ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನ್‌ ಓಪ‍ನ್‌ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್, ಲಕ್ಷ್ಯ ಮೇಲೆ ನಿರೀಕ್ಷೆ

ಜರ್ಮನ್‌ ಓಪ‍ನ್‌ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ:ಕಣಕ್ಕೆ ಸೈನಾ ನೆಹ್ವಾಲ್‌
Last Updated 7 ಮಾರ್ಚ್ 2022, 13:10 IST
ಅಕ್ಷರ ಗಾತ್ರ

ಮುಲ್ಹೆಮ್‌ ಆ್ಯನ್ ಡರ್‌ ರುಹ್ರ್‌(ಜರ್ಮನಿ): ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು, ವಿಶ್ವ ಚಾಂಪಿಯನ್‌ಷಿಪ್‌ ಪದಕ ಗೆದ್ದಿರುವ ಕಿದಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಅವರು ಮಂಗಳವಾರ ಆರಂಭವಾಗುವ ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.

ಸೈಯದ್ ಮೋದಿ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಸಿಂಧು ಅವರು ಸುಲಭವಾಗಿ ಪ್ರಶಸ್ತಿ ಗೆದ್ದಿದ್ದರು. ಜನವರಿಯಲ್ಲಿ ನಡೆದ ಇಂಡಿಯಾ ಓಪನ್‌ನಲ್ಲಿಲಕ್ಷ್ಯ, ತಮ್ಮ ಚೊಚ್ಚಲ ಸೂಪರ್ 500 ಟ್ರೋಫಿಗೆ ಮುತ್ತಿಕ್ಕಿದ್ದರು. ಶ್ರೀಕಾಂತ್ ಅವರಿಗೆ ಕೋವಿಡ್‌–19 ಸೋಂಕು ತಗುಲಿದ ಹಿನ್ನೆಲೆಯಲ್ಲಿ ಇಂಡಿಯಾ ಓಪನ್‌ ಟೂರ್ನಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ.

2019ರಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ನಂತರ ಪ್ರಶಸ್ತಿ ಬರ ಎದುರಿಸಿದ್ದ ಸಿಂಧು ಅವರಿಗೆ ಸೈಯದ್‌ ಮೋದಿ ಟೂರ್ನಿಯ ಟ್ರೋಫಿಯು ಒತ್ತಡವನ್ನು ಸ್ವಲ್ಪ ಕಡಿಮೆ ಮಾಡಿದೆ. ಆದರೆ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನಂತಹ ಮಹತ್ವದ ಟೂರ್ನಿಗಳು ಈ ವರ್ಷವೇ ನಡೆಯಲಿರುವುದರಿಂದಅವರು ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ.

ಏಳನೇ ಶ್ರೇಯಾಂಕದ ಸಿಂಧು ಈ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ, ಥಾಯ್ಲೆಂಡ್‌ ಆಟಗಾರ್ತಿ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಅಭಿಯಾನವನ್ನು ಆರಂಭಿಸಲಿದ್ದಾರೆ. ಈ ವಿಭಾಗದಲ್ಲಿ ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ಸೈನಾ ನೆಹ್ವಾಲ್ ಕೂಡ ಇದ್ದು, ಮೊದಲ ಪಂದ್ಯದಲ್ಲಿ ಸಿಂಗಪುರದ ಯೊ ಜಿಯಾ ಮಿನ್ ಎದುರು ಆಡುವರು.

ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಲಕ್ಷ್ಯ ಸೇನ್‌ ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಕಾಂತಫೊನ್‌ ವಾಂಗ್‌ಚರೊಯಿನ್ ಎದುರು ಕಣಕ್ಕಿಳಿಯುವರು. ಶ್ರೀಕಾಂತ್ ಅವರಿಗೆ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಬ್ರೈಸ್‌ ಲೆವರ್ಡೆಜ್ ಸವಾಲು ಎದುರಾಗಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್‌, ಪರುಪಳ್ಳಿ ಕಶ್ಯಪ್‌ ಕೂಡ ಅದೃಷ್ಟಪರೀಕ್ಷಿಸಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ, ಧೃವ ಕಪಿಲ– ಎಂ.ಆರ್‌. ಅರ್ಜುನ್‌, ಮಹಿಳಾ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ– ಎನ್‌. ಸಿಕ್ಕಿರೆಡ್ಡಿ, ತ್ರೀಶಾ ಜೋಲಿ– ಗಾಯತ್ರಿ ಗೋಪಿಚಂದ್‌ ಆಡಲಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ಇಶಾನ್ ಭಟ್ನಾಗರ್‌– ತನಿಶಾ ಕ್ರಾಸ್ತೊ, ಸಾಯಿ ಪ್ರತೀಕ್‌ ಕೆ.– ಎನ್‌. ಸಿಕ್ಕಿರೆಡ್ಡಿ ಕಣಕ್ಕಿಳಿಯುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT