ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್‌ಷಿಪ್: ಸಿಂಚನಾ, ಪ್ರದೀಪ್ ಕರ್ನಾಟಕದ ಭರವಸೆ

ಪುರುಷ, ಬಾಲಕರ ವಿಭಾಗದಲ್ಲಿ ತಮಿಳುನಾಡು ಪಾರಮ್ಯ
Published : 2 ಜೂನ್ 2023, 16:06 IST
Last Updated : 2 ಜೂನ್ 2023, 16:06 IST
ಫಾಲೋ ಮಾಡಿ
Comments

ಮಂಗಳೂರು: ತಮಿಳುನಾಡು ಸರ್ಫರ್‌ಗಳ ಪ್ರಬಲ ಪೈಪೋಟಿ ಮೀರಿನಿಂತ ಮಂಗಳೂರು ಸರ್ಫ್ ಕ್ಲಬ್‌ನ ಸಿಂಚನಾ ಗೌಡ ಮತ್ತು ಮಂತ್ರ ಸರ್ಫ್ ಕ್ಲಬ್‌ನ ಪ್ರದೀಪ್ ಪೂಜಾರ ಅವರು ಮೂಲ್ಕಿ ಸಮೀಪದ ಸಸಿಹಿತ್ಲು ಕಡಲಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪಾಳಯದಲ್ಲಿ ಭರವಸೆ ಮೂಡಿಸಿದರು. 

ಮೂಲ್ಕಿಯ ಮಂತ್ರ ಸರ್ಫ್ ಕ್ಲಬ್ ಆಶ್ರಯದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಶುಕ್ರವಾರ ಸಿಂಚನಾ ಮತ್ತು ಪ್ರದೀಪ್ ಪೂಜಾರ ಕ್ರಮವಾಗಿ ಮಹಿಳೆಯರ ಮತ್ತು 16 ವರ್ಷದೊಳಗಿನ ಬಾಲಕರ ವಿಭಾಗದ ಫೈನಲ್ ಪ್ರವೇಶಿಸಿದರು.

ಎರಡನೇ ದಿನ ತಮಿಳುನಾಡು ಸರ್ಫರ್‌ಗಳು ಪಾರಮ್ಯ ಮೆರೆದರು. ಪುರುಷರ ವಿಭಾಗದಲ್ಲಿ ಶ್ರೀಕಾಂತ್ ಡಿ ಅತ್ಯಧಿಕ 13 ಪಾಯಿಂಟ್ಸ್‌ ಗಳಿಸಿದರು. ಮೊದಲ ದಿನ ಮಿಂಚು ಹರಿಸಿದ ಕಿಶೋರ್ ಕುಮಾರ್ ಬಾಲಕರ ವಿಭಾಗದಲ್ಲಿ 11.66 ಪಾಯಿಂಟ್ ಕಲೆ ಹಾಕಿ ಶುಕ್ರವಾರವೂ ಗಮನ ಸೆಳೆದರು. ಮಹಿಳೆಯರ ವಿಭಾಗದಲ್ಲಿ ಗೋವಾದ ಸುಗರ್‌ ಶಾಂತಿ ಅತ್ಯಧಿಕ 10.17 ಪಾಯಿಂಟ್‌ ಗಳಿಸಿ ಫೈನಲ್‌ ಪ್ರವೇಶಿಸಿದರು. ತಮಿಳುನಾಡಿನ ಕಮಲಿ ಮೂರ್ತಿ 8.50 ಪಾಯಿಂಟ್ ಗಳಿಸಿದರು. 5.17 ಪಾಯಿಂಟ್ ಗಳಿಸಿದ ಸಿಂಚನಾ ಗೌಡ ಜೊತೆ ಸೃಷ್ಟಿ ಸೆಲ್ವಂ (4.74) ಕೂಡ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದರು. ಕಮಲಿ 16 ವರ್ಷದೊಳಗಿನ ಬಾಲಕಿಯರ ಫೈನಲ್ ಸ್ಪರ್ಧೆಯಲ್ಲೂ ಕಾಣಿಸಿಕೊಳ್ಳಲಿದ್ದಾರೆ.  

ನಾಕೌಟ್ ಹಂತಕ್ಕಾಗಿ ಪ್ರಬಲ ಪೈಪೋಟಿ

ಪುರುಷರ ವಿಭಾಗದ ನಾಕೌಟ್ ಹಂತದಲ್ಲಿ ಸ್ಥಾನ ಗಳಿಸಲು 28 ಸರ್ಫರ್‌ಗಳು ಶನಿವಾರ ಬ್ರಬಲ ಪೈಪೋಟಿಗೆ ಇಳಿದಿದ್ದರು. ಶ್ರೀಕಾಂತ್ ಮತ್ತು ಕಿಶೋರ್ ಕುಮಾರ್ ಪಾಯಿಂಟ್‌ ಗಳಿಕೆಯಲ್ಲಿ ಎರಡಂಕಿ ಮೊತ್ತ ದಾಟಿದರೆ, ಸೂರ್ಯ ಪಿ (8.20 ಪಾಯಿಂಟ್ಸ್‌), ಮಣಿಕಂಠನ್ ಎಂ (7.03), ರಾಹುಲ್ ಪನೀರ್‌ ಸೆಲ್ವಂ (6.97) ಹಾಗೂ ಸೆಲ್ವಂ ಎಂ (6.76), ದಿನೇಶ್ ಸೆಲ್ವಮಣಿ (6.63), ಸತೀಶ್ ಸರವಣನ್‌ (6.47), ಸಂಜಯ್ ಕುಮಾರ್ ಎಸ್‌ (6.37), ರೂಬನ್ ವಿ (6.04), ಸಂತೋಷ್ ಎಂ (5.77) ಹಾಗೂ ಸುಬ್ರಮಣಿ ಎಂ (4.64) ಉತ್ತಮ ಪ್ರದರ್ಶನ ನೀಡಿದರು.

ಸಂಜಯ್ ಕುಮಾರ್‌, ಶ್ರೀಕಾಂತ್‌, ರಾಹುಲ್‌, ಸತೀಶ್‌, ಮಣಿಕಂಠನ್ ಎಂ, ಕಿಶೋರ್ ಕುಮಾರ್‌, ಸಂತೋಷ್ ಎಂ ಮತ್ತು ಸೂರ್ಯ ಸೆಮಿಫೈನಲ್‌ ಸುತ್ತಿನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡರು. ಬಾಲಕರ ವಿಭಾಗದಲ್ಲಿ ಫೈನಲ್ ಹಂತಕ್ಕೆ ಪ್ರವೇಶಿಸಿರುವ ನಾಲ್ವರಲ್ಲಿ ಮೂವರು ತಮಿಳುನಾಡಿನವರು. ಕಿಶೋರ್ ಕುಮಾರ್ ಜೊತೆ ತಯೀನ್ ಅರುಣ್ 9.17 ಮತ್ತು ಹರೀಶ್ ಪಿ 6.33 ಪಾಯಿಂಟ್ಸ್‌ ಗಳಿಸಿದರೆ ರಾಜು ಪೂಜಾರ 4.30 ಪಾಯಿಂಟ್ಸ್ ಕಲೆಹಾಕಿದರು. 

ಮಹಿಳೆಯರ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಕರ್ನಾಟಕದ ಸಿಂಚನಾ ಗೌಡ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಮಹಿಳೆಯರ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಕರ್ನಾಟಕದ ಸಿಂಚನಾ ಗೌಡ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಪುರುಷರ ವಿಭಾಗದಲ್ಲಿ ಸೆಮಿಫೈನಲ್ ಹಂತ ಪ್ರವೇಶಿಸಿದ ಮಣಿಕಂಠನ್ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಪುರುಷರ ವಿಭಾಗದಲ್ಲಿ ಸೆಮಿಫೈನಲ್ ಹಂತ ಪ್ರವೇಶಿಸಿದ ಮಣಿಕಂಠನ್ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್

ಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡ ಇರುವುದರಿಂದ ನನ್ನ ಪಾಲಿಗೆ ಸ್ಪರ್ಧೆ ಸವಾಲಿನದ್ದು. ಫೈನಲ್ ಪ್ರವೇಶಿಸಿರುವುದು ಖುಷಿಯ ವಿಷಯವಾಗಿದ್ದು ಶನಿವಾರ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದೇನೆ.

–ಸುಗರ್ ಶಾಂತಿ ಮಹಿಳಾ ವಿಭಾಗದ ಫೈನಲಿಸ್ಟ್‌

ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಅಲೆಗಳ ಅಬ್ಬರ ಕಡಿಮೆ ಇತ್ತು. ಯಾವುದೇ ಪರಿಸ್ಥಿತಿಯಲ್ಲೂ ಸ್ಥಿರ ಪ್ರದರ್ಶನ ನೀಡಿ ಪುರುಷರ ವಿಭಾಗದ ಪ್ರಶಸ್ತಿ ಗೆಲ್ಲುವುದು ನನ್ನ ಉದ್ದೇಶ.

–ಶ್ರೀಕಾಂತ್ ಡಿ ಪುರುಷರ ವಿಭಾಗದ ಫೈನಲಿಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT