇಂಗ್ಲೆಂಡ್ ಚಾಂಪಿಯನ್‌ ಲಿ ಶಿ ಫೆಂಗ್ ಮತ್ತು ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು ಮಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT