ನ್ಯೂಯಾರ್ಕ್: ಇಗಾ ಶ್ವಾಂಟೆಕ್ ಮತ್ತು ಯಾನಿಕ್ ಸಿನ್ನರ್ ಅವರು ತಮ್ಮ ಅಗ್ರಪಟ್ಟಕ್ಕೆ ತಕ್ಕಂತೆ ಅಧಿಕಾರಯುತ ಆಟದ ಪ್ರದರ್ಶನ ನೀಡಿ ಅಮೆರಿಕ ಓಪನ್ ಟೆನಿಸ್ ಟೂರ್ನಿ ಮೂರನೇ ಸುತ್ತಿಗೆ ದಾಪುಗಾಲಿಟ್ಟರು. ಆದರೆ ಮಾಜಿ ಚಾಂಪಿಯನ್ನರಾದ ಕಾರ್ಲೊಸ್ ಅಲ್ಕರಾಜ್ ಮತ್ತು ನವೊಮಿ ಒಸಾಕಾ ಅವರ ಸವಾಲು ಬೇಗ ಅಂತ್ಯಗೊಂಡಿತು.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಬೊಟಿಕ್ ಫನ್‌ಡ ಶಾನ್‌ಶೋಪ್ 6–1, 7–5, 6–4 ರಿಂದ ಮೂರನೇ ಶ್ರೇಯಾಂಕದ ಅಲ್ಕರಾಜ್ ಅವರನ್ನು ಮಣಿಸಿದರು. ಬೊಟಿಕ್ ಅವರು ವಿಶ್ವ ಕ್ರಮಾಂಕದಲ್ಲಿ 74ನೇ ಸ್ಥಾನದಲ್ಲಿದ್ದಾರೆ. ಈ ಸೋಲಿನೊಡನೆ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಅಲ್ಕರಾಜ್ ಅವರ ಸತತ 15 ಪಂದ್ಯಗಳ ಗೆಲುವಿನ ಸರಪಣಿ ತುಂಡಾಯಿತು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಶ್ವಾಂಟೆಕ್ ಹೆಚ್ಚಿನ ಪ್ರಯಾಸವಿಲ್ಲದೇ 6–0, 6–1 ರಿಂದ ಅರ್ಹತಾ ಸುತ್ತಿನಿಂದ ಬಂದಿದ್ದ ಜಪಾನ್ ಆಟಗಾರ್ತಿ ಇನಾ ಶಿಬರಹಾ ಅವರನ್ನು ಮಣಿಸಿದರು. 2022ರ ಚಾಂಪಿಯನ್ ಶ್ವಾಂಟೆಕ್ ಕೇವಲ 65 ನಿಮಿಷಗಳಲ್ಲಿ ಪಂದ್ಯ ಮುಗಿಸಿದರು. ಮೊದಲ ಸುತ್ತಿನ ಪಂದ್ಯದ ಎರಡನೇ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ಗೆಲ್ಲಲು ಅವರು ಇದಕ್ಕಿಂತ ಹೆಚ್ಚು ಸಮಯ (72 ನಿಮಿಷ) ತೆಗೆದುಕೊಂಡಿದ್ದರು!
‘ಇಂದು ಉತ್ತಮ ಲಯದಲ್ಲಿದ್ದ ಭಾವನೆ ಮೂಡಿತು’ ಎಂದು ಶ್ವಾಂಟೆಕ್ ಪ್ರತಿಕ್ರಿಯಿಸಿದರು. ‘ಮೊದಲ ಪಂದ್ಯದಲ್ಲಿ ಸ್ವಲ್ಪ ಒತ್ತಡದಲ್ಲಿದ್ದೆ’ ಎಂದೂ ಹೇಳಿದರು.
ಇದಕ್ಕೆ ಮೊದಲು, ಒಂದು ಗಂಟೆ 39 ನಿಮಿಷಗಳವರೆಗೆ ಬೆಳೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸಿನ್ನರ್ 6–4, 6–2, 6–2 ರಿಂದ ಅಲೆಕ್ಸ್ ಮೈಕೆಲ್ಸನ್ ಅವರನ್ನು ಸೋಲಿಸಿದರು. ಮೊದಲ ಸೆಟ್‌ನಲ್ಲಿ ಒಂದು ಸೆಟ್ ಕಳೆದುಕೊಂಡಿದ್ದ ಸಿನ್ನರ್ ಎರಡನೇ ಸುತ್ತಿನಲ್ಲಿ ಪರದಾಡಲಿಲ್ಲ. ಇಟಲಿಯ ಆಟಗಾನಿಗೆ ಇದು ಈ ಋತುವಿನಲ್ಲಿ ದೊರೆತ 50ನೇ ಜಯ.
ಸಿನ್ನರ್ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯಾದ ಕ್ರಿಸ್ಟೋಫರ್ ಒ‘ಕಾನೆಲ್ ಅವರನ್ನು ಶನಿವಾರ ಎದುರಿಸಲಿದ್ದಾರೆ.
ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲೇ ಗುರುವಾರ ರಾತ್ರಿ ನಡೆದ ಇನ್ನೊಂದು ಪಂದ್ಯದಲ್ಲಿ, ಎರಡು ಬಾರಿಯ ಚಾಂಪಿಯನ್ ಒಸಾಕಾ ಫೋರ್‌ಹ್ಯಾಂಡ್ ಹೊಡೆತಗಳಲ್ಲಿ ತಪ್ಪುಗಳನ್ನು ಮಾಡುತ್ತ ಹೊರಬಿದ್ದರು. ಕರೋಲಿನಾ ಮುಚೋವಾ 6–4, 7–5 ರಿಂದ ಜಪಾನ್ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿದರು.
ಐದನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೇವ್ ಮತ್ತು ಹತ್ತನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೊರ್ ಅವರೂ ಮುಂದಿನ ಸುತ್ತಿಗೆ ದಾಪುಗಾಲಿಟ್ಟರು. 2021ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದ ಮೆಡ್ವೆಡೇವ್ 6-3,6-2, 7-6 (7–5) ರಿಂದ ಫ್ಯಾಬಿಯನ್ ಮರೋಝ್‌ಸನ್ ಅವರನ್ನು ಮಣಿಸಿದರು.
ಅಲೆಕ್ಸ್ ಮಿನಾರ್ ಮುಂದಿನ ಸುತ್ತಿನಲ್ಲಿ ಡೇನಿಯಲ್ ಇವಾನ್ಸ್ ಅವರನ್ನು ಎದುರಿಸಲಿದ್ದಾರೆ. ಇವಾನ್ಸ್ 6–4, 6–3, 6–3 ರಿಂದ ಅರ್ಜೆಂಟೀನಾದ ಮರಿಯಾನೊ ನೊವೊನ್ ಅವರನ್ನು ಮಣಿಸಿದರು. ಈ ಪಂದ್ಯ 2 ಗಂಟೆ 37 ನಿಮಿಷ ನಡೆಯಿತು. ಇವಾನ್ಸ್ ಮೊದಲ ಸುತ್ತಿನ ಪಂದ್ಯವನ್ನು (ಕರೆನ್ ಕಚನೋವ್) ವಿರುದ್ಧ ಗೆಲ್ಲಲು 5 ಗಂಟೆ 35 ನಿಮಿಷ ತೆಗೆದುಕೊಂಡಿದ್ದು ಈ ಟೂರ್ನಿಯಲ್ಲಿ ದಾಖಲೆಯಾಗಿತ್ತು.
ಇಟಲಿಯ ಆಟಗಾರ್ತಿ ಜಾಸ್ಮಿನ್ ಪಾವೊಲಿನಿ, ಆರನೇ ಶ್ರೇಯಾಂಕದ ಜೆಸಿಕಾ ಪೆಗುಲಾ, 15ನೇ ಶ್ರೇಯಾಂಕದ ಅನ್ನಾ ಕಲಿನ್‌ಸ್ಕಾಯಾ, 16ನೇ ಶ್ರೇಯಾಂಕದ ಲಿಯುಡ್ಮಿಲಾ ಸ್ಯಾಮ್ಸನೋವಾ ಮತ್ತು 18ನೇ ಶ್ರೇಯಾಂಕದ ಡಯಾನಾ ಶ್ನೇಯ್ಡರ್ ಕೂಡ ಮೂರನೇ ಸುತ್ತಿಗೆ ಪ್ರವೇಶಿಸಿದರು.
ಆದರೆ ನಾಲ್ಕನೇ ಶ್ರೇಯಾಂಕದ ಎಲೆನಾ ರಿಬಾಕಿನಾ ಟೂರ್ನಿಯಿಂದ ಹಿಂದೆಸರಿದರು. 2022ರ ವಿಂಬಲ್ಡನ್ ಚಾಂಪಿಯನ್ ಆಗಿರುವ ರಿಬಾಕಿನಾ ಕೆಳಬೆನ್ನಿನ ನೋವಿನಿಂದ ಎರಡನೇ ಸುತ್ತಿನ ಪಂದ್ಯ ಆಡಲಿಲ್ಲ. ಹೀಗಾಗಿ ಫ್ರಾನ್ಸ್‌ನ ಕ್ವಾಲಿಫೈಯರ್ ಜೆಸಿಕಾ ಪೊಂಚೆಟ್ ಮುನ್ನಡೆ ಪಡೆದರು.
ಏಳನೇ ಶ್ರೇಯಾಂಕದ ಹರ್ಬರ್ಟ್ ಹುರ್ಕಾಝ್ ಮತ್ತು 16ನೇ ಶ್ರೇಯಾಂಕದ ಸೆಬಾಸ್ಟಿಯನ್ ಕೋರ್ಡಾ ಹೊರಬಿದ್ದರು. ಅವರು ಕ್ರಮವಾಗಿ ಜೋರ್ಡಾನ್ ಥಾಮ್ಸನ್ ಮತ್ತು ಥಾಮಸ್ ಮಚಾಕ್ ಎದುರು ಗಂಟುಮೂಟೆ ಕಟ್ಟಬೇಕಾಯಿತು.
ಭಾರತದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರು ಅಮೆರಿಕ್ ಓಪನ್ ಟೆನಿಸ್ ಟೂರ್ನಿ ಎರಡನೇ ಸುತ್ತಿಗೆ ಮುನ್ನಡೆದರು. ಈ ಜೋಡಿ ಗುರುವಾರ ರಾತ್ರಿ 64 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಸ್ಯಾಂಡರ್ ಅರೆಂಡ್ಸ್– ರಾಬಿನ್ ಹೇಸ್ ಜೋಡಿಯನ್ನು 6–3 7–5 ರಿಂದ ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.