ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌ಗೆ ಸಾವಿರ ಪಂದ್ಯದ ಸಂಭ್ರಮ

ಈ ಪಂದ್ಯದಲ್ಲಿ ಆಡುವ ಬೆಂಗಳೂರು ಬುಲ್ಸ್‌– ಬೆಂಗಾಲ್‌ ವಾರಿಯರ್ಸ್‌
Published 14 ಜನವರಿ 2024, 20:49 IST
Last Updated 14 ಜನವರಿ 2024, 20:49 IST
ಅಕ್ಷರ ಗಾತ್ರ

ಜೈಪುರ: ಹತ್ತನೇ ಋತುವನ್ನು ಕಾಣುತ್ತಿರುವ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ನಾಳೆ ಪ್ರಮುಖ ಮೈಲಿಗಲ್ಲು ತಲುಪಲಿದೆ. ಲೀಗ್‌ನ ಸಾವಿರನೇ ಪಂದ್ಯ ಸೋಮವಾರ ನಡೆಯಲಿದ್ದು, ಇಲ್ಲಿನ ಸವಾಯಿ ಮಾನ್‌ಸಿಂಗ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ದಿನದ ಈ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌, ಬೆಂಗಾಲ್ ವಾರಿಯರ್ಸ್‌ ವಿರುದ್ಧ ಆಡಲಿರುವುದು ವಿಶೇಷ.

‘ಇದೊಂದು ಕನಸಿನಂತೆ ಕಾಣುತ್ತಿದೆ. ಹತ್ತು ವರ್ಷಗಳ ಹಿಂದೆ (2014) ಲೀಗ್‌ ಈ ಮಟ್ಟಕ್ಕೇರುತ್ತದೆ ಎಂಬುದನ್ನು ಊಹಿಸಿಯೇ ಇರಲಿಲ್ಲ. ಇದು ಹೆಮ್ಮೆಯ ವಿಷಯ’ ಎಂದು ಪ್ರೊ ಕಬಡ್ಡಿ ಲೀಗ್‌ನ ತಾಂತ್ರಿಕ ನಿರ್ದೇಶಕ ಇ.ಪ್ರಸಾದ್ ರಾವ್ ಅವರು ಸಂಭ್ರಮದಿಂದ ಹೇಳಿದರು.

‘ಲೀಗ್ ಆರಂಭಿಸಿದಾಗ ಜನರು ಸ್ವೀಕರಿಸುತ್ತಾರೆಯೇ ಎಂಬ ಅಳುಕು ಇತ್ತು. ಕಬಡ್ಡಿ ನಮ್ಮ ಜನಪ್ರಿಯ ಆಟ. ಆದರೆ ಆಗಲೇ ಇತರ ಕ್ರೀಡೆಗಳಲ್ಲಿ ಮೂರು– ನಾಲ್ಕು ಲೀಗ್‌ಗಳು ಆರಂಭವಾಗಿ ಕೆಲವು ವರ್ಷಗಳಾಗಿದ್ದವು. ಹೀಗಾಗಿ ಇದು ಸವಾಲಾಗಿತ್ತು. ಆದರೆ ಕೆಲವು ಬದಲಾವಣೆಗಳೊಡನೆ ಆರಂಭವಾದ ಲೀಗ್‌ ಅನ್ನು ಜನರು ಸ್ವೀಕರಿಸಿದರು. ಇದರ ಶ್ರೇಯ ಆಯೋಜಕರಾದ ಮಶಾಲ್‌ ಸ್ಪೋರ್ಟ್ಸ್‌ ಮತ್ತು ಪ್ರಸಾರಕರಾದ ಸ್ಟಾರ್‌ ಸ್ಪೋರ್ಟ್ಸ್‌ಗೆ ಸಲ್ಲಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

‘ಮಣ್ಣಿನ ಅಂಕಣದಿಂದ ಮ್ಯಾಟ್‌ ಮೇಲೆ ಕಬಡ್ಡಿ ನಡೆಯಿತು. ರೈಡ್‌ಗೆ ಕಾಲಾವಧಿ ನಿಗದಿಮಾಡಿದೆವು. ಡು ಆರ್‌ ಡೈ (ಮಾಡು– ಮಡಿ) ರೈಡ್‌ ಕಡ್ಡಾಯಗೊಳಿಸಿದೆವು. ಜನಪ್ರಿಯಗೊಳಿಸಲು ನಿಯಮಗಳನ್ನು ಬದಲಾಯಿಸಿದೆವು. ಈ ಲೀಗ್ ಕಬಡ್ಡಿಯ ಅತಿ ದೊಡ್ಡ ಪ್ರಯೋಗಾಲಯ’ ಎಂದು ಅವರು ವಿವರಿಸಿದರು. ಮುಂದೆಯೂ ಬದಲಾವಣೆಗಳು ಇರಲಿವೆ. ಮುಖ್ಯವಾಗಿ ಟಚ್‌ ಪಾಯಿಂಟ್‌, ಗೆರೆಯ ನಿರ್ಣಯ ಕುರಿತು ಕ್ರಿಕೆಟ್‌ನ ಮಾದರಿಯಲ್ಲಿ ತಂತ್ರಜ್ಞಾನದ ನೆರವು ಪಡೆಯಲಾಗುವುದು. ಪಂದ್ಯಗಳು ಟೈ ಆದಲ್ಲಿ ಟೈಬ್ರೇಕ್ ಅಳವಡಿಸುವ ವಿಚಾರದಲ್ಲೂ ಚರ್ಚೆಗಳು ನಡೆದಿವೆ. ಸಲಹೆಗಳನ್ನು ಪಡೆಯುತ್ತಿದ್ದೇವೆ’ ಎಂದು ಪ್ರಸಾದ್ ರಾವ್ ಮಾಧ್ಯಮ ಸಂವಾದದಲ್ಲಿ ಹೇಳಿದರು.

ಗೆಲ್ಲುವ ತವಕ:

‌‘ಬುಲ್ಸ್‌ ಸಾವಿರನೇ ಪಂದ್ಯ ಆಡುತ್ತಿರುವುದು ಹೆಮ್ಮೆ ಮೂಡಿಸಿದೆ. ನಾವೆಲ್ಲ ಈ ಪಂದ್ಯ ಗೆಲ್ಲಲು ತವಕದಿಂದ ಇದ್ದೇವೆ. ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲ’ ಎಂದು ಬೆಂಗಳೂರು ಬುಲ್ಸ್‌ ನಾಯಕ ಸೌರಭ್ ನಂದಲ್ ವಿಶ್ವಾಸದಿಂದ ಹೇಳಿದರು.

ಬುಲ್ಸ್‌ ಇದುವರೆಗಿನ ಪಂದ್ಯಗಳನ್ನು ಗೆದ್ದಿದ್ದು, ಸೋತಿದ್ದು ಎರಡೂ ಕಡಿಮೆ ಅಂತರದಿಂದ. ಏಕೆ ಹೀಗೆ ಎಂಬ ಪ್ರಶ್ನೆಗೆ, ‘ಕೆಲವೊಮ್ಮೆ ಅದೃಷ್ಟದ ಬೆಂಬಲವೂ ಬೇಕಾಗುತ್ತದೆ. ನಾವು ಚೆನ್ನಾಗಿ ಆಡಿದರೂ ಕಡೆಗಳಿಗೆಯಲ್ಲಿ ಸಣ್ಣ ತಪ್ಪುಗಳಾಗುತ್ತವೆ. ಸುರ್ಜಿತ್‌ ಸಿಂಗ್, ಕೆಲದಿನಗಳ ಹಿಂದೆ ಟ್ಯಾಕ್ಲಿಂಗ್‌ನಿಂದಲೇ ಕೊನೆಗಳಿಗೆಯಲ್ಲಿ ಪಂದ್ಯವನ್ನು ಗೆಲ್ಲಿಸಿದ್ದು ಇದೆ’ ಎಂದರು. ರಕ್ಷಣೆಯಲ್ಲಿ ಹಿರಿಯ ಆಟಗಾರ ಸುರ್ಜಿತ್‌ ಅವರಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂದು ಒಪ್ಪಿಕೊಂಡ ಅವರು, ‘ನಾನೂ ಸೇರಿದಂತೆ ಉಳಿದವರು (ರಣ್ ಸಿಂಗ್‌, ಅಮನ್) ಲಯ ಕಂಡುಕೊಳ್ಳುವ ವಿಶ್ವಾಸವಿದೆ ಎಂದರು. 12 ಪಂದ್ಯಗಳಿಂದ 31 ಪಾಯಿಂಟ್ಸ್‌ ಕಲೆಹಾಕಿರುವ ಬುಲ್ಸ್‌ ಸದ್ಯ ಎಂಟನೇ ಸ್ಥಾನದಲ್ಲಿದೆ. ಐದು ಗೆದ್ದಿದೆ. ಏಳು ಸೋತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT