ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಯೋಧಾಗೆ ಸತತ 4ನೇ ಜಯ

Last Updated 9 ಸೆಪ್ಟೆಂಬರ್ 2019, 20:14 IST
ಅಕ್ಷರ ಗಾತ್ರ

ಕೋಲ್ಕತ್ತ: ಆಲ್‌ರೌಂಡ್ ಆಟದ ಮೂಲಕ ಎದುರಾಳಿ ತಂಡವನ್ನು ನಡುಗಿಸಿದ ಯು.ಪಿ.ಯೋಧಾ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ ನಾಲ್ಕನೇ ಜಯ ಗಳಿಸಿತು. ನೇತಾಜಿ ಸುಭಾಷ್‌ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಯೋಧಾ 33–26ರಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ಎದುರು ಗೆಲುವು ಸಾಧಿಸಿತು.

ಗುಜರಾತ್ ತಂಡದ ಸ್ಟಾರ್ ರೈಡರ್ ಸಚಿನ್ ಅವರನ್ನು ಹಿಡಿದು ಪಂದ್ಯದ ಮೊದಲ ಪಾಯಿಂಟ್ ಗಳಿಸಿದ ಯೋಧಾ ಆರಂಭದಲ್ಲಿ ತಾಳ್ಮೆಯಿಂದ ಆಡಿ ಪಾಯಿಂಟ್‌ಗಳನ್ನು ಗಳಿಸುತ್ತ ಸಾಗಿತು. ಗುಜರಾತ್ ತಿರುಗೇಟು ನೀಡಿ ಸಮಬಲ ಸಾಧಿಸುವಲ್ಲೂ ಯಶಸ್ವಿಯಾಯಿತು.

ಐದನೇ ನಿಮಿಷದಲ್ಲಿ ಸ್ಕೋರು 3–3ರಲ್ಲೂ ಏಳನೇ ನಿಮಿಷದಲ್ಲಿ 5–5ರಲ್ಲೂ ಸಮ ಆಯಿತು. ನಂತರ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಉಭಯ ತಂಡಗಳೂ ಭಾರಿ ಪೈಪೋಟಿ ನಡೆಸಿದ್ದರಿಂದ ಒಮ್ಮೆ ಯೋಧಾ, ಮತ್ತೊಮ್ಮೆ ಗುಜರಾತ್ ಮೇಲುಗೈ ಸಾಧಿಸುತ್ತ ಸಾಗಿತು.

ಮೊದಲಾರ್ಧ ಮುಗಿಯಲು ಐದು ನಿಮಿಷ ಇದ್ದಾಗ ಸ್ಕೋರು 8–8ರಲ್ಲಿ ಸಮ ಆಯಿತು. ನಂತರ ಯೋಧಾ ಆಟಗಾರರು ಅಪ್ರತಿಮ ಸಾಮರ್ಥ್ಯ ತೋರಿದರು. ಹೀಗಾಗಿ ಮೊದಲಾರ್ಧದ ಮುಕ್ತಾಯಕ್ಕೆ ತಂಡ 16–9ರ ಮುನ್ನಡೆ ಸಾಧಿಸಿತು.

ಅಮೋಘ ಆಟ; ಗೆಲುವಿನ ಓಟ: ದ್ವಿತೀಯಾರ್ಧದ ಆರಂಭದಲ್ಲಿ ಕೆಲವು ಪಾಯಿಂಟ್‌ಗಳನ್ನು ಕಲೆ ಹಾಕುವಲ್ಲಿ ಗುಜರಾತ್ ಯಶಸ್ವಿಯಾಯಿತು. ಆದರೆ ಯೋಧಾ ಓಟಕ್ಕೆ ಬ್ರೇಕ್ ಹಾಕಲು ಆ ತಂಡಕ್ಕೆ ಸಾಧ್ಯವಾಗಲಿಲ್ಲ. ಕೊನೆಯ 15 ನಿಮಿಷಗಳ ಆಟ ಬಾಕಿ ಇದ್ದಾಗ ಎಂಟು ಪಾಯಿಂಟ್‌ಗಳ ಮುನ್ನಡೆ ಸಾಧಿಸಿದ ಯೋಧಾ ನಂತರ ಸುಲಭ ಗೆಲುವಿನತ್ತ ದಾಪುಗಾಲು ಹಾಕಿತು. ಶ್ರೀಕಾಂತ್ ಜಾಧವ್ ಮತ್ತು ಸುರೇಂದರ್ ಗಿಲ್ ತಲಾ ಆರು ಪಾಯಿಂಟ್ ಗಳಿಸಿದರೆ ರಿಷಾಂಕ್ ದೇವಾಡಿಗ ಐದು ಪಾಯಿಂಟ್ ಕಲೆ ಹಾಕಿದರು. ಸುಮಿತ್ ಮತ್ತು ನಿತೇಶ್ ಕುಮಾರ್ ಕ್ರಮವಾಗಿ ಐದು ಮತ್ತು ನಾಲ್ಕು ಟ್ಯಾಕಲ್ ಪಾಯಿಂಟ್ ಗಳಿಸಿದರು.

ಗುಜರಾತ್ ತಂಡದ ಸಚಿನ್ ಗಳಿಸಿದ ಸೂಪರ್ ಟೆನ್ ಮತ್ತು ನಾಯಕ ಸುನಿಲ್ ಕುಮಾರ್ ಗಳಿಸಿದ ಏಳು ಟ್ಯಾಕಲ್ ಪಾಯಿಂಟ್‌ಗಳು ವ್ಯರ್ಥವಾದವು.

ಪಟ್ನಾ ಪೈರೇಟ್ಸ್‌ಗೆ ಸುಲಭ ಜಯ: ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಪಟ್ನಾ ಪೈರೇಟ್ಸ್ ಮತ್ತು ತಮಿಳ್ ತಲೈವಾಸ್ ನಡುವಿನ ಹಣಾಹಣಿಯಲ್ಲಿ ಪೈರೇಟ್ಸ್ ಆಟಗಾರರು ಗೆಲುವಿನ ನಗೆ ಬೀರಿದರು. ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಪಟ್ನಾ 51–25ರಲ್ಲಿ ತಲೈವಾಸ್‌ ತಂಡವನ್ನು ಮಣಿಸಿತು. ಇದು ತಲೈವಾಸ್‌ನ ಸತತ ಏಳನೇ ಸೋಲು. ಸತತ ಆರು ಸೋಲುಗಳ ನಂತರ ಪೈರೇಟ್ಸ್ ಗೆಲುವಿನ ಲಯಕ್ಕೆ ಮರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT