ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌: ಸಿಂಧು, ಲಕ್ಷ್ಯ ಮೇಲೆ ನಿರೀಕ್ಷೆ

Published 8 ಏಪ್ರಿಲ್ 2024, 16:18 IST
Last Updated 8 ಏಪ್ರಿಲ್ 2024, 16:18 IST
ಅಕ್ಷರ ಗಾತ್ರ

ನಿಂಗ್ಬೋ (ಚೀನಾ): ಪಿ.ವಿ. ಸಿಂಧು ಸೇರಿದಂತೆ ಭಾರತದ ಬ್ಯಾಡ್ಮಿಂಟನ್‌ಪಟುಗಳು  ಮಂಗಳವಾರ ಇಲ್ಲಿ ಆರಂಭವಾಗಲಿರುವ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಪದಕದ ಅಭಿಯಾನ ಆರಂಭಿಸುವರು. ಈ ಹಾದಿಯಲ್ಲಿ ಅವರು ವಿಶ್ವದ ಪ್ರಮುಖ ಆಟಗಾರರ ಸವಾಲು ಎದುರಿಸಬೇಕಿದೆ.

ವಿಶ್ವದ ಅಗ್ರಮಾನ್ಯ ಡಬಲ್ಸ್‌ ಜೋಡಿ ಹಾಗೂ ಹಾಲಿ ಚಾಂಪಿಯನ್‌ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೊನೆಯ ಕ್ಷಣದಲ್ಲಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಭಾರತದ ಸಿಂಗಲ್ಸ್‌ ಆಟಗಾರರ ಮೇಲೆ ಜವಾಬ್ದಾರಿ ಇಮ್ಮಡಿಯಾಗಿದೆ.

ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಭಾರತದ ಆಟಗಾರರಿಗೆ ರ‍್ಯಾಂಕಿಂಗ್‌ ಸುಧಾರಿಸಿಕೊಳ್ಳಲು ಕೊನೆಯ ಮಹತ್ವದ ಟೂರ್ನಿ ಇದಾಗಿದೆ.

ಎರಡು ಬಾರಿಯ ಒಲಿಂಪಿಕ್ಸ್‌ ಪದಕ ವಿಜೇತೆ ಸಿಂಧು ಲಯ ಕಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು ನಡೆದ ಫ್ರೆಂಚ್‌ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಅವರು, ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಚೆನ್ ಯುಫೀ ಅವರಿಗೆ ಪ್ರಬಲ ಸ್ಪರ್ಧೆ ನೀಡಿದ್ದರು. ಸ್ಪೇನ್‌ ಮಾಸ್ಟರ್‌ನಲ್ಲೂ ಅಂತಿಮ ಎಂಟರ ಘಟ್ಟ ಪ್ರವೇಶಿಸಿದ್ದ ಸಿಂಧು ಅವರು ಅಲ್ಪದರಲ್ಲೇ ಥಾಯ್ಲೆಂಡ್‌ನ ಸುಪಾನಿಡಾ ಕಟೆಥಾಂಗ್ ಅವರಿಗೆ ಮಣಿದಿದ್ದರು.

ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಸಿಂಧು ಇಲ್ಲಿ ಮೊದಲ ಸುತ್ತಿನಲ್ಲಿ ಮಲೇಷ್ಯಾದ ಗೋಹ್ ಜಿನ್ ವೀ ಅವರನ್ನು ಎದುರಿಸಲಿದ್ದಾರೆ. 33ನೇ ಕ್ರಮಾಂಕದ ಆಟಗಾರ್ತಿ ವಿರುದ್ಧ 4–1 ಗೆಲುವಿನ ದಾಖಲೆಯನ್ನು ಹೊಂದಿರುವ ಸಿಂಧು ಅವರಿಗೆ ನಂತರದ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಹಾನ್ ಯುಯೆ ಎದುರಾಗುವ ಸಾಧ್ಯತೆಯಿದೆ.

ಭಾರತದ ಮತ್ತೊಬ್ಬ ಸಿಂಗಲ್ಸ್‌ ಆಟಗಾರ್ತಿ ಆಕರ್ಷಿ ಕಶ್ಯಪ್‌ ಅವರು ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಆರಂಭಿಕ ಸುತ್ತಿನಲ್ಲಿ ಸೆಣಸಾಡುವರು.

ಪುರುಷರ ಸಿಂಗಲ್ಸ್‌ನಲ್ಲಿ ಉತ್ತಮ ಲಯದಲ್ಲಿರುವ ಲಕ್ಷ್ಯ ಸೇನ್‌ ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಶಿ ಯು ಕಿ (ಚೀನಾ) ಅವರ ಸವಾಲನ್ನು ಎದುರಿಸಬೇಕಿದೆ. ಫ್ರೆಂಚ್ ಓಪನ್ ಮತ್ತು ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ್ದ ಸೇನ್‌ ಇಲ್ಲೂ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ. 

ಏಳನೇ ಶ್ರೇಯಾಂಕದ ಎಚ್‌.ಎಸ್‌. ಪ್ರಣಯ್‌ ಅವರು ಚೀನಾದ ಲು ಗುವಾಂಗ್ ಜು ವಿರುದ್ಧ ಅಭಿಯಾನವನ್ನು ಆರಂಭಿಸಲಿದ್ದಾರೆ. ಈ ಬಾರಿಯ ಲಯ ಕಂಡುಕೊಳ್ಳುವಲ್ಲಿ ವಿಫಲವಾಗಿರುವ ಪ್ರಣಯ್‌ ಬಹುತೇಕ ಟೂರ್ನಿಗಳಲ್ಲಿ ಆರಂಭಿಕ ಸುತ್ತಿನಲ್ಲೇ ನಿರ್ಗಮಿಸಿದ್ದರು.

ವಿಶ್ವದ 27ನೇ ರ‍್ಯಾಂಕ್‌ನ ಕಿದಂಬಿ ಶ್ರೀಕಾಂತ್‌ ಅವರು ಮೊದಲ ಸುತ್ತಿನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಫೈನಲಿಸ್ಟ್‌, ಎರಡನೇ ಶ್ರೇಯಾಂಕದ ಆಂಥೋನಿ ಗಿಂಟಿಂಗ್ ಅವರನ್ನು ಎದುರಿಸಬೇಕಿದೆ. ಯುವ ಆಟಗಾರ ಪ್ರಿಯಾಂಶು ರಾಜಾವತ್‌ ಅವರು ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಕಣಕ್ಕೆ ಇಳಿಯುವರು.

ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT