ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Thailand Open Badminton| ಅಕಾನೆ ವಿರುದ್ಧ ಸಿಂಧು ಪಾರಮ್ಯ: ಸೆಮಿಫೈನಲ್‌ ಪ್ರವೇಶ

Last Updated 20 ಮೇ 2022, 12:31 IST
ಅಕ್ಷರ ಗಾತ್ರ

ಬ್ಯಾಂಕಾಕ್: ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಜಪಾನ್‌ನ ಅಕಾನೆ ಯಾಮಗುಚಿ ವಿರುದ್ಧ ಅಮೋಘ ಆಟವಾಡಿದ ಭಾರತದ ಪಿ.ವಿ.ಸಿಂಧು ಥಾಯ್ಲೆಂಡ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದುಕೊಂಡಿರುವ ಸಿಂಧು ಶುಕ್ರವಾರ ನಡೆದ ರೋಚಕ ಹಣಾಹಣಿಯಲ್ಲಿ ಎದುರಾಳಿಯನ್ನು21-15, 20-22, 21-13ರಲ್ಲಿ ಮಣಿಸಿದರು. ಎರಡನೇ ಶ್ರೇಯಾಂಕದ ಜಪಾನ್ ಆಟಗಾರ್ತಿಯನ್ನು ಮಣಿಸಲು ಅರನೇ ಶ್ರೇಯಾಂಕದ ಸಿಂಧು 51 ನಿಮಿಷ ತೆಗೆದುಕೊಂಡರು. ಫೈನಲ್‌ನಲ್ಲಿ ಅವರು ಒಲಿಂಪಿಕ್ ಚಾಂಪಿಯನ್, ಚೀನಾದ ಚೆನ್ ಯು ಫೀ ವಿರುದ್ಧ ಸೆಣಸುವರು.

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಸಿಂಧು ಮತ್ತು ಅಕಾನೆ ಮುಕಾಮುಖಿಯಾಗಿದ್ದರು. ಆ ಪಂದ್ಯದಲ್ಲಿ ಸರ್ವ್ ಮಾಡಲು ತಡ ಮಾಡಿದರು ಎಂದು ಆರೋಪಿಸಿ ಸಿಂಧು ಮೇಲೆ ಅಂಪೈರ್ ದಂಡ ಹೇರಿದ್ದರು. ಅವರ ಒಂದು ಪಾಯಿಂಟ್ ಕಡಿತಗೊಳಿಸಲಾಗಿತ್ತು.

ಈ ಮೊದಲು ಅಕಾನೆ ವಿರುದ್ಧ ಒಟ್ಟು 22 ಪಂದ್ಯಗಳನ್ನು ಆಡಿದ್ದ ಸಿಂಧು 13ರಲ್ಲಿ ಜಯ ಗಳಿಸಿದ್ದರು. ಶುಕ್ರವಾರ ಮತ್ತೊಮ್ಮೆ ಮಿಂಚಿದ ಸಿಂಧು ಕ್ರಾಸ್ ಕೋರ್ಟ್ ಹೊಡೆತ, ಡ್ರಾಪ್‌ಗಳು ಮತ್ತು ಸ್ಲೈಜ್‌ಗಳ ಮೂಲಕ ವಿಶ್ವ ಚಾಂಪಿಯನ್ ಆಟಗಾರ್ತಿಯನ್ನು ಕಾಡಿದರು.

ಪಂದ್ಯದ ಆರಂಭದಲ್ಲಿ ಉಭಯ ಆಟಗಾರ್ತಿಯರು ಸಮಬಲದ ಪೈಪೋಟಿ ನೀಡಿದರು. ಕ್ರಮೇಣ ಆಧಿಪತ್ಯ ಸ್ಥಾಪಿಸಿದ ಸಿಂಧು ವಿರಾಮದ ವೇಳೆ 11–9ರ ಮುನ್ನಡೆ ಸಾಧಿಸಿದರು. ನಂತರ ಮುನ್ನಡೆಯನ್ನು 19–14ಕ್ಕೆ ಹಿಗ್ಗಿಸಿ ಗೇಮ್ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲಿ ಸತತ 10 ಪಾಯಿಂಟ್ ಕಲೆ ಹಾಕಿದ ಸಿಂಧು 11–5ರ ಮುನ್ನಡೆ ಗಳಿಸಿದರು. ವಿರಾಮದ ನಂತರ ಸರ್ವಿಸ್‌ನಲ್ಲಿ ತಪ್ಪೆಸಗಿದ ಸಿಂಧು ಎದುರಾಳಿಗೆ ಪಾಯಿಂಟ್ ಬಿಟ್ಟುಕೊಟ್ಟರು. ಈ ಅವಕಾಶದ ನಂತರ ಭರ್ಜರಿ ತಿರುಗೇಟು ನೀಡಿದ ಅಕಾನೆ ಸತತ 8 ಪಾಯಿಂಟ್ ಗಳಿಸಿ ಮುನ್ನಡೆದರು. ಗೇಮ್‌ 16–16ರಲ್ಲಿ ಸಮ ಆದಾಗ ಕುತೂಹಲ ಹೆಚ್ಚಾಯಿತು. ಆದರೆ ಗೇಮ್‌ ಜಪಾನ್ ಆಟಗಾರ್ತಿಯ ಪಾಲಾಯಿತು.

ನಿರ್ಣಾಯಕ ಮೂರನೇ ಗೇಮ್‌ನ ಆರಂಭದಲ್ಲಿ 6 ಪಾಯಿಂಟ್‌ಗಳ ಮುನ್ನಡೆ ಗಳಿಸಿದ ಸಿಂಧು ಎದುರು ಅಕಾನೆ ಪರದಾಡಿದರು. ಬೆನ್ನು ನೋವು ಕಾಡಿದ್ದರಿಂದ ಬಲವಾದ ಹೊಡೆತಗಳಿಗೆ ಅವರು ಮುಂದಾಗಲಿಲ್ಲ. ಸಿಂಧು 15–11ರ ಮುನ್ನಡೆಯಲ್ಲಿದ್ದಾಗ ಅಕಾನೆ ನಿರಂತರ ತಪ್ಪುಗಳನ್ನು ಎಸಗಿದರು. ಈ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಂಡ ಭಾರತದ ಆಟಗಾರ್ತಿ ಸ್ಮ್ಯಾಷ್‌ಗಳನ್ನು ಸಿಡಿಸಿ ಗೇಮ್ ಮತ್ತು ಪಂದ್ಯ ಗೆದ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT