ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್‌ ಸೆಸಿಲ್‌’’ಗೆ ಕಿಂಗ್‌ಫಿಷರ್ ಡರ್ಬಿ ಕಿರೀಟ

Last Updated 15 ಜುಲೈ 2018, 17:51 IST
ಅಕ್ಷರ ಗಾತ್ರ

ಬೆಂಗಳೂರು: ಟ್ರೇನರ್‌ ಪದ್ಮನಾಭನ್‌ ತರಬೇತಿಯಲ್ಲಿ ಪಳಗಿರುವ ‘ಸರ್‌ ಸೆಸಿಲ್‌’ ಭಾನುವಾರ ನಡೆದ ’ಕಿಂಗ್‌ಫಿಷರ್‌ ಅಲ್ಟ್ರಾ ಡರ್ಬಿ ಬೆಂಗಳೂರು’ ರೇಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಸೇರಿದ್ದ 15 ಸಾವಿರಕ್ಕೂ ಹೆಚ್ಚು ರೇಸ್‌ಪ್ರಿಯರ ಸಮ್ಮುಖದಲ್ಲಿ ನಡೆದ ಸ್ಪರ್ಧೆಯಲ್ಲಿ ಜಾಕಿ ಪಿ. ಟ್ರೇವರ್ ಅವರು ಸರ್‌ ಸಸಿಲ್ ಅಶ್ವವನ್ನು ಗುರಿ ಮುಟ್ಟಿಸಿ ಮೊದಲಿಗರಾದರು. ‘ಸರ್‌ ಸೆಸಿಲ್‌’ 2000 ಮೀಟರ್ಸ್‌ ದೂರದ ಡರ್ಬಿಯನ್ನು 2 ನಿಮಿಷ 3.893 ಸೆಕೆಂಡುಗಳಲ್ಲಿ ಗೆದ್ದುಕೊಂಡಿದೆ.

ಸಾರಾಯ್‌ನಾಗ ರೇಸಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಒಡೆತನಕ್ಕೆ ಸೇರಿರುವ ‘ಸರ್‌ ಸೆಸಿಲ್‌’ ಮೊದಲನೇ ಬಹುಮಾನ 1 ಕೋಟಿ, 48.5 ಲಕ್ಷ ರೂಪಾಯಿ ಪಡೆಯಿತು. ಮೂರು ಲಕ್ಷ ರೂಪಾಯಿ ಮೌಲ್ಯದ ಟ್ರೋಫಿಯನ್ನು ಗೆದ್ದಿತು.

ಏಳು ಕುದುರೆಗಳು ಭಾಗವಹಿಸಿದ್ದ ಈ ಡರ್ಬಿಯಲ್ಲಿ ‘ಸರ್‌ ಸೆಸಿಲ್‌’ ಮತ್ತು ’ಸ್ಟಾರ್‌ ಸುಪೀರಿಯರ್‌’ ಮೊದಲನೇ ಮತ್ತು ಎರಡನೇ ಫೇವರಿಟ್‌ ಆಗಿದ್ದವು. ಉಳಿದ ಸ್ಪರ್ಧಿಗಳು ಬೆಟ್ಟಿಂಗ್‌ನಲ್ಲಿ ಗಮನ ಸಳೆಯಲು ವಿಫಲವಾಗಿದ್ದವು.ಡರ್ಬಿಗೆ ಚಾಲನೆ ದೊರೆಕಿದ ಕೂಡಲೇ ’ಪೋಸೈಡನ್‌’ ಮನ್ನುಗ್ಗಿ ಲೀಡ್‌ ಪಡೆದಿತ್ತು. ಇದರ ಹಿಂದೆ ’ಸ್ಟಾರ್‌ ಸುಪೀರಿಯರ್‌’, ‘ಸರ್‌ ಸೆಸಿಲ್‌’, ‘ವ್ಯಾನ್‌ ಡೈಕ್‌’, ‘ರಿಕ್ಕಿ ಟಿಕ್ಕಿ ಟಾವಿ’, ’ಪಂಜಾಬಿ ಗರ್ಲ್‌’ ಮತ್ತು ‘ಹೋಮ್‌ ಆಫ್‌ ದಿ ಬ್ರೇವ್‌’ ಕೊನೆಯ ತಿರುವಿನವರೆಗೂ ಇದೇ ಕ್ರಮವಾಗಿ ಓಡುತ್ತಿದ್ದವು.

ಕೊನೆಯ ಹಂತದ ನೇರ ಓಟದಲ್ಲಿ 400 ಮೀಟರ್ಸ್‌ ಇರುವಂತೆಯೇ ‘ಸ್ಟಾರ್‌ ಸುಪೀರಿಯರ್‌’ ರಭಸದಿಂದ ಮುನ್ನುಗ್ಗಿ ಲೀಡ್‌ ಪಡೆಯಿತು. ನಂತರದ ಕೆಲವೇ ಕ್ಷಣಗಳಲ್ಲಿ ಶರವೇಗದಿಂದ ಮುನ್ನುಗ್ಗಿದ ‘ಸರ್‌ ಸೆಸಿಲ್‌’ ಎಲ್ಲ ಕುದುರೆಗಳನ್ನೂ ಹಿಂದಿಕ್ಕಿತು. ನಂತರ ಸುಲಭವಾಗಿ ಮೂರು ಲೆಂಗ್ತ್‌ಗಳ ಜಯ ಸಾಧಿಸಿತು.

‘ಸ್ಟಾರ್‌ ಸುಪೀರಿಯರ್‌’ ನಿಂದ ತೀವ್ರ ಹೋರಾಟ ನಿರೀಕ್ಷಿಸಲಾಗಿತ್ತು.ಆದರೆ, ಈ ಕುದುರೆಯು ಹೆಚ್ಚು ಪ್ರತಿರೋಧ ಒಡ್ಡದೆ ಎರಡನೇ ಸ್ಥಾನ ಪಡೆಯಿತು. ‘ವ್ಯಾನ್‌ ಡೈಕ್‌’ ಮತ್ತು ‘ಪಂಜಾಬಿ ಗರ್ಲ್‌‘ ಕ್ರಮವಾಗಿ 3 ಮತ್ತು 4ನೇ ಸ್ಥಾನವನ್ನು ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT