ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ ನೆಹ್ವಾಲ್‌ ಕ್ವಾರ್ಟರ್ ಫೈನಲ್‌ಗೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಅಶ್ವಿನಿ ಪೊನ್ನಪ್ಪ – ರಣಕಿ ರೆಡ್ಡಿ ಎಂಟರ ಘಟ್ಟಕ್ಕೆ ಪ್ರವೇಶ
Last Updated 3 ಆಗಸ್ಟ್ 2018, 5:11 IST
ಅಕ್ಷರ ಗಾತ್ರ

ನಾನ್‌ಜಿಂಗ್‌, ಚೀನಾ: ಥಾಯ್ಲೆಂಡ್‌ನ ರಚನಾಕ್ ಇಂಥನಾನ್ ವಿರುದ್ಧ ನೇರ ಗೇಮ್‌ಗಳಿಂದ ಗೆದ್ದ ಭಾರತದ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ 165ರ ಘಟ್ಟದ ಪಂದ್ಯದಲ್ಲಿ ಅವರು 21–16, 21–19ರಿಂದ ಗೆದ್ದರು.

ಮಿಶ್ರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯ್‌ರಾಜ್‌ ರಣಕಿರೆಡ್ಡಿ ಜೋಡಿ ಮಲೇಷ್ಯಾದ ಗೊಹ್‌ ಸೂನ್ ಹಾತ್‌ ಮತ್ತು ಶೆವಾನ್‌ ಜೆಮಿ ಲಾಯ್ ಅವರನ್ನು 22–20, 21–14, 21–6ರಿಂದ ಮಣಿಸಿದರು.

2015 ಮತ್ತು 2017ರಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದ ಸೈನಾ ನೆಹ್ವಾಲ್ ಹಾಗೂ 2013ರ ಚಾಂಪಿಯನ್‌ ಇಂಥನಾನ್ ನಡುವಿನ ಕಾದಾಟ ಕುತೂಹಲ ಕೆರಳಿಸಿತ್ತು. ಆದರೆ ಅಮೋಘ ಆಟವಾಡಿದ ಸೈನಾ ಎದುರಾಳಿಯನ್ನು ನಿರಾಯಾಸವಾಗಿ ಮಣಿಸಿದರು. ಎಂಟರ ಘಟ್ಟದಲ್ಲಿ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್ ಸ್ಪೇನ್‌ನ ಕರೊಲಿನಾ ಮರಿನ್ ಅವರನ್ನು ಎದುರಿಸುವರು.

ಹಿನ್ನಡೆಯಿಂದ ಚೆತರಿಸಿಕೊಂಡ ಪೊನ್ನಪ್ಪ ಜೋಡಿ:ಎದುರಾಳಿಗಳ ಭಾರಿ ಪೈಪೋಟಿಯನ್ನು ಮೆಟ್ಟಿ ನಿಂತ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯ್‌ರಾಜ್ ರಣಕಿ ರೆಡ್ಡಿ ಆರಂಭದ ಗೇಮ್‌ನಲ್ಲಿ ಸೋಲು ಕಂಡರೂ ನಂತರ ಚೇತರಿಸಿಕೊಂಡು ಗೆಲುವು ಸಾಧಿಸಿದರು.

ವಿಶ್ವ ರ‍್ಯಾಂಕಿಂಗ್‌ನ 40ನೇ ಸ್ಥಾನದಲ್ಲಿರುವ ಭಾರತದ ಜೋಡಿ ಅಗ್ರ ಸ್ಥಾನದಲ್ಲಿರುವ ಚೀನಾ ಜೋಡಿ ಜೆಂಗ್ ಸಿವಿ ಮತ್ತು ಹುವಾಂಗ್‌ ಯಾಗ್ಯಂಗ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಎದುರಿಸುವರು.

ಮೊದಲ ಗೇಮ್‌ನಲ್ಲಿ ಮಲೇಷ್ಯಾ ಜೋಡಿ ಉತ್ತಮ ಆರಂಭ ಕಂಡರು. ಹೀಗಾಗಿ 11–8ರಿಂದ ಮುನ್ನಡೆದರು. ನಂತರ ಸುಧಾರಿಸಿಕೊಂಡ ಅಶ್ವಿನಿ ಮತ್ತು ರಣಕಿ ರೆಡ್ಡಿ 14–14ರ ಸಮಬಲ ಸಾಧಿಸಿದರು. ಆದರೆ ಈ ಓಟವನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಗೇಮ್‌ ಸೋತರು.

ಎರಡನೇ ಗೇಮ್‌ನಲ್ಲಿ ಮಲೇಷ್ಯಾದ ಆಟಗಾರರು 5–2ರ ಮುನ್ನಡೆದಿದ್ದ ಸಂದರ್ಭದಲ್ಲಿ ತಿರುಗೇಟು ನೀಡಿದ ಅಶ್ವಿನಿ–ರಣಕಿರೆಡ್ಡಿ 9–9ರ ಸಮಬಲ ಸಾಧಿಸಿ ಪಂದ್ಯವನ್ನು ರೋಚಕ ಘಟ್ಟದತ್ತ ಕೊಂಡೊಯ್ದರು. ನಂತರ ಅಶ್ವಿನಿ ಅವರ ಪ್ಲೇಸಿಂಗ್ ಮತ್ತು ರಣಕಿರೆಡ್ಡಿ ಅವರ ಸ್ಮ್ಯಾಷ್‌ಗಳಿಗೆ ಬೆದರಿದ ಗೊಹ್‌ ಮತ್ತು ಶೆವಾನ್‌ ಸೋಲೊಪ್ಪಿಕೊಂಡರು.

ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಭಾರತದ ಜೋಡಿ ಪೂರ್ಣ ಆಧಿಪತ್ಯ ಸ್ಥಾಪಿಸಿತು. ವಿರಾಮದ ವೇಳೆ 11–4 ಮುನ್ನಡೆ ಸಾಧಿಸಿದ್ದ ಈ ಜೋಡಿ ನಂತರವೂ ಎದುರಾಳಿಗಳ ಮೇಲೆ ಪ್ರಹಾರ ಮಾಡಿ ಗೆದ್ದಿತು.

ಇತರ ಪಂದ್ಯಗಳ ಫಲಿತಾಂಶಗಳು

ಪುರುಷರ ಸಿಂಗಲ್ಸ್‌

ವಿಕ್ಟರ್ ಅಕ್ಸೆಲ್ಸನ್‌ಗೆ ಕಾ ಲಾಂಗ್‌ ಅಗ್ನಸ್ ವಿರುದ್ಧ 21–19, 21–18ರಿಂದ ಗೆಲುವು

ಚೆಂಗ್ ಲಾಂಗ್‌ಗೆ ಕೆಂತಾ ನಿಶಿಮೊಟೊ ವಿರುದ್ಧ 21–18, 21–19ರಿಂದ ಜಯ

ಟೀನ್ ಚೆನ್ ಚಾಗೆ ಗಾರ್‌ ಕೊಹ್ಲೊ ವಿರುದ್ಧ 21–11, 21–7ರಿಂದ ಗೆಲುವು

ಮಹಿಳೆಯರ ಸಿಂಗಲ್ಸ್‌

ಥಾಯ್‌ ಜೂ ಯಿಂಗ್‌ಗೆ ಬೀವೆನ್‌ ಜಾಂಗ್ ಎದುರು 21–19, 21–14ರಿಂದ ಜಯ

ಕರೊಲಿನಾ ಮರಿನ್‌ಗೆ ಸಯಾಕ ಸಾತೊ ವಿರುದ್ಧ 21–7, 21–13ರಿಂದ ಜಯ

ಹಿಬೆಂಗ್ಜಿಯಾನೊಗೆ ಲಿನ್ಹ್‌ ಗ್ಯುಯೆನ್ ವಿರುದ್ಧ 21–14, 21–11ರಿಂದ ಜಯ

ಅಕಾನೆ ಯಮಗುಚಿಗೆ ನಿಕಾನ್ ಜಿಂದಾಪೊಲ್‌ ಎದುರು 21–12, 21–12ರಿಂದ ಗೆಲುವು

ಲಿನ್ ಡ್ಯಾನ್‌ಗೆ ಕಾಡಿದ ನಿರಾಸೆ

ಆರನೇ ವಿಶ್ವ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟು ಇಲ್ಲಿಗೆ ಬಂದಿದ್ದ ಲಿನ್‌ ಡ್ಯಾನ್‌ ಅವರು ಚೀನಾದ ಶಿ ಯೂಗಿ ಅವರಿಗೆ ಮಣಿದು ನಿರಾಸೆಗೆ ಒಳಗಾದರು.

’ಸೂಪರ್ ಲಿನ್’ ಎಂದೇ ಖ್ಯಾತರಾಗಿರುವ ಡ್ಯಾನ್‌ ಎರಡು ಬಾರಿ ಒಲಿಂಪಿಕ್ಸ್‌ ಚಾಂಪಿಯನ್ ಆಗಿದ್ದರು. ಆದರೆ 22 ವರ್ಷದ ಶಿ ಅವರ ತಂತ್ರಗಳಿಗೆ ಉತ್ತರ ನೀಡಲು ವಿಫಲರಾದರು. ಅವರು 15–21, 9–21ರಿಂದ ಸೋತರು.

ಹೊರಬಿದ್ದ ಕಿದಂಬಿ ಶ್ರೀಕಾಂತ್

ಭಾರತಕ್ಕೆ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದ ಕಿದಂಬಿ ಶ್ರೀಕಾಂತ್‌ ಮಲೇಷ್ಯಾದ ಡರೆನ್ ಲ್ಯೂ ಅವರಿಗೆ 18–21, 18– 21ರಿಂದ ಮಣಿದು ಚಾಂಪಿಯನ್‌ಪಿನ್‌ನಿಂದ ಹೊರಬಿದ್ದರು.

ಐದನೇ ಶ್ರೇಯಾಂಕದ ಶ್ರೀಕಾಂತ್‌ ಅವರನ್ನು ಮಣಿಸಲು ಮಲೇಷ್ಯಾದ ಆಟಗಾರನಿಗೆ ಕೇವಲ 41 ನಿಮಿಷಗಳು ಸಾಕಾದವು.

‘ಪಂದ್ಯ ಗೆಲ್ಲಲು ಸಾಕಷ್ಟು ಅವಕಾಶಗಳು ಇದ್ದವು. ಆದರೆ ಷಟಲ್‌ ಮೇಲೆ ಸರಿಯಾಗಿ ನಿಯಂತ್ರಣ ಸಾಧಿಸಲು ಆಗಲಿಲ್ಲ. ಅನೇಕ ತಪ್ಪುಗಳನ್ನು ಎಸಗಿದ ಕಾರಣ ಜಯ ನನ್ನಿಂದ ದೂರವಾಯಿತು’ ಎಂದು ಶ್ರೀಕಾಂತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT