ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಕಾಂತ್‌ಗೆ ಮತ್ತೆ ನಿರಾಸೆ, ಉನ್ನತಿ ಮುನ್ನಡೆ

ಸೈಯ್ಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ
Published 29 ನವೆಂಬರ್ 2023, 14:48 IST
Last Updated 29 ನವೆಂಬರ್ 2023, 14:48 IST
ಅಕ್ಷರ ಗಾತ್ರ

ಲಖನೌ: ಭಾರತದ ಕಿದಂಬಿ ಶ್ರೀಕಾಂತ್ ಅವರು ಸೈಯ್ಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಮೊದಲ ಸುತ್ತಿನಲ್ಲೇ ಕೊರಿಯಾದ ಆಟಗಾರನಿಗೆ ನೇರ ಸೆಟ್‌ಗಳಲ್ಲಿ ಮಣಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಹದಿಹರೆಯದ ಆಟಗಾರ್ತಿ ಉನ್ನತಿ ಹೂಡಾ, ಸ್ವದೇಶದ ಆಕರ್ಷಿ ಕಶ್ಯಪ್ ಅವರನ್ನು ಆಘಾತ ನೀಡಿ ಎರಡನೇ ಸುತ್ತನ್ನು ಪ್ರವೇಶಿಸಿದರು.

ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ ಶ್ರೀಕಾಂತ್‌ 21–23, 8–23ರಲ್ಲಿ ಕೊರಿಯಾದ ಚಿಯಾ ಹಾವೊ ಲಿ ಅವರೆದುರು ಸೋಲನುಭವಿಸಿದರು. ಇದರೊಂದಿಗೆ ಈ ವರ್ಷ ಅಂತರರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಶ್ರೀಕಾಂತ್ ಅವರ ನಿರಾಶಾದಾಯಕ ಓಟ ಮುಂದುವರಿಯಿತು.

ದೇಶದ ಉದಯೋನ್ಮುಖ ಆಟಗಾರ್ತಿಯರಲ್ಲಿ ಒಬ್ಬರಾದ 16 ವರ್ಷದ ಉನ್ನತಿ 15–21 21–19, 21–18 ರಿಂದ ಆಕರ್ಷಿ ಅವರನ್ನು ಸೋಲಿಸಲು 77 ನಿಮಿಷ ತೆಗೆದುಕೊಂಡರು. ಈ ಟೂರ್ನಿ ಬಿಡಬ್ಲ್ಯುಎಫ್‌ ಸೂಪರ್‌ 300 ಮಟ್ಟದ್ದು.

ರೋಹ್ತಕ್‌ನ ಉನ್ನತಿ ಮುಂದಿನ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್‌, ಜಪಾನ್‌ನ ನೊಝೊಮಿ ಓಕುಹಾರ ಅವರನ್ನು ಎದುರಿಸಲಿದ್ದಾರೆ. ನೊಝೊಮಿ ಮೊದಲ ಸುತ್ತಿನಲ್ಲಿ 18–21, 21–17, 21–10 ರಿಂದ ಭಾರತದ ಮಾಳವಿಕಾ ಬನ್ಸೋಡ್ ಅವರನ್ನು ಹಿಮ್ಮೆಟ್ಟಿಸಿದ್ದರು.

ಅನುಪಮಾ ಉಪಾಧ್ಯಾಯ ಮತ್ತು ಅಶ್ಮಿತಾ ಚಲಿಹಾ ಅವರೂ ಮೊದಲ ಸುತ್ತನ್ನು ದಾಟಿದರು. ಅನುಪಮಾ 14–21, 21–15, 21–9 ರಿಂದ ಡೆನ್ಮಾರ್ಕ್‌ನ ಅಮೇಲಿ ಶುಲ್ಜ್‌ ಅವರನ್ನು, ಅಶ್ಮಿತಾ 21–15, 21–15 ರಿಂದ ಉಕ್ರೇನ್‌ನ ಪೊಲಿನಾ ಬುಹ್ರೊವಾ ಅವರನ್ನು ಮಣಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಆರ್ಲಿನ್ಸ್‌ ಮಾಸ್ಟರ್ಸ್‌ ವಿಜೇತ ಪ್ರಿಯಾಂಶು ರಾಜಾವತ್, ಡೆನ್ಮಾರ್ಕ್‌ ಮಾಸ್ಟರ್ಸ್ ವಿಜೇತ ಕಿರಣ್ ಜಾರ್ಜ್ ಅವರೂ ಎರಡನೇ ಸುತ್ತನ್ನು ಪ್ರವೇಶಿಸಿದರು.

ಪ್ರಿಯಾಂಶು 21–17, 21–19 ರಿಂದ ಕಜಕಸ್ತಾನದ ದಿಮಿಟ್ರಿ ಪನಾರಿನ್ ಅವರನ್ನು, ಕಿರಣ್‌ ಜಾರ್ಜ್ 21–16, 14–21, 21–13 ರಿಂದ ಚಿರಾಗ್‌ ಸೇನ್‌ (ಲಕ್ಷ್ಯ ಸೇನ್ ಸೋದರ) ಅವರನ್ನು ಸೋಲಿಸಿದರು. ಸತೀಶ್‌, ಚೀನಾ ತೈಪೆಯ ಹುವಾಂಗ್‌ ಯು ಕೈ ವಿರುದ್ಧ ಜಯಗಳಿಸಿದರು. ಪ್ರಿಯಾಂಶು ಮುಂದಿನ ಸುತ್ತಿನಲ್ಲಿ ಸತೀಶ್ ಅವರನ್ನು ಎದುರಿಸಲಿದ್ದಾರೆ. ಕಿರಣ್‌, ಚಿಯಾ ವಿರುದ್ಧ ಆಡಲಿದ್ದಾರೆ.

ಆದರೆ ಸಮೀರ್‌ ವರ್ಮಾ 9–21, 21–17, 17–21 ರಲ್ಲಿ ಚೀನಾ ತೈಪೆಯ ವಾಂಗ್‌ ತ್ಸು ವೀ ಎದುರು ಸೋಲನುಭವಿಸಿದರು.

ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಅಶ್ವಿನಿ ಪೊನ್ನಪ್ಪ– ತನಿಶಾ ಕ್ರಾಸ್ಟೊ ಜೋಡಿ 21–8, 21–9 ರಿಂದ ಸ್ವದೇಶದ ಸಮೃದ್ಧಿ ಸಿಂಗ್‌– ಸೊನಾಲಿ ಸಿಂಗ್ ಅವರನ್ನು ಸೋಲಿಸಿತು. ಅಶ್ವಿನಿ– ತನಿಶಾ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಭಾರತದವರೇ ಆದ ರುತುಪರ್ಣಾ ಪಂಡಾ– ಶ್ವೇತಪರ್ಣಾ ಪಂಡಾ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT