ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಅಭಿವೃದ್ಧಿಗೆ ಬಂಡವಾಳ ಹೂಡಿ: ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಮನವಿ

Last Updated 26 ಜುಲೈ 2018, 10:56 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿ ಕ್ರೀಡೆಯ ಸಮಗ್ರ ಅಭಿವೃದ್ಧಿಗೆ ಬಂಡವಾಳ ಹೂಡಿಕೆದಾರರರು ನೆರವಿನ ಹಸ್ತ ಚಾಚಬೇಕು’ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಮನವಿ ಮಾಡಿದರು.

ಗುರುವಾರ ಇಲ್ಲಿ ನಡೆದ ಕಾನ್ಫಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ (ಸಿಐಐ)ಯ ಜಾಗತಿಕ ಕ್ರೀಡಾ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಕ್ರೀಡೆಯ ಸಮಗ್ರ ಅಭಿವೃದ್ಧಿಯ ಅಗತ್ಯವಿದೆ. ಇದಕ್ಕಾಗಿ ಆರ್ಥಿಕ ಶಕ್ತಿ ಬಹಳ ಮುಖ್ಯ. ಕ್ರೀಡಾ ರಂಗದಲ್ಲಿ ಭಾರತವನ್ನು ಮುನ್ನಲೆಗೆ ತರಲು ಬಂಡವಾಳ ಹೂಡಿಕೆದಾರರ ನೆರವು ಅವಶ್ಯಕ’ ಎಂದು ರಾಥೋಡ್‌ ಹೇಳಿದರು.

‘ಕ್ರೀಡೆಗೆ ಸಂಬಂಧಿಸಿದಂತೆ ಶಾಲಾ ಮಕ್ಕಳ ಕೌಶಲ ಹಾಗೂ ಪ್ರತಿಬೆಯನ್ನು ಗುರುತಿಸಲು ಕೇಂದ್ರ ಸರ್ಕಾರವು ಯೋಜನೆಯೊಂದನ್ನು ತರಲು ಚಿಂತನೆ ನಡೆಸಿದೆ. ಈ ಯೋಜನೆಯ ಅಡಿ ಮಕ್ಕಳಿಗೆ ಸ್ಕಾಲರ್‌ಶಿಪ್‌ ನೆರವು ನೀಡಲಾಗುವುದು’ ಎಂದು ಅವರು ತಿಳಿಸಿದರು.

‘ಸುಮಾರು 10 ಕೋಟಿ ಮಕ್ಕಳು ಶಾಲೆಯಲ್ಲಿದ್ದಾರೆ. ಶಾಲೆಯ ಮಂಡಳಿಗಳು, ರಾಜ್ಯ ಸರ್ಕಾರ ಹಾಗೂ ಸಶಸ್ತ್ರ ಪಡೆಗಳೊಂದಿಗೆ ಕ್ರೀಡಾ ಸಚಿವಾಯಲವು ಒಪ್ಪಂದ ಮಾಡಿಕೊಳ್ಳಲಿದೆ. 8ರಿಂದ 10 ವರ್ಷದ ಮಕ್ಕಳ ದೈಹಿಕ ಕ್ಷಮತೆಯನ್ನು ಪರೀಕ್ಷಿಸಿ ಅವರಿಗೆ ತರಬೇತಿ ನೀಡಲಾಗುವುದು’ ಎಂದೂ ತಿಳಿಸಿದರು.

‘ದೈಹಿಕ ಕ್ಷಮತೆಯ ಪರೀಕ್ಷೆಗಳನ್ನು ವಿವಿಧ ಹಂತಗಳಲ್ಲಿ ಮಾಡಲಾಗುವುದು. ಪ್ರತಿ ಹಂತದಲ್ಲೂ ಪರೀಕ್ಷೆಯ ಗುಣಮಟ್ಟವನ್ನು ಹೆಚ್ಚಿಸಲಾಗುವುದು. ಇದರಿಂದಾಗಿ ಅರ್ಹ ವಿದ್ಯಾರ್ಥಿಗಳು ಬೆಳಕಿಗೆ ಬರುತ್ತಾರೆ. ಆಯ್ಕೆಯಾದವರಿಗೆ ಎಂಟು ವರ್ಷಗಳ ಕಾಲ ಆರ್ಥಿಕ ನೆರವು ನೀಡಲಾಗುವುದು. ವರ್ಷಕ್ಕೆ ₹5 ಲಕ್ಷ ಧನಸಹಾಯ ನೀಡುವ ಬಗ್ಗೆ ಚರ್ಚೆ ನಡೆದಿದೆ’ ಎಂದು ಕೂಡ ಹೇಳಿದರು.

‘ಇದರ ಲಾಭ ಪಡೆದ ವಿದ್ಯಾರ್ಥಿಯು 16 ವರ್ಷ ತಲುಪುವಷ್ಟರಲ್ಲಿ ಆತನ ಆಸಕ್ತಿಯ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬಹುದು. ಕ್ರೀಡಾ ರಂಗದಲ್ಲಿ ಹಣ ಹೂಡಲು ಇದು ಸೂಕ್ತ ಸಮಯ’ ಎಂದು ಅವರು ಅಭಿಪ್ರಾಯಪಟ್ಟರು.

ಕ್ರೀಡಾ ಪರಿಕರಗಳ ಉತ್ಪಾದನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ‘ಇದೇ ವರ್ಷ ಜಾಗತಿಕ ಕ್ರೀಡಾ ಪರಿಕರಗಳ ಉತ್ಪಾದಕರೊಂದಿಗೆ ಸಭೆ ನಡೆಸಲಾಗುವುದು.ದೇಶದಲ್ಲಿ ಕ್ರೀಡಾ ಪರಿಕರಗಳ ಉದ್ಯಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ಸಭೆಯಲ್ಲಿ ಭಾಗಿಯಾಗುವಅಂತರರಾಷ್ಟ್ರೀಯ ಕಂಪನಿಗಳಿಂದ ಸಲಹೆ ಪಡೆಯಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT