ಪ್ಯಾರಿಸ್: ಭಾರತದ ಜಾವೆಲಿನ್ ಥ್ರೋ ತಾರೆ ಸುಮಿತ್ ಅಂಟಿಲ್ ಸೋಮವಾರ ತಡರಾತ್ರಿ ನಡೆದ ಎಚ್64 ವಿಭಾಗದ ಸ್ಪರ್ಧೆಯಲ್ಲಿ ಈಟಿಯನ್ನು 70.59 ಮೀಟರ್ ದೂರ ಎಸೆದು ಪಾರಾಲಿಂಪಿಕ್ಸ್ ದಾಖಲೆಯೊಂದಿಗೆ ‘ಚಾಂಪಿಯನ್ ಪಟ್ಟ’ವನ್ನು ಉಳಿಸಿಕೊಂಡರು.
ಹರಿಯಾಣದ ಸೋನಿಪತ್‌ನ 26 ವರ್ಷ ವಯಸ್ಸಿನ ಅಂಟಿಲ್ ಅವರು ಟೋಕಿಯೊದಲ್ಲಿ ಸ್ಥಾಪಿಸಿದ್ದ 68.55 ಮೀಟರ್‌ಗಳ ಪ್ಯಾರಾಲಿಂಪಿಕ್ ದಾಖಲೆಯನ್ನು ಉತ್ತಮಗೊಳಿಸಿದರು. ಈ ವಿಭಾಗದಲ್ಲಿ ವಿಶ್ವ ದಾಖಲೆ ಕೂಡ ಅವರ ಹೆಸರಿನಲ್ಲಿದೆ. ಹಾಂಗ್‌ಝೌ ಏಷ್ಯನ್ ಕೂಟದಲ್ಲಿ ಅವರು 73.29 ಮೀಟರ್ ಸಾಧನೆ ಮಾಡಿದ್ದರು.
ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ ಎರಡನೇ ಚಿನ್ನ ಗೆದ್ದ ಭಾರತದ ಎರಡನೇ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ಮೊದಲು ಶೂಟರ್ ಅವನಿ ಲೇಖರಾ ಸತತ ಚಿನ್ನದ ಸಾಧನೆ ಮಾಡಿದ್ದಾರೆ.
ಅಂಟಿಲ್ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಷಾಟ್‌ಪಟ್ ಅಥ್ಲೀಠ್ ಭಾಗ್ಯಶ್ರೀ ಜಾಧವ್ ಅವರೊಂದಿಗೆ ಭಾರತದ ಧ್ವಜಧಾರಿಯಾಗಿದ್ದರು. 2015ರಲ್ಲಿ ಸಂಭವಿಸಿದ ರಸ್ತೆ ಅಪಘಾತಲ್ಲಿ ಅಂಟಿಲ್ ಅವರು ಒಂದು ಕಾಲನ್ನು ಕಳೆದುಕೊಂಡಿದ್ದರು.